ಶನಿವಾರ, ಜೂನ್ 6, 2020
27 °C
ದೇಶದಲ್ಲಿ ಕ್ಷೋಭೆ | ಆರೋಗ್ಯ ಧರ್ಮ ಪಾಲನೆ ಅತ್ಯಗತ್ಯ

ಮುಹೂರ್ತ ಇಟ್ಟ ಸಮಾರಂಭ ಅನಿವಾರ್ಯ ಪರಿಸ್ಥಿತಿಯಲ್ಲಿ ಮುಂದೂಡಿದರೆ ತಪ್ಪಲ್ಲ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್ ಘೋಷಣೆಯಿಂದಾಗಿ ಈ ಮೊದಲೇ ಮುಹೂರ್ತ ನಿಶ್ಚಯಿಸಿದ್ದ ಶುಭ ಸಮಾರಂಭಗಳನ್ನು ನಿರ್ವಹಿಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ಶ್ರಾದ್ಧಾದಿ ಕರ್ಮಗಳಿಗೂ ಕೊರೊನಾ ಕಂಟಕ ಬಾಧಿಸುತ್ತಿದೆ. ಇಂಥ ಹೊತ್ತಿನಲ್ಲಿ ಆಸ್ತಿಕರಿಗೆ ಇರುವ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಜ್ಯೋತಿಷ್ಯ ಮತ್ತು ಆಗಮ ವಿದ್ವಾಂಸರಾದ ದೈವಜ್ಞ ಕೆ.ಎನ್. ಸೋಮಯಾಜಿ.

---

'ಶರೀರ ಮಾತ್ರೇಣ ಖಲು ಧರ್ಮ ಸಾಧನಂ' ಎನ್ನುವ ಶಾಸ್ತ್ರ ವಾಕ್ಯ ಇದೆ. ಆರೋಗ್ಯ ಧರ್ಮ ಮತ್ತು ಶರೀರ ಧರ್ಮಗಳು ಬೇರೆಲ್ಲದಕ್ಕಿಂತ ದೊಡ್ಡದು. ನೈಸರ್ಗಿಕ ವಿಕೋಪಗಳಾದ ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಕೊರೊನಾ ಸೋಂಕು, ಪ್ಲೇಗ್‌ನಂಥ ರೋಗಗಳಿಂದ ದೇಶಕ್ಕೇ ಸಮಸ್ಯೆ ಬಂದಾಗ ಧರ್ಮಾಚರಣೆ ಎರಡನೇ ಸ್ಥಾನ ಪಡೆದುಕೊಳ್ಳುತ್ತೆ.

ಕೆಲವು ಸಮುದಾಯಗಳಲ್ಲಿ ವಾರ್ಷಿಕ ಶ್ರಾದ್ಧ ಮಾಡುವ ಪದ್ಧತಿ ಇದೆ. ಅಂಥವರಿಗೆ ಅದನ್ನು ಮುಂದಕ್ಕೆ ಹಾಕವುದು ಹೇಗೆ ಎಂಬ ಜಿಜ್ಞಾಸೆಯಿದೆ. ಕೆಲವರು ಮದುವೆ, ಉಪನಯನ, ನಾಮಕರಣಗಳಂಥ ಶುಭ ಕಾರ್ಯಗಳಿಗೆ ಸಂಕಲ್ಪ ಮಾಡಿ, ಲಗ್ನ ಪತ್ರಿಕೆ ಮಾಡಿ ನಾಲ್ಕೂರಿನ ಜನರಿಗೆ ಹಂಚಿರುತ್ತಾರೆ. ಮುಹೂರ್ತ ಇಟ್ಟ ಮದುವೆ ಮುಂದಕ್ಕೆ ಹಾಕಿದರೆ ಶುಭವಾಗಲ್ಲ ಎನ್ನುವ ನಂಬಿಕೆಯೂ ಇದೆ. ಇದೇ ರೀತಿ ಉಪನಯನ ಮುಂದೂಡಿಕೆಯಾದರೆ ಆದ್ರೆ ವಟುವಿನ ಜೀವನ ಹಾಳಾಗುತ್ತೆ, ಗೃಹಪ್ರವೇಶ ಮುಂದೂಡಿದರೆ ಮನೆ ನಮಗೆ ಆಗಿ ಬರಲ್ಲ ಎಂಬ ನಂಬಿಕೆಗಳಿವೆ. ಗರ್ಭಿಣಿಗೆ ಬಳೆ ತೊಡಿಸುವ ಶಾಸ್ತ್ರ ಮುಂದಕ್ಕೆ ಹಾಕಿದ್ರೆ ಹುಟ್ಟುವ ಮಗುವಿಗೆ ತೊಂದರೆಯಾಗುತ್ತೆ ಎಂದೂ ಕೆಲವರು ಹೇಳುತ್ತಾರೆ.

ಆದರೆ ಶಾಸ್ತ್ರಗಳಲ್ಲಿ ಮುಹೂರ್ತ ಮುಂದೂಡಿಕೆಗೆ ಅವಕಾಶವಿದೆ. ಇದು ಒಂದು ಹಂತದ ಸಮಸ್ಯೆ. ಈಗ ಬೇರೊಂದು ವಿಚಾರ ಪರಿಶೀಲಿಸೋಣ.

ಮನೆಯಲ್ಲಿ ಯಾರೋ ಒಬ್ಬರು ಸತ್ತಿದ್ದಾರೆ ಎಂದುಕೊಳ್ಳೋಣ. ದಹನ, ಅಂತ್ಯಸಂಸ್ಕಾರ ಮಾಡ್ತಾರೆ. ಆದರೆ ಉಳಿದ ಆಚರಣೆಗಳಾದ ಧರ್ಮೋದಕ, ಸಂಪಿಡೀಕರಣ ಮಾಡಲು ಅವಕಾಶವೇ ಸಿಗುವುದಿಲ್ಲ. ಶುಭ ಸ್ವೀಕಾರ, ವೈಕುಂಠ ಸಮಾರಾಧನೆ ಮಾಡುವುದಕ್ಕೂ ಆಗುವುದಿಲ್ಲ. ಇಂಥ ಆಚರಣೆಗಳಿಲ್ಲದೆ ಶುದ್ಧಿ ಸಾಧ್ಯವಾಗದು. ಇಂಥ ಸಂದರ್ಭದಲ್ಲಿ ಪರಿಹಾರವೇನು ಎನ್ನುವುದು ಜಿಜ್ಞಾಸೆ.

ಮುಂದೂಡಿಕೆ ಸಹಜ

ಉಪನಯನ, ಮದುವೆ, ಮುಂಜಿಯಂಥ ಶುಭ ಸಮಾರಂಭಗಳನ್ನು ಹಲವು ಕಾರಣಗಳಿಗೆ ಹಲವಾರು ಮಂದಿ ಮುಂದೂಡುತ್ತಿರುತ್ತಾರೆ. ಹುಡುಗನ ಅಥವಾ ಹುಡುಗಿಯ ಕಡೆಯವರು ಆಕಸ್ಮಿಕವಾಗಿ ಸತ್ತು ಹೋದರೆ ಮುಹೂರ್ತವಿಟ್ಟಿದ್ದರೂ ಶುಭ ಸಮಾರಂಭಗಳನ್ನು ಮುಂದೂಡಬೇಕಾಗುತ್ತೆ. ನೂರರಲ್ಲಿ ಒಂದೆರೆಡು ಮುಂದಕ್ಕೆ, ಸಾವಿರದಲ್ಲಿ ಒಂದೆರೆಡು ಕ್ಯಾನ್ಸಲ್ ಆಗುವುದು ಸಹಜ. ದೇಶದಲ್ಲಿಯೇ ಒಂದು ಕ್ಷೋಭೆಯಿದೆ. ಮನುಕುಲಕ್ಕೇ ಅಪಾಯ ಬಂದಿದೆ ಎಂಬಂಥ ಪರಿಸ್ಥಿತಿಯಿದ್ದಾಗ ನಮ್ಮ ಋಷಿ ಮುನಿಗಳು ಹೇಳಿದ ಕೆಲ ಆಚರಣೆಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಹಬ್ಬ, ಜಾತ್ರೆ ಎಂದರೆ ಸಡಗರ ಎಂದೇ ಅರ್ಥ. ನೀವು ಒಬ್ರೇ ಹಬ್ಬ ಮಾಡಿಕೊಳ್ಳಲು ಆಗಲ್ಲ. ಜನರೊಂದಿಗೆ ಬೆರೆಯದಿದ್ದರೆ ಹಬ್ಬದ ಉತ್ಸಾಹವೇ ಇರುವುದಿಲ್ಲ. ಹೆಂಡತಿ, ಮಕ್ಕಳು, ಅಕ್ಕ, ತಂಗಿಯರ ಜೊತೆಗೆ ಸಂಭ್ರಮಿಸುವುದು ಹಬ್ಬ. ಸಂಭ್ರಮಿಸೋಕೆ ನಮಗೆ ಜನ ಬೇಕು, ಸಂಘ ಬೇಕು. ನಾವು ಒಬ್ರೇ ಸಂಭ್ರಮಿಸೋಕೆ ಆಗಲ್ಲ. ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಇಂಥ ಆಚರಣೆಗಳಿಗೆ ಅವಕಾಶ ಸಿಗಲ್ಲ. 

ಅಪಶಕುನ ಅಲ್ಲ

ಶುಭ ಸಮಾರಂಭಗಳನ್ನು ಮುಂದಕ್ಕೆ ಹಾಕುವುದು ಅಪಶಕುನ ಅಥವಾ ಕೆಟ್ಟ ಸೂಚನೆ ಅಲ್ಲ. ಕೆಟ್ಟದ್ದೇನೂ ಆಗಲ್ಲ. ಧೈರ್ಯದಿಂದ ಮುಂದಕ್ಕೆ ಹಾಕಬಹುದು.

ಇನ್ನು ಶ್ರಾದ್ಧ ಕರ್ಮಾದಿಗಳ ವಿಚಾರ. ನೀವು ಇದ್ದ ಜಾಗದಲ್ಲಿ, ಸರ್ಕಾರ ವಿಧಿಸುವ ನಿರ್ಬಂಧಗಳ ಮಿತಿಯೊಳಗೆ ಮಾಡಲು ಸಾಧ್ಯವಾದರೆ ಮಾಡಿ. ಆದರೆ ಶ್ರಾದ್ಧ ಮಾಡಲು ಬೇಕಾದ ಸಾಮಾನುಗಳು, ಸೌಲಭ್ಯಗಳು ಸಿಗುತ್ತಿವೆಯೇ ಒಮ್ಮೆ ಯೋಚಿಸಿ. ವೀಳ್ಯದೆಲೆ, ಬಾಳೆಎಲೆ, ಪುರೋಹಿತರು, ಅಡುಗೆಯವರನ್ನು ಹೊಂದಿಸುವುದು ಈಗ ಸಾಧ್ಯವೇ? ಇಂಥ ಸಂದರ್ಭದಲ್ಲಿ ಸ್ವಯಂಪಾಕಕ್ಕೆ ಕೊಡುವವರು ಕೊಡಬಹುದು.

ಸ್ವಯಂಪಾಕಕ್ಕೆ ಕೊಡಲು ಸಾಧ್ಯವಾಗದಿದ್ದರೆ ಈಗ ಚಿಂತಿಸುವ ಅಗತ್ಯವಿಲ್ಲ. ಮುಂದೆ ಬರುವ ಅಮಾವಾಸ್ಯೆ ಅಥವಾ ಅದರ ಮುಂದಿನ ಅಮಾವಾಸ್ಯೆಗೆ ಶ್ರಾದ್ಧ ಮಾಡಿ. ಶ್ರಾದ್ಧಕ್ಕೆ ಎರಡು ದಿನ ಮುಂದೆ ಮನೆಯಲ್ಲಿ ಹೆರಿಗೆ ಆದರೆ ಅಥವಾ ಯಾರಾದ್ರೂ ತೀರಿ ಹೋದ್ರೆ ಹೇಗೆ ಶ್ರಾದ್ಧ ಮಾಡ್ತೀರಿ? ಜಾತ ಅಥವಾ ಮೃತ ಸೂತಕ ಇದ್ದಾಗ ಶ್ರಾದ್ಧವನ್ನು ಮುಂದೂಡುವುದಿಲ್ಲವೇ? ಹಾಗಾಗಿ ಶ್ರಾದ್ಧವನ್ನು ಮುಂದಕ್ಕೆ ಹಾಕುವುದು ಅಶಾಸ್ತ್ರೀಯವೇನೂ ಅಲ್ಲ.


ದೈವಜ್ಞ ಕೆ.ಎನ್.ಸೋಮಯಾಜಿ

ಸರಳ ಉತ್ಸವ, ತಪ್ಪು ಕಾಣಿಕೆ

ಇನ್ನು ದೇವಸ್ಥಾನದ ಉತ್ಸವಾದಿಗಳನ್ನು ಸಂಕ್ಷಿಪ್ತವಾಗಿ ಒಬ್ಬರೋ ಇಬ್ಬರೋ ಸೇರಿಕೊಂಡು ಮಾಡಿ ಮುಗಿಸಬಹುದು. ಒಬ್ಬಿಬ್ಬರಿಂದ ನಿರ್ವಹಿಸಲು ಆಗದಿದ್ದರೆ ಅಲ್ಲಿನ ಸಂಪ್ರದಾಯ, ದೇವರ ನಕ್ಷತ್ರ, ತಿಥಿ ನೋಡಿಕೊಂಡು ಮುಂದೂಡಬಹುದು. ಅದೂ ಸಾಧ್ಯವಾಗದಿದ್ದರೆ ಮುಂದಿನ ವರ್ಷದ ಉತ್ಸವಕ್ಕೆ ಮೊದಲು ದೇವರ ತಪ್ಪು ಕಾಣಿಕೆಯಿಟ್ಟು ನೆರವೇರಿಸಬಹುದು.

ಧರ್ಮ ಸಿಂಧು, ಧರ್ಮ ಶಾಸ್ತ್ರ ನಿರ್ಣಯ, ಅಶೌಚ ನಿರ್ಣಯದಂಥ ಗ್ರಂಥಗಳನ್ನು ಪರಿಶೀಲಿಸಿ ನಾನು ಮೇಲಿನ ಮಾತುಗಳನ್ನು ಹೇಳುತ್ತಿದ್ದೇನೆ.

(ನಿರೂಪಣೆ: ಡಿ.ಎಂ.ಘನಶ್ಯಾಮ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು