ಶನಿವಾರ, ಮೇ 21, 2022
19 °C
ಭರತನಾಟ್ಯಂ ಕಾರ್ಯಕ್ರಮ ಮಯೂರ ಅಕಾಡೆಮಿ 10 ವಿದ್ಯಾರ್ಥಿಗಳು

ಗಣರಾಜ್ಯೋತ್ಸವ: ದೆಹಲಿಯಲ್ಲಿ ಹುಬ್ಬಳ್ಳಿ ನೃತ್ಯಪಟುಗಳ ಹೆಜ್ಜೆ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ದೆಹಲಿಯಲ್ಲಿ ಇದೇ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿಯ ನೃತ್ಯಪಟುಗಳು ಹೆಜ್ಜೆ ಹಾಕಲಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ, ಈ ವರ್ಷ ವಿವಿಧ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಅದರಲ್ಲಿ ಭರತನಾಟ್ಯಂ ಕೂಡ ಒಂದಾಗಿದೆ. ಪರೇಡ್‌ನಲ್ಲೂ ಭಾಗವಹಿಸಲಿರುವ ಅಕಾಡೆಮಿಯ ಈ ಹತ್ತು ನೃತ್ಯಪಟುಗಳ ತಂಡವು, ಬೆಳಿಗ್ಗೆ 11.30ರ ಸುಮಾರಿಗೆ ಅರ್ಧ ತಾಸು ಕಾರ್ಯಕ್ರಮ ನೀಡಲಿದೆ.

ನಾಲ್ಕು ಹಂತದ ಸ್ಪರ್ಧೆ: ‘ಗಣರಾಜ್ಯೋತ್ಸವಕ್ಕೆ ನೃತ್ಯ ತಂಡಗಳನ್ನು ಆಯ್ಕೆ ಮಾಡುವುದಕ್ಕಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ ‘ವಂದೇ ಭಾರತಂ’ ಹೆಸರಿನಲ್ಲಿ ನವೆಂಬರ್ ತಿಂಗಳಲ್ಲಿ ಶಾಸ್ತ್ರೀಯ ನೃತ್ಯ ಸ್ಪರ್ಧೆ ಆಯೋಜಿಸಿತ್ತು. ಮೊದಲ ಎರಡು ಸ್ಪರ್ಧೆಗಳು ವರ್ಚುವಲ್ ಆಗಿ ನಡೆದಿದ್ದವು. ಅದಕ್ಕಾಗಿ ನಮ್ಮ ಅಕಾಡೆಮಿಯ ನೃತ್ಯಪಟುಗಳ ನೃತ್ಯದ ವಿಡಿಯೊ ಕಳಿಸಿ ಕೊಟ್ಟಿದ್ದೆವು’ ಎಂದು ಅಕಾಡೆಮಿಯ ಅಧ್ಯಕ್ಷೆ ವಿದುಷಿ ಹೇಮಾ ವಾಘಮೋಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘3ನೇ ಹಂತದ ವಲಯ ಮಟ್ಟದಸ್ಪರ್ಧೆಯು ಡಿ. 11ರಂದು ಬೆಂಗಳೂರಿನಲ್ಲಿ ನಡೆದಿತ್ತು. ಅಲ್ಲಿ ಆಯ್ಕೆಯಾದವರಿಗೆ ದೆಹಲಿಯಲ್ಲಿ 4ನೇ ಹಂತದ ಸ್ಪರ್ಧೆಯನ್ನು ಡಿ.19ರಂದು ಆಯೋಜಿಸಲಾಗಿತ್ತು. ದೇಶದಾದ್ಯಂತ 65 ನೃತ್ಯ ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರದರ್ಶಿಸಿದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಜೀವನ ಕುರಿತ ನೃತ್ಯ ರೂಪಕವು ತೀರ್ಪುಗಾರರ ಮೆಚ್ಚುಗೆ ಪಾತ್ರವಾಗಿ, ಗಣರಾಜ್ಯೋತ್ಸವಕ್ಕೆ ಆಯ್ಕೆಯಾಯಿತು. ದೇಶದ ಗಣರಾಜ್ಯೋತ್ಸವದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನೀಡಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ’ ಎಂದರು.

ನಿತ್ಯ 6 ತಾಸು ತರಬೇತಿ: ‘ನೃತ್ಯ ಕಾರ್ಯಕ್ರಮಕ್ಕೆ ಆಯ್ಕೆಯಾದ ನಾವು ಜ. 7ರಂದು ದೆಹಲಿಗೆ ಹೋದೆವು. ಅಲ್ಲಿ ನುರಿತ ನೃತ್ಯಪಟುಗಳು ನಿತ್ಯ ಆರು ತಾಸು ತರಬೇತಿ ನೀಡಿದರು. ಪರೇಡ್‌ ನಡೆಯಲಿರುವ ರಾಜಪಥ್‌ನಲ್ಲಿರುವ ಮೈದಾನದಲ್ಲಿ ಬೆಳಿಗ್ಗೆ ತರಬೇತಿಗಾಗಿ ಕರೆದೊಯ್ಯುತ್ತಿದ್ದರು. ನೃತ್ಯಕ್ಕೆ ಬೇಕಾದ ಉಡುಪನ್ನು ಆಯೋಜಕರೇ ಒದಗಿಸಿದ್ದಾರೆ’ ಎಂದು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ನೃತ್ಯಪಟು ಯುಕ್ತಾ ಕದಂಬ ಹೇಳಿದರು.

‘ವಂದೇ ಭಾರತಂ ಪರಿಕಲ್ಪನೆಯಡಿ ನಮ್ಮ ತಂಡದ ಹತ್ತು ಮಂದಿ ಸೇರಿದಂತೆ, ಒಟ್ಟು 80 ಮಂದಿ ಭರತನಾಟ್ಯಂ ಕಾರ್ಯಕ್ರಮ ನೀಡಲಿದ್ದೇವೆ. ದೇಶದ ವಿವಿಧ ಭಾಗದ ನೃತ್ಯಪಟುಗಳೆಲ್ಲರೂ ಸೇರಿ ಗಣರಾಜ್ಯೋತ್ಸವದಂದು ನೃತ್ಯ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಭಾವ ಮೂಡಿಸಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು