ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ವಿಳಂಬ; ಜಲಮಂಡಳಿಗೆ ಸದಸ್ಯರ ತಪರಾಕಿ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕೊನೆಯ ಸಾಮಾನ್ಯ ಸಭೆ
Last Updated 29 ಜನವರಿ 2019, 13:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರಕ್ಕೆ ಜಲಮಂಡಳಿಯು ನೀರು ಪೂರೈಸುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರು ಮಂಗಳವಾರ ನಡೆದ ಪಾಲಿಕೆಯ ಪ್ರಸಕ್ತ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ಜಲಮಂಡಳಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಗಮನ ಸೆಳೆಯುವ ಸೂಚನೆ ಮಂಡಿಸಿದ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಅವಳಿ ನಗರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಎಂಟು ಹತ್ತು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂದರು. ಇದಕ್ಕೆ ದನಿಗೂಡಿಸಿದ ಪಾಂಡುರಂಗ ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ, ಗಣೇಶ ಟಗರಗುಂಟಿ, ಅಲ್ತಾಫ್‌ ಕಿತ್ತೂರ, ಸಂಜಯ ಕಪಟಕರ ಹಾಗೂ ಶಿವು ಹಿರೇಮಠ ಅವರು ಪ್ರತಿ ಬಾರಿ ಎಷ್ಟು ನೀರು ಪೂರೈಕೆ ಮಾಡುತ್ತೀರಿ ಮಾಹಿತಿ ಕೊಡಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಕರಿಯಪ್ಪ, 7.5 ಲಕ್ಷ ಜನಸಂಖ್ಯೆ ಹೊಂದಿರುವ ಹುಬ್ಬಳ್ಳಿಗೆ 85ರಿಂದ 86 ಎಂಎಲ್‌ಡಿ ಹಾಗೂ 3.8 ಲಕ್ಷ ಜನಸಂಖ್ಯೆ ಹೊಂದಿರುವ ಧಾರವಾಡಕ್ಕೆ 77 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಬವಣೆ ಜಾಸ್ತಿ ಇರುವುದರಿಂದ ಧಾರವಾಡಕ್ಕೆ ಪೂರೈಸುವ ನೀರಿನ ಪ್ರಮಾಣದಲ್ಲಿ 15 ಎಂಎಲ್‌ಡಿ ನೀರನ್ನು ಕಡಿತ ಮಾಡಿ ಹುಬ್ಬಳ್ಳಿಗೆ ಹರಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಧಾರವಾಡದ ಪಾಲಿಕೆ ಸದಸ್ಯೆ ನಿರ್ಮಲಾ ಜವಳಿ, ‘ನಮ್ಮ ವಾರ್ಡ್‌ಗೇ ಸರಿಯಾಗಿ ನೀರು ಸಿಗುತ್ತಿಲ್ಲ. ಮೊದಲು ಸಮರ್ಪಕವಾಗಿ ನೀರು ಕೊಡಿ’ ಎಂದು ಒತ್ತಾಯಿಸಿದರು.

ಒಂದು ಹಂತದಲ್ಲಿ ನೀರಿನ ವಿಷಯವಾಗಿ ಹುಬ್ಬಳ್ಳಿ ಹಾಗೂ ಧಾರವಾಡದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರುವ ಸೂಚನೆ ದೊರೆತಾದ ಮಧ್ಯಪ್ರವೇಶಿಸಿದ ಪಾಂಡುರಂಗ ಪಾಟೀಲ, ನೀರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಸಲ್ಲದು. ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆ ತರುವ ಮೂಲಕ ಜಗತ್ತಿಗೆ ಮಾದರಿಯಾಗಲು ಹೊರಟವರು ನಾವು. ಈಗ ನೋಡಿದರೆ 10 ದಿನಗಳಿಗೊಮ್ಮೆ ನೀರು ಕೊಡಲೂ ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ. ಈ ಸ್ಥಿತಿಗೆ ನಮ್ಮನ್ನು ತಂದಿಟ್ಟಿದ್ದಕ್ಕಾಗಿ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಜಲಮಂಡಳಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ನೃಪತುಂಗ ಬೆಟ್ಟದ ಬಳಿ ಇರುವ ಜಲಸಂಗ್ರಹಾಗಾರದಲ್ಲಿ ಮಲಪ್ರಭಾ ನದಿ ನೀರನ್ನು ಸಂಗ್ರಹಿಸಿ ಇಡೀ ಹುಬ್ಬಳ್ಳಿಗೆ ನೀರು ಕೊಡಬಹುದು. ಆದರೆ, ಅಧಿಕಾರಿಗಳು ಅದನ್ನು ಬಳಸಿಕೊಳ್ಳುತ್ತಿಲ್ಲ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಪಾಲಿಕೆ ಸಾಲ ಮಾಡಿ ಜಲಮಂಡಳಿಗೆ ಹಣ ನೀಡಿದೆ. ಆದರೂ, ನೀರು ಕೊಡಿ ಎಂದು ನಾವು ನಿಮ್ಮ ಬಳಿ ಬೇಡಿಕೊಳ್ಳುವಂತಾಗಿದೆ’ ಎಂದು ಟೀಕಿಸಿದರು.

ಇದಕ್ಕೆ ಸಮಜಾಯಿಷಿ ನೀಡಿದ ಜಲಮಂಡಳಿ ಎಂಜಿನಿಯರ್‌ಗಳಾದ ಕರಿಯಪ್ಪ ಹಾಗೂ ಸಂಶಿ, ‘ಪೈಪ್‌ಲೈನ್‌ ದುರಸ್ತಿ ಇದ್ದುದರಿಂದ ನೀರು ಪೂರೈಕೆಯಲ್ಲಿ 48 ಗಂಟೆ ವಿಳಂಬವಾಗಿದೆ. ಅಲ್ಲದೇ, ಅಮ್ಮಿನಬಾಯಿ ಗ್ರಾಮದ ಜಾಕ್‌ವೆಲ್‌ನಿಂದ ನೀರೆತ್ತುವಾಗ ಹಲವು ಬಾರಿ ವಿದ್ಯುತ್‌ ಕೈಕೊಟ್ಟಿತು. ಹೀಗಾಗಿ ತಡವಾಗಿದೆ. ಮುಂದಿನ ಬಾರಿ ನೀರು ಪೂರೈಕೆ ಸಂದರ್ಭದಲ್ಲಿ ಸುಧಾರಣೆ ಕಾಣಲಿದೆ’ ಎಂದು ಭರವಸೆ ನೀಡಿದರು.

ಸದಸ್ಯರು ಹಾಗೂ ಅಧಿಕಾರಿಗಳ ವಾದವನ್ನು ಆಲಿಸಿದ ಮೇಯರ್‌ ಸುಧೀರ ಸರಾಫ, ‘ಅವಳಿ ನಗರದ ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸುವ ಸಂಬಂಧ ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ಕರೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT