ಶನಿವಾರ, ಮೇ 28, 2022
21 °C
ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯ

ಹುಬ್ಬಳ್ಳಿ: ಯೋಗದಿಂದ ಆರೋಗ್ಯ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಯೋಗ ಸಾಧನೆಯಿಂದ ಮನುಷ್ಯನಿಗೆ ಆರೋಗ್ಯ ಭಾಗ್ಯ ಪ್ರಾಪ್ತವಾಗುತ್ತದೆ. ಒತ್ತಡದ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಯೋಗ ಮಾಡಬೇಕು’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜಗದ್ಗುರು ರಂಭಾಪುರೀಶ ಸಾಂಸ್ಕತಿಕ ಸಂಘ ಆಯೋಜಿಸಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ಆಧುನಿಕ ಯುಗದಲ್ಲಿ ಮನುಷ್ಯನ ಜೀವನ ಯಾಂತ್ರಿಕವಾಗಿದೆ. ನಿತ್ಯ ಒತ್ತಡದಲ್ಲಿ ಬದುಕುತ್ತಿದ್ದಾನೆ. ಹಣ ಗಳಿಕೆಗಾಗಿ ಆರೋಗ್ಯವನ್ನು ನಿರ್ಲಕ್ಷಿಸಿ ಕೆಲಸ ಮಾಡುತ್ತಿದ್ದಾನೆ’ ಎಂದರು.

‘ಮನುಷ್ಯನ ಆರೋಗ್ಯ ಕೆಟ್ಟಾಗ ಎಷ್ಟೇ ಹಣ ಖರ್ಚು ಮಾಡಿದರೂ ಕಳೆದು ಹೋದ ಆರೋಗ್ಯ ಮತ್ತೆ ದೊರಕದು. ಪ್ರಾಚೀನ ಕಾಲದಿಂದಲೂ ಯೋಗ ಸಾಧನೆಗೆ ಮಹತ್ವ ನೀಡಲಾಗಿದೆ. ರೋಗದಿಂದ ಮುಕ್ತರಾಗಲು ಹಾಗೂ ಸದೃಢ ಶರೀರಕ್ಕಾಗಿ ಯೋಗ ಸಾಧನೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ‘ನಿತ್ಯ ಅರ್ಧ ಗಂಟೆ ಯೋಗವನ್ನು ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಸಂಪತ್ತು ಮತ್ತು ಅಧಿಕಾರವಿದ್ದೂ, ಆರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥ’ ಎಂದರು.

ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ‘ಆಧುನಿಕತೆಗೆ ಮಾರು ಹೋಗಿರುವ ಮನುಷ್ಯ ತನ್ನ ಸಂಸ್ಕತಿಯನ್ನು ಮರೆಯುತ್ತಿದ್ದಾನೆ. ಆದಿಕಾಲದಲ್ಲಿ ಋಷಿ ಮುನಿಗಳು ಯೋಗ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಯೋಗಕ್ಕೆ ಜಾತಿ–ಮತದ ಬೇಧವಿಲ್ಲ. ಎಲ್ಲರೂ ಯೋಗದಲ್ಲಿ ಸಾಧನೆ ಮಾಡಬಹುದು’ ಎಂದು ಹೇಳಿದರು.

ಯೋಗ ಕೇಂದ್ರದ ಮುಖ್ಯಸ್ಥ ಡಾ. ಪಂಚಲಿಂಗಪ್ಪ ಕವಲೂರು ಯೋಗಾಭ್ಯಾಸದ ಪ್ರಯೋಜನಗಳ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಿಗೆಯ್ಯ ಹಿರೇಮಠ ನಿರೂಪಣೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.