ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಧಾರಾಕಾರ ಮಳೆಗೆ ಹೊಲ–ಗದ್ದೆ ಜಲಾವೃತ

ಎರಡು ತಾಸು ರಸ್ತೆ ಸಂಪರ್ಕ ಕಡಿತ; ಸಂಜೆ ಇಳಿಮುಖವಾದ ಮಳೆ
Last Updated 21 ಮೇ 2022, 4:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲ್ಲೂಕಿನ ಬೆಣ್ಣೆಹಳ್ಳ ತುಂಬಿ ಹರಿದಿದ್ದರಿಂದ ಮಂಟೂರು, ಭಂಡಿವಾಡ, ನಾಗರಹಳ್ಳಿ, ಹೀರೇನರ್ತಿ, ಚಿಕ್ಕನರ್ತಿ ಗ್ರಾಮಗಳ ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ.

ಶುಕ್ರವಾರ ಮಧ್ಯಾಹ್ನ ಭಂಡಿವಾಡ, ನಾಗರಹಳ್ಳಿಯಲ್ಲಿನ ಬೆಣ್ಣೆಹಳ್ಳದ ಉಪ ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿದಿದ್ದವು. ಇದರಿಂದಾಗಿ ಹುಬ್ಬಳ್ಳಿ-ಅಣ್ಣಿಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಾಗರಹಳ್ಳಿ ಗ್ರಾಮದ ಸೇತುವೆ ಮೇಲೆ ಎರಡು ಅಡಿ ನೀರು ನಿಂತಿತ್ತು. ಚಿಕ್ಕನರ್ತಿಯಿಂದ ಹುಬ್ಬಳ್ಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ನೀರು ನಿಂತಿದ್ದರಿಮದ ಎರಡು ತಾಸು ರಸ್ತೆ ಸಂಪರ್ಕ ಸ್ಥಗಿತವಾಗಿತ್ತು. ಮಂಟೂರಿನ ಜನತಾ ಪ್ಲಾಟ್‌ನ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಸಂಜೆ ಮಳೆ ಪ್ರಮಾಣ ಕಡಿಮೆಯಾಗಿ ಹಳ್ಳದ ಹರಿವು ಇಳಿಮುಖವಾದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.

ಬಿತ್ತನೆಗೆ ಉಳುಮೆ ಮಾಡಿದ ಸಾವಿರಾರು ಎಕರೆ ಹೊಲ–ಗದ್ದೆಗಳು ಜಲಾವೃತಗೊಂಡವು. ಹೊಲದ ಮಧ್ಯೆ ಅಲ್ಲಲ್ಲಿ ಕಟ್ಟಿದ್ದ ಬದುವಿನ ಕಟ್ಟೆಗಳು ಒಡೆದಿವೆ. ನಾಗರಹಳ್ಳಿಯ ಕೆರೆ ತುಂಬಿ ಹರಿದ ರಭಸಕ್ಕೆ ಕಾಲುವೆಯ ಬದು ಕೊಚ್ಚಿ ಹೋಗಿದೆ. ಹೊಲದಲ್ಲಿ ಸಂಗ್ರಹಿಸಿಟ್ಟಿದ್ದ ಬಣವೆಗಳು ನೀರಿನಿಂದ ಹಾಳಾಗಿವೆ. ಭಂಡಿವಾಡದ ಅಡವಿ ಸಿದ್ಧೇಶ್ವರ ಗುಡಿ ಜಲಾವೃತವಾಗಿದ್ದು, ಸಂಪರ್ಕ ಕಡಿತವಾಗಿದೆ. ಅಲ್ಲಿಯ ಎರಡು ಮಣ್ಣಿನ ಮನೆಗಳು ಭಾಗಶಃ ಕುಸಿದಿವೆ. ಗಾಮನಗಟ್ಟಿ ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾದ ತರಕಾರಿ ಹಾಗೂ ಸೊಪ್ಪಿನ ಬೆಳೆ ಹಾಳಾಗಿವೆ.

‘ಸಾವಿರಾರು ರೂಪಾಯಿ ಖರ್ಚು ಮಾಡಿ ಬದು ನಿರ್ಮಿಸಲಾಗಿತ್ತು. ಮಳೆ ನೀರಿಗೆ ಕೊಚ್ಚಿ ಹೋಗಿವೆ. ಜಾನುವಾರುಗಳಿಗೆ ಸಂಗ್ರಹಿಸಿಟ್ಟ ಮೇವು ಸಹ ಹಾಳಾಗಿದೆ. ರೈತರ ಕಡೆ ಸರ್ಕಾರ ಗಮನಹರಿಸಬೇಕು’ ಎಂದು ಭಂಡಿವಾಡ ಗ್ರಾಮದ ನಿವಾಸಿ ದಾವಲಸಾಬ್ ಮುತ್ತುಖಾನ್ ಮನವಿ ಮಾಡಿದರು.

ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು, ತಾಲ್ಲೂಕಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಅಹವಾಲು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಹಾಗೂ ಮಳೆಯಿಂದ ನಷ್ಟಕ್ಕೊಳಗಾದ ಕುಟುಂಬಕ್ಕೆ ಶೀಘ್ರ ಪರಿಹಾರ ವಿತರಿಸುವ ಭರವಸೆ ನೀಡಿದರು. ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಇದ್ದರು‌.

ಹಾನಿಯ ಸಮೀಕ್ಷೆ: ಮುನೇನಕೊಪ್ಪ
‘ತುಪ್ಪರಿಹಳ್ಳ ಸಮಸ್ಯೆಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಬೆಣ್ಣೆಹಳ್ಳದ ಸಮಸ್ಯೆಗೂ ಶಾಶ್ವತ ಪರಿಹಾರ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಅಕಾಲಿಕ ಮಳೆಯಿಂದ ಜಿಲ್ಲೆಯಾದ್ಯಂತ ಸಾಕಷ್ಟು ಹಾನಿಯಾಗಿದ್ದು, ಈ ಕುರಿತು ಅಧಿಕಾರಿಗಳು ಶನಿವಾರದಿಂದಲೇ ಸಮೀಕ್ಷೆ ಆರಂಭಿಸಲಿದ್ದಾರೆ. ವರದಿ ಬಂದ ತಕ್ಷಣ ಸಂತ್ರಸ್ತರ ಖಾತೆಗೆ ಪರಿಹಾರ ಮೊತ್ತ ಜಮಾ ಆಗಲಿದೆ’ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT