ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ಸಂಚಾರ ನೋಟ

Published 31 ಆಗಸ್ಟ್ 2023, 6:09 IST
Last Updated 31 ಆಗಸ್ಟ್ 2023, 6:09 IST
ಅಕ್ಷರ ಗಾತ್ರ

ಸುಷ್ಮಾ ಸವಸುದ್ದಿ

ಹುಬ್ಬಳ್ಳಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಅತೀ ದೊಡ್ಡ ನಗರ ಎಂಬ ಖ್ಯಾತಿ ಪಡೆದ ಹುಬ್ಬಳ್ಳಿ–ಧಾರವಾಡ ಅವಳಿ ನಗರ ವೇಗವಾಗಿ ಅಭಿವೃದ್ಧಿಯತ್ತ ಸಾಗಿದೆ. ವಾಣಿಜ್ಯ ನಗರ ಹುಬ್ಬಳ್ಳಿಗೂ, ಶಿಕ್ಷಣ ಕಾಶಿಯಾದ ಧಾರವಾಡಕ್ಕೂ ವ್ಯಾಪಾರ, ಶಿಕ್ಷಣ, ಉದ್ಯೋಗ ಅರಸಿ ಬರುವವರ ಸಂಖ್ಯೆ ಕಡಿಮೆ ಏನಿಲ್ಲ. ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳಿಗೂ ಅವಳಿ ನಗರ ಹೆಸರುವಾಸಿಯಾಗಿದ್ದು, ನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಬರುವ ಜನರಿಗೆ ಯಾವುದೇ ಸಮಸ್ಯೆಯಾಗದ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ.

ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಬಿಆರ್‌ಟಿಎಸ್‌, ನೈರುತ್ಯ ರೇಲ್ವೆ ಇಲಾಖೆ, ವಿಮಾನ, ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣಿಕರ ಸಂಚಾರಕ್ಕೆ ನಿತ್ಯ ಸೇವೆ ಸಲ್ಲಿಸುತ್ತಿವೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ವಾಯವ್ಯ ಭಾಗದ ಆರು ಜಿಲ್ಲೆಗಳಿಗೆ ನಿತ್ಯ ಬಸ್‌ ಸೌಲಭ್ಯ ಒದಗಿಸುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸಾಮಾನ್ಯ ಸಾರಿಗೆ ಬಸ್‌ನಿಂದ ಐಷಾರಾಮಿ ಸಾರಿಗೆ ಬಸ್‌ವರೆಗೂ ಸೌಲಭ್ಯ ನೀಡುತ್ತಿದೆ. ಹುಬ್ಬಳ್ಳಿಯಲ್ಲಿ ಹೊಸುರು, ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಸಿಬಿಟಿ ಸೇರಿ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ನೆರೆಯ ರಾಜ್ಯಗಳಿಗೆ ತೆರಳುವ ಬಸ್‌ಗಳ ವ್ಯವಸ್ಥೆಯಿದೆ.

ಹುಬ್ಬಳ್ಳಿ– ಧಾರವಾಡದ ಮಧ್ಯ 100 ಚಿಗರಿ ಬಸ್, 20 ಸರ್ಕಾರಿ ಬಸ್, 41 ಬೇಂದ್ರೆ ಖಾಸಗಿ ಬಸ್‌ಗಳು 22ರಿಂದ 25 ಕಿ.ಮೀ ನಿತ್ಯ ಸಂಚರಿಸುತ್ತವೆ.

ಅವಳಿ ನಗರದ ಮಧ್ಯ ‘ಚಿಗರಿ’ ಓಟ

ಹುಬ್ಬಳ್ಳಿ – ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಉದ್ದಕ್ಕೂ ಮಧ್ಯ ದಾರಿಯಲ್ಲಿ ಸಂಚರಿಸುವ ಬಿಆರ್‌ಟಿಎಸ್‌ ಬಸ್‌ಗಳು ಅವಳಿನಗರದ ಜನರಿಗೆ ವರದಾನವೇ ಸರಿ. ನಿತ್ಯ ನೂರು ಬಸ್‌ಗಳು ಸಂಚರಿಸುತ್ತವೆ. ಈ ರೀತಿಯ ಸಂಚಾರ ವ್ಯವಸ್ಥೆ ರಾಜ್ಯದ ಮೊದಲ ಪ್ರಯತ್ನವಾಗಿದೆ.

ವಿಮಾನ ನಿಲ್ದಾಣ

ಹುಬ್ಬಳ್ಳಿಯ ಗಾಂಧಿ ನಗರದಲ್ಲಿರುವ ದೇಶೀಯ ವಿಮಾನ ನಿಲ್ದಾಣವು ದೇಶದಾದ್ಯಂತ 10 ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಇಂಡಿಗೋ ಹಾಗೂ ಸ್ಟಾರ್ ಏರ್ ಎರಡು ಏರ್ ಲೈನ್ಸ್ ಗಳು ಸೇವೆ ಸಲ್ಲಿಸುತ್ತಿವೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ, ಪುಣೆಗೆ ಸಂಪರ್ಕ ಕಲ್ಪಿಸುತ್ತವೆ. 

2021ರಲ್ಲಿ ಅಳವಡಿಸಿರುವ 8 ಮೆ.ವ್ಯಾ. ಗ್ರಿಡ್‌-ಸಂಪರ್ಕಿತ ಸೌರ ವಿದ್ಯುತ್‌ ಸ್ಥಾವರದಿಂದಾಗಿ ಏರ್‌ಪೋರ್ಟ್‌ ಶೇ.100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ. ಈ ಸ್ಥಾವರದಿಂದ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಹುಬ್ಬಳ್ಳಿಯ ಗ್ರಿಡ್‌ಗೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ 38 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು, ಅಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸುವ ಚಿಂತನೆಗಳು ನಡೆದಿವೆ.

ಜಗತ್ತಿನ ಉದ್ದದ ಫ್ಲಾಟ್‌ಫಾರ್ಮ್

ಅವಳಿ ನಗರಗಳೆರಡು ಉತ್ತಮ ರೈಲು ನಿಲ್ದಾಣವನ್ನು ಹೊಂದಿವೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಒಟ್ಟು 5 ಪ್ಲಾಟ್​ಫಾರಂಗಳಿವೆ. 5ರಲ್ಲಿ 1ನೇ ಪ್ಲಾಟ್​ಫಾರಂನ್ನು ಅತಿ ಉದ್ದವಾಗಿ ವಿಸ್ತರಿಸಲಾಗಿದೆ. ಈ ಹಿಂದೆ 1ನೇ ಪ್ಲಾಟ್‌​ಫಾರಂ 550 ಮೀಟರ್‌ ಉದ್ದವಿತ್ತು. ಇದನ್ನು ವಿಸ್ತರಿಸಿ 10 ಮೀಟರ್‌ ಅಗಲದೊಂದಿಗೆ 1505 ಮೀಟರ್‌ ವರೆಗೆ (1.5 ಕಿಮೀ) ವಿಸ್ತರಿಸಲಾಗಿದೆ. ಇದು ಜಗತ್ತಿನಲ್ಲೇ ಅತಿ ಉದ್ದದ ಪ್ಲಾಟ್‌​ಫಾರಂ ಆಗಿ ಹೊರಹೊಮ್ಮಿದೆ.

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಬ್ಬಳ್ಳಿ ವಾಣಿಜ್ಯೋದ್ಯಮ ಹಾಗೂ ವ್ಯಾಪಾರ–ವಹಿವಾಟಿನ ಕೇಂದ್ರವೂ ಹೌದು. ರಾಷ್ಟ್ರೀಯ ಹೆದ್ದಾರಿಗಳಾದ 4 (ಬೆಂಗಳೂರು–ಪುಣೆ), 63 (ಅಂಕೋಲಾ–ಗುತಿ) ಹಾಗೂ 218 (ವಿಜಯಪುರ– ಹುಬ್ಬಳ್ಳಿ) ನಗರವನ್ನು ಹಾದು ಹೋಗಿವೆ. ರಾಜ್ಯ ಹಾಗೂ ಅಂತರರಾಜ್ಯಗಳ ಸಾರಿಗೆ, ಸರಕು ಸಾಗಣೆ ಸೇರಿದಂತೆ ಹಲವು ಬಗೆಯ ವಾಹನಗಳು ದಿನದ 24 ತಾಸು ನಗರದ ಮಾರ್ಗವಾಗಿಯೇ ಸಂಚರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT