ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಜಿಪಿಆರ್‌ಎಸ್‌ ಸಮೀಕ್ಷೆ ವಿಳಂಬ: ಆತಂಕದಲ್ಲಿ ಬೀದಿಬದಿ ವ್ಯಾಪಾರಿಗಳು

ಅನುದಾನಕ್ಕಾಗಿ ಕಾಯುತ್ತಿರುವ ಪಾಲಿಕೆ
Published 26 ನವೆಂಬರ್ 2023, 6:40 IST
Last Updated 26 ನವೆಂಬರ್ 2023, 6:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಜಿಪಿಆರ್‌ಎಸ್‌ ಸಮೀಕ್ಷೆ ನಡೆಸಬೇಕೆಂಬ ಬೇಡಿಕೆ ಈವರೆಗೆ ಈಡೇರಿಲ್ಲ. ಇದರಿಂದ ವ್ಯಾಪಾರಸ್ಥರು ಅಭದ್ರತೆಯ ಆತಂಕದಲ್ಲಿದ್ದಾರೆ.  

ಜಿಪಿಆರ್‌ಎಸ್‌ ಸಮೀಕ್ಷೆ ಮೂಲಕ ಅವಳಿನಗರದ 20,000ಕ್ಕೂ ಹೆಚ್ಚು ವ್ಯಾಪಾರಿಗಳು, ತಾವು ದಶಕಗಳಿಂದ ವ್ಯಾಪಾರ ನಡೆಸುತ್ತಿರುವ ಸ್ಥಳದಲ್ಲೇ ವ್ಯಾಪಾರ ಮುಂದುವರಿಸಲು ಅವಕಾಶ ಸಿಗುತ್ತದೆ. ವ್ಯಾಪಾರ ಸ್ಥಳ ನಿಗದಿಯಾಗುವುದರಿಂದ ಪದೇ ಪದೇ ತೆರವು ಕಾರ್ಯಾಚರಣೆಯಂತಹ ದಬ್ಬಾಳಿಕೆಗೆ ಕಡಿವಾಣ ಬೀಳುತ್ತದೆ ಎಂಬ ವ್ಯಾಪಾರಿಗಳ ಆಶಯ ಕೈಗೂಡಿಲ್ಲ.

‘ವ್ಯಾಪಾರಿಗಳಿಂದ ₹150 ಶುಲ್ಕ ಸಂಗ್ರಹಿಸಿ, ಜಿಪಿಆರ್‌ಎಸ್‌ ಸರ್ವೆ ಮಾಡುವಂತೆ ಡೇನಲ್ಮ್‌ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ. ಇದರಿಂದ ವ್ಯಾಪಾರ ಮಾಡುತ್ತಿರುವ ಜಾಗದ ಮಾಹಿತಿ ಸಮೀಕ್ಷೆಯಲ್ಲಿ ದಾಖಲಾಗಿ, ಪ್ರಮಾಣಪತ್ರ, ಗುರುತಿನ ಚೀಟಿ ನೀಡಲು ಸಾಧ್ಯವಾಗುತ್ತದೆ. ಈ ಕುರಿತು ನಗರ ವ್ಯಾಪಾರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಪಾಲಿಕೆ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಲಾಗಿದೆ’ ಎಂದು ನಗರ ವ್ಯಾಪಾರ ಸಮಿತಿಯ ಸದಸ್ಯ ಇಸ್ಮಾಯಿಲ್‍ ಬಿಳಿಪಸಾರ್ ತಿಳಿಸಿದರು.

‘ಅತ್ಯಂತ ಹಳೆಯ ಮಾರುಕಟ್ಟೆಗಳಾದ ದುರ್ಗದಬೈಲ್‌, ಶಾ ಬಜಾರ್‌, ಬ್ರಾಡ್‌ವೇಯಲ್ಲಿ ಹಿಂದಿನಿಂದಲೂ ವ್ಯಾಪಾರ ಮಾಡುತ್ತಿರುವವರ ಬಳಿ ತೆರಿಗೆ ಪಾವತಿಸಿದ ದಾಖಲೆಗಳಿವೆ. ಇತ್ತೀಚೆಗೆ ಬೇರೆ ರಾಜ್ಯಗಳಿಂದ ಬಂದವರೂ ಇಲ್ಲಿ ವ್ಯಾಪಾರ ಮಾಡುತ್ತಿದ್ದು, ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಕೆಲವು ಅಂಗಡಿಕಾರರು ತಮ್ಮ ಅಂಗಡಿ ಮುಂದಿನ ಜಾಗದಲ್ಲಿ ವ್ಯಾಪಾರ ಮಾಡಲು ಇಂತಹವರಿಗೆ ಅವಕಾಶ ಮಾಡಿಕೊಟ್ಟು, ಹಣ ವಸೂಲಿ ಮಾಡುತ್ತಿದ್ದಾರೆ. ಸಮೀಕ್ಷೆಯಿಂದ ಇದು ಪತ್ತೆಯಾಗುತ್ತದೆ’ ಎಂದು ವಿವರಿಸಿದರು.

‘ಮುಖ್ಯವಾಗಿ, ಪಿಎಂ ಸ್ವನಿಧಿ ಸೇರಿದಂತೆ ಸರ್ಕಾರದ ಯೋಜನೆಗಳು ಅರ್ಹರಿಗೆ ಸೇರಬೇಕು. ಸಮೀಕ್ಷೆ ಮಾಡಿ, ಗುರುತಿನ ಚೀಟಿ ನೀಡಿದರೆ ಅರ್ಹ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಇನ್ನು ವಿಳಂಬ ಮಾಡದೆ, ಸಮೀಕ್ಷೆ ನಡೆಸಬೇಕು’ ಎಂದರು. 

ಪಾಲಿಕೆಯೇ ಶುಲ್ಕ ಸಂಗ್ರಹಿಸಲಿ: ‘ಗುತ್ತಿಗೆ ಆಧಾರದಲ್ಲಿ ಶುಲ್ಕ ಸಂಗ್ರಹಿಸುವ ಪದ್ಧತಿ ವಿರೋಧಿಸಿ ಎರಡು ವರ್ಷಗಳಿಂದ ಬೀದಿ ಬದಿ ವ್ಯಾಪಾರಿಗಳು ಶುಲ್ಕ ಪಾವತಿಸಿಲ್ಲ. ಇದರಿಂದ ಪಾಲಿಕೆಗೆ ನಷ್ಟವಾಗಿದೆ. ಗುರುತಿನ ಚೀಟಿ ವಿತರಿಸಿದ ಬಳಿಕ ಪಾಲಿಕೆಯೇ ವಾರ್ಷಿಕ ಶುಲ್ಕ ಸಂಗ್ರಹಿಸಲಿ. ಆ ಹಣದಲ್ಲಿ ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಿ’ ಎಂದು ಆಗ್ರಹಿಸಿದರು.   

ರಾಜ್ಯದಲ್ಲಿ ಎಲ್ಲಿಯೂ ಸಮೀಕ್ಷೆ ನಡೆಸಿಲ್ಲ. ಸರ್ಕಾರದ ಅನುದಾನ ಬಂದ ಕೂಡಲೇ ಸಮೀಕ್ಷೆಗೆ ಕ್ರಮ ವಹಿಸಲಾಗುವುದು
ರಮೇಶ ನೂಲ್ವಿ, ಸಮುದಾಯ ಸಂಘಟನಾಧಿಕಾರಿ (ಡೇ ನಲ್ಮ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT