ಶನಿವಾರ, ಜೂನ್ 6, 2020
27 °C

ಪುರೋಹಿತರೊಬ್ಬರ ಲಾಕ್‌ಡೌನ್ ಸ್ವಗತ: ಚೈತ್ರ ಮಾಸದಲ್ಲೇ ಹೀಗಾದರೆ ಹೇಗೆ

ವಿನಯ್ ಎಚ್‌.ಎಸ್. Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ ಎಲ್ಲರ ಬದುಕಿಗೂ ಸಂಕಷ್ಟ ತಂದೊಡ್ಡಿದೆ. ಸಮಾಜದ ಅಂಗವೇ ಆಗಿರುವ ಪುರೋಹಿತರೂ ಇದಕ್ಕೆ ಹೊರತಲ್ಲ. ತುಮಕೂರಿನಲ್ಲಿ ಪೌರೋಹಿತ್ಯವನ್ನು ವೃತ್ತಿಯಾಗಿಸಿಕೊಂಡಿರುವ ವಿನಯ ಭಟ್ಟ, ತಮ್ಮ ಬದುಕಿನ ಮೇಲೆ ಲಾಕ್‌ಡೌನ್ ಉಂಟು ಮಾಡಿರುವ ಪರಿಣಾಮವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

---

ನಮಸ್ಕಾರ, ನಾನು ವಿನಯ ಭಟ್ಟ. ನನ್ನ ಊರು ತುಮಕೂರು. ಪೌರೋಹಿತ್ಯ ನನ್ನ ವೃತ್ತಿ. ಮದುವೆ ಮುಂಜಿ ನಾಮಕರಣದಂತಹ ಕಾರ್ಯಕ್ರಮದಿಂದ ಬರುವ ಸಂಭಾವನೆಯಿಂದ ನಮ್ಮ ಜೀವನ.

ನಮ್ಮ ಸ್ವಂತ ಕಾರ್ಯಕ್ರಮದ ಜೊತೆ, ಇತರೆ ಪುರೋಹಿತರ ಜೊತೆಗೆ ಸಹಾಯಕನಾಗಿಯೂ ಹೋಗುತ್ತೇನೆ. ಪ್ರತಿ ಕಾರ್ಯಕ್ರಮಕ್ಕೂ ಸರಾಸರಿ ಐನೂರರಿಂದ ಒಂದೂವರೆ ಸಾವಿರದರೆಗೂ ಸಿಗುತ್ತದೆ.

ಕಳೆದ ಹದಿನೈದು ದಿನಗಳಿಂದ ಒಂದೂ ಕಾರ್ಯಕ್ರಮವಿಲ್ಲ. ಏಪ್ರಿಲ್ 14ರ ನಂತರ ನಿಗದಿಯಾಗಿದ್ದ ಬಹುತೇಕ ಕಾರ್ಯಕ್ರಮಗಳು ರದ್ದಾಗಿವೆ. ಏಪ್ರಿಲ್ 15ರಿಂದ 30ರ ನಡುವೆ ನಿಗದಿಯಾಗಿರುವ ಒಂದೋ, ಎರಡೋ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ನಂಬಿಕೆಯಿಲ್ಲ. ಹೀಗೇ ಆದರೆ ನಮ್ಮ ಮುಂದಿನ ಜೀವನ ಹೇಗೆ ಎಂಬ ಚಿಂತೆ ಕಾಡುತ್ತಿದೆ.

ಪೌರೋಹಿತ್ಯದೊಂದಿಗೆ ಅಡುಗೆ ಕೆಲಸಗಳಿಗೂ ನಾನು ಹೋಗುತ್ತೇನೆ. ಅವರ ಪರಿಸ್ಥಿತಿಯೂ ಇದಕ್ಕಿಂತ ಬೇರೆಯಲ್ಲ. ಶುಭ ಸಮಾರಂಭಗಳಷ್ಟೇ ಅಲ್ಲ. ಶ್ರಾದ್ಧಗಳೂ ನಿಂತು ಹೋಗಿವೆ.

ಶುಭ ಸಮಾರಂಭಗಳಿಗೆ ಇದು ಸೀಸನ್. ಆದರೆ ಈ ಹೊತ್ತಿಗೇ ಲಾಕ್‌ಡೌನ್ ಘೋಷಣೆಯಾಗಿರುವುದು ಸಮಸ್ಯೆ. ಕೂಡಿಟ್ಟುಕೊಂಡಿರುವ ಹಣ ಎಷ್ಟು ದಿನ ಬರುತ್ತದೋ ಗೊತ್ತಿಲ್ಲ. ಇರುವ ಹಣ ಖಾಲಿಯಾಗುವವರೆಗೂ ಕೈ ಹಿಡಿತದಲ್ಲಿ ಖರ್ಚು ಮಾಡುತ್ತಿದ್ದೇನೆ. ಲಾಕ್‌ಡೌನ್ ನಂತರ ಬರುವ ಕೆಲಸಗಳಿಗೆ ಈ ಹಿಂದಿನಷ್ಟು ಸಂಭಾವನೆ ಬರುತ್ತೆ ಎಂಬ ನಂಬಿಕೆಯೂ ಇಲ್ಲ.

ದೇವಸ್ಥಾನಗಳ ಅರ್ಚಕರ ಪರಿಸ್ಥಿತಿ ನಮಗಿಂತ ಭಿನ್ನವಾಗಿಯೇನೂ ಇಲ್ಲ. ಬಹುತೇಕ ದೇಗುಲಗಳಲ್ಲಿ ಹುಂಡಿ ಹಣವನ್ನು ಸರ್ಕಾರವೋ, ಟ್ರಸ್ಟ್‌ಗಳವರೋ ತೆಗೆದುಕೊಳ್ಳುತ್ತಾರೆ. ಹೆಸರಿಗಿಷ್ಟು ವೇತನ ಅಂತ ನಿಗದಿಯಾಗಿದ್ದರೂ, ಈಗಿನ ಕಾಲಕ್ಕೆ ಅದು ಏನೇನೂ ಸಾಲದು. ಮಂಗಳಾರತಿ ತಟ್ಟೆ ಕಾಸು, ಪೂಜೆ ಮಾಡಿಸಿದಾಗ ಸಿಗುವ ಸಂಭಾವನೆಯಿಂದಲೇ ಜೀವನ ನಡೆಯಬೇಕು.

ಆದರೆ ವರ್ಷದ ಮೊದಲ ಹಬ್ಬ ಯುಗಾದಿಯ ದಿನವೇ ಜನರು ದೇಗುಲಗಳಿಗೆ ಬರಲು ಅವಕಾಶ ಸಿಗಲಿಲ್ಲ. ಉತ್ತಮ ಲಗ್ನಗಳು ಸಿಗುವ ಚೈತ್ರ, ವೈಶಾಖ ಮಾಸದಲ್ಲೇ ಹೀಗಾದರೆ ಉಳಿದ ಮಾಸಗಳಲ್ಲಿ ಕಥೆ ಹೇಗೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಹತ್ತು ದಿನಗಳ ಹಿಂದೆ ನಮ್ಮ ಸ್ನೇಹಿತರೊಬ್ಬರ ತಾಯಿ ನಿಧನರಾದರು. ಆವರ 10ನೇ ದಿನದ ನಂತರದ ಕಾರ್ಯಕ್ರಮಗಳಿಗೆ ಇಬ್ಬರು ಮಾತ್ರವೇ ಬರಬೇಕು ಎಂದು ನಿಗದಿಪಡಿಸಿದ್ದರು. ಅಪರ ಕರ್ಮಗಳನ್ನು ನಿರ್ವಹಿಸುವ ವೈದಿಕ ಧರ್ಮ ಸಭಾಗಳು ಹಲವು ಊರುಗಳಲ್ಲಿ ಬಾಗಿಲು ಹಾಕಿವೆ. ಹೀಗಾಗಿ ಅಪರ ಕರ್ಮಗಳನ್ನು ಮಾಡಿಸುವ ಪುರೋಹಿತರಿಗೆ ಕೆಲಸವೇ ಇಲ್ಲದಂತಾಗಿದೆ. ಶ್ರಾದ್ಧಗಳನ್ನು ಮಾಡಲು ಸಾಧ್ಯವಾಗದ ಹಲವರು ಪುರೋಹಿತರಿಗೆ ಸ್ವಯಂಪಾಕ (ಅಡುಗೆ ಸಾಮಾನು) ಕೊಟ್ಟು ಕೈಮುಗಿಯುತ್ತಿದ್ದಾರೆ.

ನಾನೂ ಸೇರಿದಂತೆ ಹಲವು ಪುರೋಹಿತರು ಗೃಹ ಸಾಲ, ವಾಹನ ಸಾಲ ಪಡೆದಿದ್ದೇವೆ. ಮೂರು ತಿಂಗಳು ಕಂತು ಪಾವತಿಗೆ ಸರ್ಕಾರ ವಿನಾಯ್ತಿಕೊಟ್ಟಿದೆ. ಆದರೆ ಅದಾದ ಮೇಲೆಯೂ ಸಂಭಾವನೆ ಕೊಡುವವರ ಸ್ಥಿತಿಗತಿ ಸುಧಾರಿಸದಿದ್ದರೆ ನಮ್ಮ ಕಥೆ ಹೇಗೋ ಗೊತ್ತಿಲ್ಲ.

ಲಾಕ್‌ಡೌನ್‌ನಿಂದ ಇಡೀ ದೇಶವೇ ಸಂಕಷ್ಟ ಅನುಭವಿಸುತ್ತಿದೆ. ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ಗಿಂತ ಉತ್ತಮ ಆಯ್ಕೆ ನಮ್ಮ ನಾಯಕರಿಗೂ ಇರಲಿಲ್ಲ. ಹೀಗಾಗಿ ಇದು ಅನಿವಾರ್ಯ. ಈ ಕಷ್ಟವನ್ನೂ ದೇವರು ಕೊನೆಗಾಣಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಜೀವನ ಸಾಗಿಸುತ್ತಿದ್ದೇನೆ.

ಕೊರೋನಾ ಸೋಂಕಿನ ಭೀತಿಯಿಂದ ದೇಶ ಬೇಗ ಹೊರಗೆಬರಲಿ, ಎಲ್ಲರೂ ಆರೋಗ್ಯವಂತರಾಗಲಿ. ಸರ್ವೇ ಜನಾ ಸುಖಿನೋ ಭವಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು