ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಸಮೇತ ಪೂರ್ಣ ವರದಿ ನೀಡಿ: ಸಚಿವ ಬೈರತಿ ಬಸವರಾಜ ಸೂಚನೆ

ಪ್ರಗತಿ ಪರಿಶೀಲನಾ ಸಭೆ
Last Updated 30 ಜೂನ್ 2021, 16:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅಪೂರ್ಣವಾಗಿವೆ ಎನ್ನುವ ಆರೋಪವಿದೆ. ಮುಕ್ತಾಯವಾಗಿರುವ 21 ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಚಿತ್ರ ಸಮೇತ ನೀಡಬೇಕು’ ಎಂದು ಸಚಿವ ಬೈರತಿ ಬಸವರಾಜ ಅವರು ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಇಲ್ಲಿನ ಕನ್ನಡ ಭವನದಲ್ಲಿ ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ಎಷ್ಟು ಕಾಮಗಾರಿಗಳು ಬಾಕಿಯಿವೆ? ಯಾವ ಹಂತದಲ್ಲಿವೆ ಎನ್ನುವ ವರದಿಯನ್ನು ಮಾಧ್ಯಮಗಳಿಗೂ ನೀಡಿ’ ಎಂದರು.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ಇ–ಟಾಯ್ಲೆಟ್‌ ನಿರ್ಮಿಸಲಾಗಿದ್ದು, ಸಂಪೂರ್ಣ ಹಾಳಾಗಿವೆ. ಆ ಕಲ್ಪನೆಯೇ ಸರಿಯಿಲ್ಲ. ಅವುಗಳನ್ನು ಯಾರೂ ಬಳಸುತ್ತಿಲ್ಲ. ಅಲ್ಲದೆ, ಸಾಕಷ್ಟು ದುರುಪಯೋಗ ಸಹ ಆಗುತ್ತಿವೆ. ಇದರ ಬದಲು ಸುಲಭ ಶೌಚಾಲಯ ನಿರ್ಮಾಣ ಮಾಡಿ, ಅವುಗಳ ನಿರ್ವಹಣೆ ಖಾಸಗಿಯವರಿಗೆ ನೀಡುವಂತಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಚಿವ ಬೈರತಿ ಅವರು, ಅಧಿಕಾರಿಗಳಿಗೆ ಸೂಚಿಸಿದರು.

‘ಪಾಲಿಕೆ ವ್ಯಾಪ್ತಿಯ ಸುತಗಟ್ಟಿಯಲ್ಲಿ ಆರ್ಯಭಟ್‌ ಟೆಕ್‌ ಪಾರ್ಕ್‌ ನಿರ್ಮಾಣವಾಗಿದ್ದು, ಸಾಫ್ಟ್‌ವೇರ್‌ ಕಂಪನಿಗಳಿಗೆ ನೀಡಿದ್ದ ಜಾಗ ಐದು ವರ್ಷಗಳಾದರೂ ಪರಭಾರೆಯಾಗಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಕರೆಗೆ ₹55 ಲಕ್ಷ ದರ ನಿಗದಿಪಡಿಸಲಾಗಿದೆ. ಇದರ ಅನುಮತಿಗಾಗಿ ಹಣಕಾಸು ಇಲಾಖೆಗೆ ಕಳುಹಿಸಿದ್ದಕ್ಕಾಗಿ ಸಮಸ್ಯೆ ಎದುರಾಗಿದೆ. ಹತ್ತಾರು ವರ್ಷಗಳಿಂದ ಸಾರ್ವಜನಿಕರಿಂದ ಸಂದಾಯವಾಗಬೇಕಾದ ಕುಡಿಯುವ ನೀರಿನ ಬಾಕಿ ಹಣ ಮುನ್ನಾ ಮಾಡಬೇಕು. ಎಲ್‌ ಆ್ಯಂಡ್‌ ಟಿ ಕಂಪನಿಯಿಂದ 24x7 ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಬೇಕು’ ಎಂದು ಶೆಟ್ಟರ್‌, ನಗರಾಭಿವೃದ್ಧಿ ಸಚಿವರಲ್ಲಿ ವಿನಂತಿಸಿದರು.

‘ಹಳೇ ಹುಬ್ಬಳ್ಳಿ ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮಾರುಕಟ್ಟೆ ಅತಿಕ್ರಮಿಸಿರುವ ಕೆಲವರು ಕಾಮಗಾರಿಗೆ ಅಡ್ಡಿ ಪಡಿಸುತ್ತಿದ್ದಾರೆ. ಕಾರವಾರ ರಸ್ತೆ, ಗಬ್ಬೂರು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಜಾಗ ಅತಿಕ್ರಮಣ ಮಾಡಿಕೊಂಡು ಬಾಡಿಗೆ ನೀಡುತ್ತಿದ್ದಾರೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ, ಸಚಿವರ ಗಮನಕ್ಕೆ ತಂದರು.

‘ಸರ್ಕಾರಿ ಜಾಗ ಅತಿಕ್ರಮಣ ಸರಿಯಲ್ಲ. ಕೂಡಲೇ ಪೊಲೀಸರ ಸಹಕಾರದಿಂದ ಅಂತಹ ಕಟ್ಟಡ ತೆರವುಗೊಳಿಸಿ. ನೆಹರೂ ಮೈದಾನದ ಕಾಮಗಾರಿ ಗುತ್ತಿಗೆದಾರರಿಂದ ವಿಳಂಬವಾಗುತ್ತಿದೆ. ಅವರಿಗೆ ನೋಟಿಸ್‌ ನೀಡಿ ಅಥವಾ ಗುತ್ತಿಗೆ ರದ್ದುಪಡಿಸಿ ಬೇರೆಯವರಿಗೆ ನೀಡಿ. ಅಭಿವೃದ್ಧಿ ಕಾಮಗಾರಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ತೋಳನಕೆರೆ, ಉಣಕಲ್‌ ಕೆರೆಗೆ ಕೊಳಚೆ ನೀರು ಹರಿದು ಬರುತ್ತಿರುವುದನ್ನು ತಡೆದು ಶೀಘ್ರ ವರದಿ ನೀಡಬೇಕು’ ಎಂದು ಸಚಿವರು, ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಪೌರಾಡಳಿತ ನಿರ್ದೇಶಕಿ ಕಾವೇರಿ, ನಗರ ಯೋಜನಾ ಇಲಾಖೆ ನಿರ್ದೇಶಕ ಮುರಳಿ, ಜಿ.ಪಂ. ಸಿಇಒ ಡಾ.ಬಿ. ಸುಶೀಲಾ, ಹುಡಾ ಆಯುಕ್ತ ಎನ್.ಎಚ್. ಕುಮ್ಮಣ್ಣನವರ ಇದ್ದರು.

ಸಚಿವ ಶೆಟ್ಟರ್‌ ಅಸಮಾಧಾನ: ‘ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ಕಾಮಗಾರಿಗಳು ವಿಳಂಬವಾಗುತ್ತಿವೆ. ಅಲ್ಲದೆ, ಕಾಮಗಾರಿ ನಡೆಸಿದ ಸ್ಥಳದಲ್ಲಿರುವ ತ್ಯಾಜ್ಯವನ್ನು ಐದಾರು ತಿಂಗಳು ಅಲ್ಲಿಯೇ ಬಿಟ್ಟಿರುತ್ತಾರೆ. ಸಭೆ ನಡೆಸಿದಾಗ ಸಹಕಾರದಿಂದ ಕೆಲಸ ಮಾಡುತ್ತೇವೆ ಎನ್ನುತ್ತಾರೆ. ನಂತರ ಮನಸ್ಸಿಗೆ ಬಂದ ಹಾಗೆ ಕೆಲಸ ಮಾಡುತ್ತಾರೆ. ಇವರ ನಡುವೆ ಸಮನ್ವಯತೆ ಸಾಧಿಸಲು ಅಧಿಕಾರಿ ನೇಮಕ ಮಾಡಬೇಕಿದೆ’ ಎಂದು ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಸಹ ಧ್ವನಿಗೂಡಿಸಿದರು.

ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಬೇಕು. ಎಲ್ಲ ಇಲಾಖೆಗಳ ಜೊತೆ ಸಮನ್ವಯತೆ ಸಾಧಿಸಿ, ತ್ವರಿತವಾಗಿ ಕೆಲಸ ಪೂರ್ಣಗೊಳಿಸುವಂತೆ ಸಚಿವ ಬೈರತಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT