ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಹನುಮಾನ್‌ ಧ್ವಜಕ್ಕೆ ಅವಮಾನ ಆರೋಪ; ಬಿಜೆಪಿ ಪ್ರತಿಭಟನೆ

Published 29 ಜನವರಿ 2024, 7:30 IST
Last Updated 29 ಜನವರಿ 2024, 7:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮಾನ್‌ ಧ್ವಜವನ್ನು ಕಾಂಗ್ರೆಸ್ ಕೆಳಗಿಳಿಸಿ ಹರಿದುಹಾಕುವ ಮೂಲಕ ಅವಮಾನ ಮಾಡಿದೆ ಎಂದು ಆರೋಪಿಸಿ ಹುಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಿನಿವಿಧಾನ ಸೌಧದಲ್ಲಿ ಸಮಾವೇಶಗೊಂಡ ಅವರು, ಕಾಂಗ್ರೆಸ್ ಸರ್ಕಾರದ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗುತ್ತಿದೆ. ಸಿಎಂ ಸೇರಿ ಅನೇಕ ಸಚಿವರು ಸ್ಪರ್ಧಾತ್ಮಕವಾಗಿ ತುಷ್ಟೀಕರಣದ ಹೇಳಿಕೆ ನೀಡುತ್ತಿದ್ದಾರೆ. ಕೆರಗೋಡಿನಲ್ಲಿ ಕಾನೂನು ಬಾಹಿರವಾಗಿ ನಾವು ಹನುಮಾನ್‌ ಧ್ವಜ ಹಾರಿಸಿರಲಿಲ್ಲ. ಪಂಚಾಯ್ತಿ ಅನುಮತಿ ಪಡೆದು ಧ್ವಜ ಹಾರಿಸಲಾಗಿತ್ತು. ಆದರೆ, ಹಿಂದೂ ವಿರೋಧಿ ಸಿದ್ದರಾಮಯ್ಯ ಅವರು ಪೊಲೀಸ್ ದುರ್ಬಳಕೆ ಮಾಡಿಕೊಂಡು, ಹನುಮಾನ್‌ ಧ್ವಜವನ್ನು ಕೆಳಗಿಳಿಸಿದ್ದಾರೆ' ಎಂದು ಆರೋಪಿಸಿದರು.

'ಮಂಡ್ಯದಲ್ಲಿ ಒಂದು ಹನುಮಾನ್‌ ಧ್ವಜ ಕೆಳಗಿಳಿಸಿರಬಹುದು. ಅದಕ್ಕೆ ಪ್ರತಿಯಾಗಿ ಸಾವಿರಾರು, ಲಕ್ಷಾಂತರ ಧ್ವಜಗಳು ರಾಜ್ಯದಲ್ಲಿ ಹಾರಾಡಬಹುದು. ಕುಚೋದ್ಯತನದ ಹೇಳಿಕೆ, ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಕೋಮುಗಲಭೆ ಸೃಷ್ಟಿಸುವ ಯತ್ನಕ್ಕೆ ಮುಂದಾಗಬೇಡಿ' ಎಂದು ಎಚ್ವರಿಕೆ ನೀಡಿದರು.

'ರಾಜ್ಯದಲ್ಲಿ ಸಾಕಷ್ಟು ಕಡೆ ಕಾನೂನು ಬಾಹಿರವಾಗಿ ದರ್ಗಾ ನಿರ್ಮಿಸಲಾಗಿದೆ. ಅವುಗಳನ್ನು ತೆರವುಗೊಳಿಸಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ನಾವು ಸಹ ಆ ಕಾರ್ಯಕ್ಕೆ ಕೈ ಜೋಡಿಸುತ್ತೇವೆ' ಎಂದರು.

ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, 'ಕೆರಗೋಡು ಗ್ರಾಮ ಪಂಚಾಯ್ತಿ ಆವರಣದಲ್ಲಿ ಹನುಮಾನ್‌ ಧ್ವಜ ಹಾರಿಸುವ ಕುರಿತು ಠರಾವು ಪಾಸ್ ಮಾಡಲಾಗಿತ್ತು. ಅದರನ್ವಯ ಧ್ವಜ ಹಾರಿಸಲಾಗಿತ್ತು. ಆದರೆ, ಹಿಂದೂ ವಿರೋಧಿ ಕಾಂಗ್ರೆಸ್ ಪೊಲೀಸರ ಮುಖಾಂತರ ಧ್ವಜವನ್ನು ಕೆಳಗಿಳಿಸಿ, ಹಿಂದೂಗಳ ಭಾವನೆಯನ್ನು ಹತ್ತಿಕ್ಕುವ ಯತ್ನ ಮಾಡಿದೆ' ಎಂದು ಆರೋಪಿಸಿದರು.

ತಿಪ್ಪಣ್ಣ ‌ಮಜ್ಜಗಿ, ಅಶೋಕ ಕಾಟವೆ, ಉಮಾ ಮುಕುಂದ, ಮಹೇಂದ್ರ ಕೌತಾಳ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT