ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಚಿಗರಿ ಮಾರ್ಗದಲ್ಲಿ ಒಣಗುತ್ತಿದೆ ವನರಾಶಿ

ಗಿಡಗಳ ನಿರ್ವಹಣೆ ಗುತ್ತಿಗೆ ಕಳೆದ ನವೆಂಬರ್‌ಗೆ ಅಂತ್ಯ; ಹೊಸದಾಗಿ ಮತ್ತೆ ಟೆಂಡರ್
Last Updated 9 ಫೆಬ್ರುವರಿ 2022, 6:02 IST
ಅಕ್ಷರ ಗಾತ್ರ

ಧಾರವಾಡ: ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್‌ಟಿಎಸ್)ಯ ‘ಚಿಗರಿ’ ಮಾರ್ಗದಲ್ಲಿ ಕಣ್ಮನ ಸೆಳೆಯುತ್ತಿದ್ದ ಹಸಿರು ಹೊದ್ದ ವನರಾಶಿ ನಿರ್ವಹಣೆ ಇಲ್ಲದೆ ಬಾಡಿವೆ.

ದೇಶದಲ್ಲಿರುವ ಬಿಆರ್‌ಟಿಎಸ್ ಯೋಜನೆಗಳಲ್ಲೇ ಅತ್ಯಂತ ಆಕರ್ಷಕ ಎಂಬ ಪ್ರಶಂಸೆಗೆ ಪಾತ್ರವಾಗಿದ್ದ ಚಿಗರಿ ಮಾರ್ಗ ದೇಶದ ಗಮನ ಸೆಳೆದಿತ್ತು. ಅರಣ್ಯ ಇಲಾಖೆ ಮೂಲಕ ಖಾಸಗಿ ಗುತ್ತಿಗೆದಾರರಿಂದ ನಿರ್ವಹಣೆಯಾಗುತ್ತಿದ್ದ ಈ ಹಸಿರು ತಾಣ ಈಗ ನಿರ್ವಹಣೆ ಇಲ್ಲದೆ ಒಣಗಲಾರಂಭಿಸಿದೆ.

ಒಟ್ಟು 8.5 ಕಿ.ಮೀ. ಮಾರ್ಗದಲ್ಲಿ 2800 ಗಿಡಗಳನ್ನು ನೆಡಲಾಗಿತ್ತು. ಅರಣ್ಯ ಇಲಾಖೆಯ ತುಂಡು ಗುತ್ತಿಗೆ ಆಧಾರದಲ್ಲಿ ಇಕೊ ವಿಲೇಜ್‌ನ ಪಿ.ವಿ. ಹಿರೇಮಠ ಅವರು ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಯ ಗುತ್ತಿಗೆ ಪಡೆದಿದ್ದರು.

ಗಾಂಧಿನಗರದಿಂದ ಹುಬ್ಬಳ್ಳಿಯ ನವೀನ್ ಹೋಟೆಲ್‌ವರೆಗೆ ರಸ್ತೆ ಮಧ್ಯದಲ್ಲಿ ಸುಮಾರು 1600 ಮರಗಳು ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ಹಸಿರು, ನೆರಳು ಮತ್ತು ಶುದ್ಧ ಗಾಳಿ ನೀಡುವ 1200 ಗಿಡಗಳನ್ನು ನೆಡಲಾಗಿತ್ತು. ಇದಕ್ಕಾಗಿ ಬಿಆರ್‌ಟಿಎಸ್ ₹3.8 ಕೋಟಿ ಮೀಸಲಿಟ್ಟಿತ್ತು.

ಇವುಗಳಲ್ಲಿ ಹೇರಳ ಆಮ್ಲಜನಕ ನೀಡುವ ಕೋನಾಕಾರ್ಪಸ್‌, ಪಗೋಡಾ, ಓಲಿಸ್ಟೋನಿಯಾ ಸೇರಿದಂತೆ ಹಲವು ರೆಡಿಮೇಡ್ ಮರಗಳನ್ನೇ ಇಲ್ಲಿ ನೆಡಲಾಗಿತ್ತು. ಜೊತೆಗೆ ಫಿಷ್‌ಟೈಲ್ ಪಾಮ್‌, ಫೈಕಸ್ ಬೆಂಜಮಿನ್‌ ಎಂಬ ಪುಟ್ಟ ಗಾತ್ರದ ಆಲದ ಮರಗಳು ಬಿಆರ್‌ಟಿಎಸ್ ಮಾರ್ಗದ ಅಂದ ಹೆಚ್ಚಿಸಿದ್ದವು. ಇದೀಗ ನಿರ್ವಹಣೆ ಕಾಣದೆ ಗಿಡಗಳು ಹಾಗೂ ಹುಲ್ಲಿನ ಹಾಸು ಒಣಗಿವೆ. ಕೆಲವೆಡೆ ಗಿಡಗಳು ಆರೈಕೆಯೇ ಇಲ್ಲದೆ ನೆಲಕ್ಕುರುಳಿವೆ.

ಒಟ್ಟು 7.1 ಎಕರೆ ಪ್ರದೇಶದಲ್ಲಿ 11 ಕೋಟಿ ಲೀಟರ್‌ ಮಳೆ ನೀರು ಸಂಗ್ರಹ ಮಾಡಿದ್ದು ಸುದ್ದಿಯಾಗಿತ್ತು. ಕೊಳವೆ ಬಾವಿ ಇಲ್ಲದ ಕಾರಣ ಬೇಸಿಗೆಯಲ್ಲಿ 12 ಟ್ರ್ಯಾಕ್ಟರ್ ಹಾಗೂ ಮಳೆಗಾಲ ಹೊರತುಪಡಿಸಿ ಉಳಿದ ಅವಧಿಯಲ್ಲಿ 6 ಟ್ರ್ಯಾಕ್ಟರ್ ನೀರನ್ನು ಈ ಗಿಡಗಳಿಗೆ ಹಾಯಿಸಲಾಗುತ್ತಿತ್ತು. 20 ಕಾರ್ಮಿಕರು ನಿತ್ಯ ಗಿಡಗಳ ಆರೈಕೆಯಲ್ಲಿ ತೊಡಗಿರುತ್ತಿದ್ದರು. ಆದರೆ, ಕಳೆದ ನವೆಂಬರ್‌ಗೆ ಗುತ್ತಿಗೆ ಕೊನೆಗೊಂಡಿದ್ದರಿಂದ ಹಾಗೂ ಹೊಸ ಗುತ್ತಿಗೆ ಆರಂಭವಾಗದ ಕಾರಣ ನಳನಳಿಸುತ್ತಿದ್ದ ಗಿಡಗಳು ಮಂಕಾಗಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ, ‘ಗುತ್ತಿಗೆ ಮುಗಿದಿರುವುದು ಹಾಗೂ ಋತುಮಾನದಲ್ಲಿನ ಬದಲಾವಣೆಯಿಂದ ಗಿಡಗಳು ಅಲ್ಲಲ್ಲಿ ಒಣಗಿವೆ. ಟೆಂಡರ್ ಕರೆಯಲಾಗಿತ್ತು. ಹೊಸ ಗುತ್ತಿಗೆದಾರರು ವಾರದಲ್ಲಿ ಕೆಲಸ ಆರಂಭಿಸಲಿದ್ದಾರೆ. ಈವರೆಗೂ ಸುಮಾರು 1,100 ಗಿಡಗಳು ನಷ್ಟವಾಗಿರುವ ಅಂದಾಜಿದೆ’ ಎಂದರು.

‘ಚಿಗರಿ ಮಾರ್ಗದಲ್ಲಿನ ಹಸಿರು ಶಾಶ್ವತವಾಗಿ ಉಳಿಸಿಕೊಳ್ಳಲು ಮೂರು ಕೊಳವೆ ಬಾವಿ ಕೊರೆಯಿಸಲಾಗಿದೆ. ಕೆವಿಜಿ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ಟ್ರ್ಯಾಕ್ಟರ್‌ ಕೊಡಲು ಮುಂದಾಗಿದೆ. ಇವೆಲ್ಲವನ್ನೂ ಬಳಸಿಕೊಂಡು ಹಸಿರ ರಾಶಿಯನ್ನು ಇನ್ನಷ್ಟು ಉತ್ತಮಪಡಿಸಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

*
ನಷ್ಟವಾದ ಗಿಡಗಳ ಜಾಗದಲ್ಲಿ ಹೊಸ ಗಿಡಗಳನ್ನು ನೆಡಲಾಗುವುದು. ವಾರದಲ್ಲಿ ಹೊಸ ಗುತ್ತಿಗೆದಾರರು ಹಸಿರು ನಿರ್ವಹಣೆಯ ಕಾರ್ಯದಲ್ಲಿ ತೊಡಗಲಿದ್ದಾರೆ.
-ಗುರುದತ್ತ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ, ಬಿಆರ್‌ಟಿಎಸ್

*
ಡಿಸೆಂಬರ್‌ನಿಂದ ಗಿಡಗಳ ನಿರ್ವಹಣೆ ಗುತ್ತಿಗೆ ಕೊನೆಗೊಂಡಿದೆ. ಬಾಡಿರುವ ಗಿಡಗಳ ಜಾಗದಲ್ಲಿ ಹೊಸ ಸಸಿಗಳನ್ನು ನೆಡಿಸಿ ಬಿಆರ್‌ಟಿಎಸ್‌ಗೆ ಹಸ್ತಾಂತರಿಸಲಾಗುವುದು
-ಯಶಪಾಲ್ ಕ್ಷೀರಸಾಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT