ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ಬದಲು ಅಜ್ಜಿಯ ಸುಪರ್ದಿಗೆ ಮಕ್ಕಳು

‘ಗಾರ್ಡಿಯನ್‌ ಮತ್ತು ವಾರ್ಡ್ಸ್‌’ ಕಾಯ್ದೆಯಡಿ ಅರ್ಜಿ
Last Updated 22 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಧಾರವಾಡ: ಮಕ್ಕಳ ಸುಪರ್ದಿಯನ್ನು ತಾಯಿಯ ಬದಲು ಅಜ್ಜಿಗೆ ನೀಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಇಲ್ಲಿನ ಹೈಕೋರ್ಟ್‌ ವಿಭಾಗೀಯ ಪೀಠ ಗುರುವಾರ ಎತ್ತಿ ಹಿಡಿಯಿತು.

ತನ್ನ ಇಬ್ಬರು ಮಕ್ಕಳ ಸುಪರ್ದಿಯನ್ನು ತನಗೆ ನೀಡಬೇಕು ಎಂದು ಕೋರಿ ಕುಮುಟಾ ತಾಲ್ಲೂಕಿನ ಉಷಾ ಹಳ್ಳೇರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಉಷಾ ಅವರ ಕೋರಿಕೆಯನ್ನು ತಿರಸ್ಕರಿಸಿತು.

ಏನಿದು ಪ್ರಕರಣ?: ಉಷಾ ಮತ್ತು ತಿಮ್ಮಪ್ಪ 2007ರ ಡಿಸೆಂಬರ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿತ್ತು. ಮದುವೆಯ ನಂತರ ಕೆಲ ವರ್ಷಗಳ ಕಾಲ ಪತಿಯ ಮನೆಯಲ್ಲಿದ್ದ ಉಷಾ ನಂತರ ಕೌಟುಂಬಿಕ ಕಲಹದಿಂದಾಗಿ ತವರು ಮನೆ ಸೇರಿದ್ದರು. ನಂತರ ಪತಿ, ಪತ್ನಿ ಒಪ್ಪಿತ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಅಂತಿಮ ಹಂತದಲ್ಲಿದ್ದಾಗ 2015ರ ಏಪ್ರಿಲ್‌ನಲ್ಲಿ ರಸ್ತೆ ಅಪಘಾತದಲ್ಲಿ ಪತಿ ಸಾವಿಗೀಡಾಗಿದ್ದರು. ಅದರ ನಂತರ ವಿಚ್ಛೇದನ ಅರ್ಜಿ ಇತ್ಯರ್ಥಗೊಂಡಿತ್ತು.

ಇಬ್ಬರು ಮಕ್ಕಳು ಅಜ್ಜಿಯ ಮನೆಯಲ್ಲಿಯೇ (ತಿಮ್ಮಪ್ಪನ ತಾಯಿ) ಇದ್ದರು. ಪತಿಯ ಮರಣಾನಂತರ ಪರಿಹಾರದ ಜತೆಗೆ ಮಕ್ಕಳನ್ನು ತನ್ನ ಸುಪರ್ದಿಗೆ ನೀಡಬೇಕು ಎಂದು ‘ಗಾರ್ಡಿಯನ್‌ ಮತ್ತು ವಾರ್ಡ್ಸ್‌’ ಕಾಯ್ದೆಯಡಿ ಕುಮುಟಾ ಹಿರಿಯ ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮಕ್ಕಳನ್ನು ನ್ಯಾಯಾಲಯಕ್ಕೆ ಕರೆಯಿಸಿ, ಅವರ ಹೇಳಿಕೆ ದಾಖಲಿಸಲಾಗಿತ್ತು. ಅಲ್ಲಿ ಮಕ್ಕಳು ಅಜ್ಜಿಯೊಂದಿಗೆ ಇರುವುದಾಗಿ ತಿಳಿಸಿದ್ದರು.

ಹಿರಿಯ ಸಿವಿಲ್‌ ನ್ಯಾಯಾಲಯ ಮಕ್ಕಳ ಸುಪರ್ದಿಯನ್ನು ಅಜ್ಜಿ ಸೋಮಾ ಹಳ್ಳೇರ ಅವರಿಗೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಉಷಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಎದುರುಗಾರರ ಪರವಾಗಿ ಹರೀಶ ನಾಯ್ಕ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT