ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿಥಿ ಶಿಕ್ಷಕರ ನೇಮಕಾತಿ ಮಂದಗತಿ

ಸರ್ಕಾರಿ ಪ್ರೌಢಶಾಲೆ 131 ಶಿಕ್ಷಕ ಹುದ್ದೆ ಖಾಲಿ
ಬಿ.ಜೆ.ಧನ್ಯಪ್ರಸಾದ್‌
Published 16 ಜೂನ್ 2024, 6:48 IST
Last Updated 16 ಜೂನ್ 2024, 6:48 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು 131 ಖಾಲಿ ಇವೆ. ಶಾಲೆಗಳು ಆರಂಭವಾಗಿ 15 ದಿನಗಳು ಕಳೆದರೂ ಈ ಹುದ್ದೆಗಳಿಗೆ ಹಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ಇನ್ನೂ ನೇಮಕ ಮಾಡಿಲ್ಲ.

ಜಿಲ್ಲೆಯಲ್ಲಿ 112 ಸರ್ಕಾರಿ ಪ್ರೌಢಶಾಲೆಗಳು ಇವೆ. ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿವೆ. ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ಅತಿಥಿ ಶಿಕ್ಷಕರನ್ನು ಈವರೆಗೆ ನೇಮಕ ಮಾಡಿಕೊಳ್ಳದ ಶಾಲೆಗಳಲ್ಲಿ ಯಾವ ವಿಷಯದ ಹುದ್ದೆ ಖಾಲಿ ಇದೆಯೋ ಆ ವಿಷಯದ ಪಾಠ ಬೋಧನೆ ಆರಂಭವಾಗಿಲ್ಲ. ಗಣಿತ, ಇಂಗ್ಲಿಷ್‌, ವಿಜ್ಞಾನ ವಿಷಯಗಳ ಹುದ್ದೆಗಳು ಕೆಲವೆಡೆ ಖಾಲಿ ಇವೆ.

‘ನಮ್ಮ ಶಾಲೆಯಲ್ಲಿ ಗಣಿತ ವಿಷಯ ಶಿಕ್ಷಕ ಇಲ್ಲ. ಇದು ಕಠಿಣ ವಿಷಯ. ಶಿಕ್ಷಕರು ಲೆಕ್ಕ, ಪ್ರಮೇಯಗಳನ್ನು ಬಿಡಿಸಿ ವಿವರಿಸಿದಾಗ ಅರ್ಥವಾಗುತ್ತವೆ ಮತ್ತು ಮನದಟ್ಟಾಗುತ್ತವೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಗೆ ಜೂನ್‌ 3ರಂದು ಅನುಮೋದನೆ ನೀಡಿದೆ. ಮಾಸಿಕ ₹ 10,500 ಗೌರವ ಸಂಭಾವನೆ ನಿಗದಿಪಡಿಸಿದೆ. ಶೈಕ್ಷಣಿಕ ವರ್ಷದಲ್ಲಿ ಗರಿಷ್ಠ 10 ತಿಂಗಳವರೆಗೆ ಮಾತ್ರ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ವರ್ಷದ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದವರ ಪೈಕಿ ಹಲವರು ಈ ವರ್ಷವೂ ಕಾರ್ಯನಿರ್ವಹಿಸುವ ಆಕಾಂಕ್ಷೆ ಹೊಂದಿದ್ದಾರೆ. ಅಂಥವರು ಶಾಲೆಯ ಮುಖ್ಯಶಿಕ್ಷಕರಿಗೆ ವಿವರ ನೀಡಿದ್ದಾರೆ. ಆದರೆ, ಈವರೆಗೆ ನೇಮಕಾತಿ ಪತ್ರ ನೀಡಿಲ್ಲ.

‘ಎರಡು ವರ್ಷ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಇಂಗ್ಲಿಷ್‌ ವಿಷಯ ಬೋಧಿಸುತ್ತೇನೆ. ಈ ವರ್ಷ ಇನ್ನು ನೇಮಕಾತಿ ಪತ್ರ ನೀಡಿಲ್ಲ. ನೇಮಕ ತಡಮಾಡಿದರೆ ಕ್ರಿಯಾಯೋಜನೆಯಂತೆ ಪಾಠ ನಿರ್ವಹಣೆ ನಿಟ್ಟಿನಲ್ಲಿ ವೇಗವಾಗಿ ಬೋಧನೆ ಮಾಡಬೇಕಾಗುತ್ತದೆ. ಗೌರವ ಸಂಭಾವನೆ ಸ್ವಲ್ಪ ಹೆಚ್ಚಿಸಿದ್ದರೆ, 12 ತಿಂಗಳೂ ಸಂಭಾವನೆ ನೀಡಿದರೆ ಅನುಕೂಲವಾಗುತ್ತದೆ’ ಎಂದು ಆಕಾಂಕ್ಷಿಯೊಬ್ಬರು(ಅತಿಥಿ ಶಿಕ್ಷಕಿ) ತಿಳಿಸಿದರು.

ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆ, ಖಾಲಿ ಹುದ್ದೆ ಅಂಕಿಅಂಶ

ತಾಲ್ಲೂಕು;ಶಾಲೆ;ಖಾಲಿ ಹುದ್ದೆ

ಧಾರವಾಡ ಗ್ರಾಮೀಣ;23;15

ಧಾರವಾಡ ನಗರ;8;3

ಹುಬ್ಬಳ್ಳಿ ಗ್ರಾಮೀಣ;15;16

ಹುಬ್ಬಳ್ಳಿನಗರ;9;10

ಕಲಘಟಗಿ;21;32

ಕುಂದಗೋಳ;19;27

ನವಲಗುಂದ;17;28

ಒಟ್ಟು;112;131

‘ಜೂನ್‌ 15ರೊಳಗೆ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣ’ ಆಯಾ ಶಾಲೆಯ ಮುಖ್ಯಶಿಕ್ಷಕ ಮತ್ತು ಶಾಲಾಭಿವೃದ್ಧಿ ಸಮಿತಿಯವರು (ಎಸ್‌ಡಿಎಂಸಿ) ಅ‌ತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಾರೆ. ಕೆಲ ಶಾಲೆಗಳಲ್ಲಿ ಈಗಾಗಲೇ ನೇಮಕ ಮಾಡಿಕೊಂಡಿದ್ದಾರೆ. ಜೂನ್‌ 15ರೊಳಗೆ ಖಾಲಿ ಇರುವ ವಿಷಯ ಶಿಕ್ಷಕರ ಎಲ್ಲ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ ಆಗಲಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಾಲೆಯಲ್ಲಿ ಖಾಲಿ ಇರುವ ವಿಷಯದ ಹುದ್ದೆಗೆ ಅರ್ಜಿ ಸಲ್ಲಿಕೆಯಾಗಿರಲ್ಲ. ಸ್ಥಳೀಯರು ಲಭ್ಯ ಇಲ್ಲದಿದ್ದಲ್ಲಿ ಹೊರಗಡೆಯವರನ್ನು ನೇಮಕ ಮಾಡಿಕೊಳ್ಳಬೇಕು. ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆ ಖಾಲಿ ಹುದ್ದೆ ಅಂಕಿಅಂಶ ತಾಲ್ಲೂಕು;ಶಾಲೆ;ಖಾಲಿ ಹುದ್ದೆ; ಧಾರವಾಡ ಗ್ರಾಮೀಣ;23;15; ಧಾರವಾಡ ನಗರ;8;3; ಹುಬ್ಬಳ್ಳಿ ಗ್ರಾಮೀಣ;15;16; ಹುಬ್ಬಳ್ಳಿನಗರ;9;10; ಕಲಘಟಗಿ;21;32; ಕುಂದಗೋಳ;19;27; ನವಲಗುಂದ;17;28; ಒಟ್ಟು;112;131;

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT