ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ ಮಾಹಿತಿಗೆ ‘ಜಿಯೊ ಟ್ಯಾಗಿಂಗ್’: ಹುಬ್ಬಳ್ಳಿ–ಧಾರವಾಡ ಪಾಲಿಕೆ ತಂತ್ರ

ಗುಂಡಿ ಮುಚ್ಚುವ ಹೆಸರಿನಲ್ಲಿ ಹಣ ಪೋಲು ತಡೆಯಲು ಪಾಲಿಕೆ ತಂತ್ರ
Last Updated 29 ಜುಲೈ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಒಮ್ಮೆ ಮುಚ್ಚಿದ ರಸ್ತೆ ಗುಂಡಿಗಳನ್ನೇ ಮತ್ತೆಮತ್ತೆ ಮುಚ್ಚುವುದಕ್ಕೆ ಬೊಕ್ಕಸದಿಂದ ಅನಗತ್ಯವಾಗಿ ಹಣ ಪೋಲಾಗುವುದನ್ನು ತಡೆಯಲು ಮುಂದಾಗಿರುವ ಮಹಾನಗರ ಪಾಲಿಕೆಯು,‘ಜಿಯೊ ಟ್ಯಾಗಿಂಗ್’ ತಂತ್ರಜ್ಞಾನ ಅನುಸರಿಸಲು ಮುಂದಾಗಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಹುಬ್ಬಳ್ಳಿ– ಧಾರವಾಡದ ರಸ್ತೆಗಳ ತಗ್ಗು– ಗುಂಡಿಗಳನ್ನು ಮುಚ್ಚಲು ಪಾಲಿಕೆಯು ಲಕ್ಷಾಂತರ ರೂಪಾಯಿ ಹಣ ಸುರಿಯುತ್ತದೆ. ಆದರೆ, ಮುಂದಿನ ವರ್ಷದ ಹೊತ್ತಿಗೆ, ಮತ್ತೆ ಅದೇ ಗುಂಡಿಗಳನ್ನು ಮುಚ್ಚಲು ಮತ್ತಷ್ಟು ಹಣ ವ್ಯಯವಾಗುತ್ತಿದೆ. ದುರಸ್ತಿ ನೆಪದಲ್ಲಿ ಈ ರೀತಿ ಯಾರೋ ಜೇಬು ತುಂಬಿಸಿಕೊಳ್ಳುವುದನ್ನು ತಡೆಯಲು ಪಾಲಿಕೆ ಇಂತಹ ಕ್ರಮವನ್ನು ಅನುಸರಿಸುತ್ತಿದೆ.

ಏನಿದು ಜಿಯೊ ಟ್ಯಾಗಿಂಗ್: ರಸ್ತೆಯಲ್ಲಿರುವ ತಗ್ಗು– ಗುಂಡಿಗಳ ಚಿತ್ರವನ್ನು ಜಿಪಿಎಸ್‌ ವ್ಯವಸ್ಥೆ ಇರುವ ‘ನೋಟ್ ಕ್ಯಾಮ್’ ಎಂಬ ಆ್ಯಪ್‌ನಲ್ಲಿ ಸೆರೆಹಿಡಿಯಲಾಗುತ್ತದೆ. ಅದರಲ್ಲಿ ದಿನಾಂಕ, ಸಮಯ, ಸ್ಥಳ, ಅಕ್ಷಾಂಶ, ರೇಖಾಂಶದ ಮಾಹಿತಿ ದಾಖಲಾಗುತ್ತದೆ. ಇದೇ ರೀತಿ ಅವಳಿನಗರದಲ್ಲಿರುವ ರಸ್ತೆಗಳ ತಗ್ಗು–ಗುಂಡಿಗಳ ಚಿತ್ರಗಳನ್ನು ತೆಗೆಯಲಾಗುತ್ತದೆ. ಇದರಿಂದಾಗಿ ಯಾವ ರಸ್ತೆಯಲ್ಲಿ, ಎಷ್ಟು ಗುಂಡಿಗಳಿವೆ ಎಂಬುದು ನಿಖರವಾಗಿ ಗೊತ್ತಾಗುತ್ತದೆ.

‘ದುರಸ್ತಿಗೂ ಮುಂಚೆ ರಸ್ತೆಗಳ ತಗ್ಗು– ಗುಂಡಿಗಳನ್ನು ಸಮೀಕ್ಷೆ ಮಾಡುವಾಗ, ನಂತರ ಮುಚ್ಚುವಾಗಲೂ ಜಿಯೊ ಟ್ಯಾಗಿಂಗ್ ಮಾಡಲಾಗುವುದು. ವಾರ್ಡ್‌ಗಳ ಮಟ್ಟದಲ್ಲಿರುವ ಕಿರಿಯ/ಸಹಾಯಕ ಎಂಜಿನಿಯರ್‌ಗಳು ಈ ಕೆಲಸ ಮಾಡಲಿದ್ದಾರೆ. ಇದರಿಂದಾಗಿ, ಗುತ್ತಿಗೆದಾರರು ಎಲ್ಲೆಲ್ಲಿ ಗುಂಡಿಗಳನ್ನು ಮುಚ್ಚಿದ್ದಾರೆ ಎಂಬುದು ನಿರ್ದಿಷ್ಟವಾಗಿ ಗೊತ್ತಾಗುತ್ತದೆ’ ಎಂದು ಪಾಲಿಕೆಯ ಉತ್ತರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಠಲ್ ತುಬಾಕೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ತಗ್ಗು–ಗುಂಡಿಗಳ ದುರಸ್ತಿಗಾಗಿ ವಲಯಗಳ ಮಟ್ಟದಲ್ಲೇ ಟೆಂಡರ್ ಕರೆಯಲು ಸೂಚನೆ ನೀಡಲಾಗಿದೆ. ಮಳೆ ಆಗಾಗ ಬರುತ್ತಿರುವುದರಿಂದ ದುರಸ್ತಿ ಮಾಡಿದರೂ, ಪ್ರಯೋಜನವಾಗುವುದಿಲ್ಲ ಎಂಬ ಕಾರಣಕ್ಕಾಗಿ, ತೀರಾ ಸಮಸ್ಯೆ ಇರುವ ಹಳೇ ಹುಬ್ಬಳ್ಳಿ ಸೇರಿದಂತೆ ಕೆಲ ರಸ್ತೆಗಳಿಗೆ ತಾತ್ಕಾಲಿಕವಾಗಿ ಸಿಮೆಂಟ್ ವೆಟ್ ಮಿಕ್ಸ್‌ ಹಾಕಲಾಗುತ್ತಿದೆ. ಮಳೆ ನಿಂತ ನಂತರ ಡಾಂಬರು ಹಾಕಲಾಗುವುದು’ ಎಂದು ಪಾಲಿಕೆಯ ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ವಿಜಯಕುಮಾರ್ ಹೇಳಿದರು.

ರಸ್ತೆ ದುರಸ್ತಿಗೆ ₹3.13 ಕೋಟಿ ವೆಚ್ಚ

ಮಳೆಯಿಂದಾಗಿ ಅವಳಿನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಈಗಾಗಲೇ ಪಾಲಿಕೆಯು ₹3.13 ಕೋಟಿ ವೆಚ್ಚದಲ್ಲಿ ಟೆಂಡರ್‌ ಕರೆದಿದೆ. ಕೆಲವೆಡೆ ಈಗಾಗಲೇ ವರ್ಕ್ ಆರ್ಡರ್‌ಗಳನ್ನು ನೀಡಿದೆ.

‘ರಸ್ತೆ ತಗ್ಗು– ಗುಂಡಿಗಳನ್ನು ಮುಚ್ಚುವುದಕ್ಕಾಗಿ ಹುಬ್ಬಳ್ಳಿ ಉತ್ತರ ವಿಭಾಗದಲ್ಲಿ ₹1.06 ಕೋಟಿ ಹಾಗೂದಕ್ಷಿಣ ವಿಭಾಗದಲ್ಲಿ ₹56 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದು, ಕೆಲವೆಡೆ ವರ್ಕ್ ಆರ್ಡರ್‌ ಕೂಡ ನೀಡಲಾಗಿದೆ. ಧಾರವಾಡದಲ್ಲಿ ₹1.51 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದೆ. ಜೊತೆಗೆ, ತಗ್ಗು– ಗುಂಡಿ ಮುಚ್ಚುವ ಮಾಡುವ ಯಂತ್ರವನ್ನು ₹1.50 ಲಕ್ಷದಲ್ಲಿ ರಿಪೇರಿ ಮಾಡಿಸಲಾಗುತ್ತಿದೆ’ ಎಂದು ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ಇ. ತಿಮ್ಮಪ್ಪ ಹೇಳಿದರು.

ರಸ್ತೆ ಗುಂಡಿಗಳನ್ನು ಮುಚ್ಚುವುದರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಿಯೊ ಟ್ಯಾಗಿಂಗ್ ಮಾಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT