ಧಾರವಾಡ: ‘ಜಿಲ್ಲೆಯಲ್ಲಿರುವ ಅಶಕ್ತ, ಮಾಲೀಕರಿಲ್ಲದ ಹಾಗೂ ವಯಸ್ಸಾದ ಪ್ರಾಣಿಗಳ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಅವಳಿ ನಗರದ ನಡುವಿನ ವಿಶಾಲ ಪ್ರದೇಶದಲ್ಲಿ ಪ್ರಾಣಿಗಳ ಆಶ್ರಯ ತಾಣ ಆರಂಭಿಸಲು ಪ್ರಸ್ತಾವ ಸಲ್ಲಿಸಿ’ ಎಂದು ಪಶುಪಾಲನಾ ಇಲಾಖೆಗೆ ಜಿಲ್ಲಾ ಪ್ರಾಣಿದಯಾ ಸಂಘದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅವಳಿ ನಗರದ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಶಕ್ತ, ರೋಗಪೀಡಿತ ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗುತ್ತಾರೆ. ಇದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಎಸ್‌ಆರ್ ನೆರವಿನಲ್ಲಿ ಆಶ್ರಯ ತಾಣ ನಿರ್ಮಾಣ, ಪಶು ಆಂಬುಲೆನ್ಸ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿ ರಾಜ್ಯ ಸರ್ಕಾರ, ಎರಡು ಸರ್ಕಾರಿ ಗೋಶಾಲೆ ಆರಂಭಿಸಲು ಅನುಮೋದನೆ ನೀಡಿದೆ. ಮಾದನಬಾವಿಯಲ್ಲಿ ಗೋಶಾಲೆ ಪೂರ್ಣಗೊಳ್ಳುತ್ತಿದ್ದು, ತಕ್ಷಣ ಆರಂಭಿಸಲು ಕ್ರಮಕೈಗೊಳ್ಳಬೇಕು. ಪರಸಾಪುರ ಗೋಶಾಲೆ ನಿರ್ಮಾಣ ಕಾಮಗಾರಿ ಬೇಗ ಆರಂಭಿಸಬೇಕು. ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು’ ಎಂದು ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುರೇಶ ಇಟ್ನಾಳ ಮಾತನಾಡಿ, ‘ಗೋಶಾಲೆಗಳಿಗೆ ಅಗತ್ಯವಿರುವ ಮೇವು ಸಂಗ್ರಹ ಮಾಡಬೇಕು. ಪ್ರಾಣಿಗಳಿಗೆ ಕುಡಿಯುವ ನೀರು, ಔಷಧಗಳ ಬಗ್ಗೆ ಮಂಜಾಗ್ರತೆ ವಹಿಸಬೇಕು’ ಎಂದರು.
ಸಂಘದ ಪದನಿಮಿತ್ತ ಕಾರ್ಯದರ್ಶಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಉಮೇಶ ಕೊಂಡಿ ಮಾತನಾಡಿದರು. ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ. ಶಂಕರಪ್ಪ ಹಾಗೂ ಕೆ. ದಾಮೋದರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.