ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಲಾಕ್‌ಡೌನ್ ಸಂಕಷ್ಟ: ಹೋಮ, ಶ್ರಾದ್ಧ ಮಾಡಿಸಲೂ ಆಗುತ್ತಿಲ್ಲ

ಲಾಕ್‌ಡೌನ್‌: ತೆರೆಯದ ದೇವಸ್ಥಾನ, ಮಠಗಳು, ಅರ್ಚಕರ ಆದಾಯಕ್ಕೂ ಕುತ್ತು
Last Updated 6 ಮೇ 2020, 10:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಒಂದೂವರೆ ತಿಂಗಳಿಂದ ಮಠಗಳು ಹಾಗೂ ದೇವಸ್ಥಾನಗಳು ಬಂದ್‌ ಆಗಿರುವ ಕಾರಣ ಹೋಮ ಹಾಗೂ ಶ್ರಾದ್ಧ ಮಾಡಿಸುವವರಿಗೆ ಸಂಕಷ್ಟ ಎದುರಾಗಿದೆ. ಅರ್ಚಕರ ಆದಾಯಕ್ಕೂ ಕತ್ತರಿ ಬಿದ್ದಿದೆ.

ಅವಳಿ ನಗರದ ವಿವಿಧ ಮಠಗಳಲ್ಲಿ ಬಹಳಷ್ಟು ಅರ್ಚಕರು ಶ್ರಾದ್ಧ, ಹೋಮ–ಹವನ, ದೇವಸ್ಥಾನದಲ್ಲಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಇದರಿಂದ ಬಂದ ಆದಾಯದಿಂದ ಬದುಕಿನ ಬಂಡಿ ಸಾಗಿಸುತ್ತಿದ್ದರು.

ಕೊರೊನಾ ಸೋಂಕು ಹರಡುವ ಭೀತಿಯ ಕಾರಣ ದೇವಸ್ಥಾನಗಳನ್ನು ಬಂದ್‌ ಮಾಡಲಾಗಿದೆ. ಪೂಜಾ ಕೈಂಕರ್ಯ ನಡೆಸಲು ಮಾತ್ರ ಅರ್ಚಕರು ದೇವಸ್ಥಾನಗಳು ಮತ್ತು ಮಠಗಳಿಗೆ ಹೋಗುತ್ತಿದ್ದಾರೆ. ಭಕ್ತರಿಗೆ ಪ್ರವೇಶವಿಲ್ಲದ ಕಾರಣ ಇದೇ ವೃತ್ತಿ ನಂಬಿಕೊಂಡವರಿಗೆ ಆದಾಯವೂ ಇಲ್ಲದಂತಾಗಿದೆ. ಸೋಂಕಿನ ಭೀತಿಯಿಂದ ಮನೆ, ಮನೆಗೆ ಹೋಗಿ ಶ್ರಾದ್ಧ ಮಾಡಿಸಲು ಅರ್ಚಕರು ಹಿಂದೇಟು ಹಾಕುತ್ತಿದ್ದಾರೆ. ಜನ ಕೂಡ ಅರ್ಚಕರನ್ನು ಮನೆಗೆ ಕರೆಯಿಸಲು ಒಪ್ಪುತ್ತಿಲ್ಲ.

ಭವಾನಿನಗರದ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ಪ್ರತಿ ತಿಂಗಳು 130ರಿಂದ 150 ಶ್ರಾದ್ಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದರಿಂದ ಮಠಕ್ಕೂ ಆದಾಯ ಬರುತ್ತಿತ್ತು. ಪರಿಮಳ ಮಾರ್ಗದಲ್ಲಿರುವ ರಾಯರ ಮಠದಲ್ಲಿ ಪ್ರತಿ ತಿಂಗಳು 50ರಿಂದ 60 ಶ್ರಾದ್ಧ, ಅನೇಕ ಹೋಮಹವನ ಕಾರ್ಯಕ್ರಮಗಳು ಜರುಗುತ್ತಿದ್ದವು.

‘ನಮ್ಮ ಮಠ ಮಂತ್ರಾಲಯದ ಅಧೀನಕ್ಕೆ ಒಳಪಟ್ಟ ಕಾರಣ ಅಲ್ಲಿನ ಸೂಚನೆಯಂತೆ ಒಂದೂವರೆ ತಿಂಗಳ ಹಿಂದೆಯೇ ಮಠದಲ್ಲಿ ಶ್ರಾದ್ಧ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದೇವೆ‘ ಎಂದು ಭವಾನಿ ನಗರ ರಾಯರ ಮಠದ ವ್ಯವಸ್ಥಾಪಕ ಶ್ಯಾಮಾಚಾರ್ಯ ರಾಯಸ್ಥ ತಿಳಿಸಿದರು.

‘ಒಂದೂವರೆ ತಿಂಗಳಿಂದ ಯಾವ ಕಾರ್ಯಕ್ರಮಗಳು ನಡೆಯದ ಕಾರಣ ಮಠದ ಖರ್ಚು ನಿಭಾಯಿಸುವುದು ಕಷ್ಟವಾಗುತ್ತಿದೆ. ಮಠ ಮುಚ್ಚಿದ್ದರೂ ಸಿಬ್ಬಂದಿಗೆ ವೇತನ ಕೊಡಲೇಬೇಕು. ಇದೇ ವೃತ್ತಿ ನಂಬಿಕೊಂಡವರಿಗೆ ಲಾಕ್‌ಡೌನ್‌ನಿಂದ ಮನೆ ಬಾಡಿಗೆ ಕಟ್ಟಲೂ ಹಣವಿಲ್ಲದಂತಾಗಿದೆ. ನಿಯಮಿತವಾಗಿ ಮಠಗಳಲ್ಲಿ ಶ್ರಾದ್ಧ, ಹೋಮಹವನ ನಡೆದಿದ್ದರೆ ಒಂದಷ್ಟು ಆದಾಯ ಬರುತ್ತಿತ್ತು’ ಎಂದು ಪರಿಮಳ ಮಾರ್ಗದ ರಾಯರಮಠದ ಅರ್ಚಕ ಮುಕುಂದಾಚಾರ್ಯ್ ತಿಳಿಸಿದರು.

ಆನ್‌ಲೈನ್‌ನಲ್ಲಿ ಶ್ರಾದ್ಧ ಮಾಡಿದರು!

‘ಪ್ರತಿ ವರ್ಷ ಮಠದಲ್ಲಿ ನಮ್ಮ ಮಾವನವರ ಶ್ರಾದ್ಧ ಮಾಡುತ್ತಿದ್ದೆವು. ಲಾಕ್‌ಡೌನ್‌ನಿಂದ ಈ ಬಾರಿ ಮನೆಯಲ್ಲೇ ಮಾಡಬೇಕಾಯಿತು. ಅರ್ಚಕರನ್ನು ಹುಡುಕುವುದು, ಶ್ರಾದ್ಧಕ್ಕೆ ಅಗತ್ಯ ವಸ್ತುಗಳನ್ನು ತರಲು ಬಹಳಷ್ಟು ಕಷ್ಟವಾಯಿತು. ಮಠದಲ್ಲಾಗಿದ್ದರೆ ನಿಗದಿಯಷ್ಟು ಹಣ ಕೊಟ್ಟಿದ್ದರೆ ಸುಲಭವಾಗಿ ಈ ಕಾರ್ಯ ಮುಗಿದು ಹೋಗುತ್ತಿತ್ತು’ ಎಂದು ಧಾರವಾಡದ ಸಾಧನಕೇರಿಯ ಚಂದ್ರಿಕಾ ಮಾಧವ ದೇಶಪಾಂಡೆ ಹೇಳಿದರು.

‘ಮೈದುನ ಬೆಂಗಳೂರಿನಲ್ಲಿರುವ ಕಾರಣ ಅವರ ತಂದೆಯ ಶ್ರಾದ್ಧಕ್ಕೆ ಬರಲು ಸಾಧ್ಯವಾಗಲಿಲ್ಲ. ಧಾರವಾಡದ ಮನೆಯಲ್ಲಿ ಮಾಡಿದ ಶ್ರಾದ್ಧ ಕಾರ್ಯಗಳನ್ನು ಆನ್‌ಲೈನ್‌ನಲ್ಲಿ ನೋಡಿ ಬೆಂಗಳೂರಿನಿಂದಲೇ ಕೈ ಮುಗಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT