ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ: ಮೆರಗು ತಂದ ಮೆರವಣಿಗೆ

Last Updated 1 ನವೆಂಬರ್ 2022, 6:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಂಗ್ಲಿಷ್ ಕಲಿಯುವ ಮತ್ತು ಪ್ರೀತಿಸುವ ನಮಗೆ ಹಿಂದೆ ಬೇಡವಾಗಿದೆ. ರಾಷ್ಟ್ರದ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಕಲಿಯೋಣ. ರಾಜ್ಯಗಳ ಮೇಲೆ ಹಿಂದಿ ಹೇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವರೇ ಹೇಳಿದ್ದಾರೆ. ಹೀಗಾಗಿ, ಸರ್ಕಾರವನ್ನು ದೂರುವ ಕೆಲಸ ಮಾಡೋದು ಬೇಡ. ನಮ್ಮ ಭಾಷೆಯನ್ನು ಉಳಿಸುವ ಜೊತೆಗೆ ಇತರ ಭಾಷೆಗಳನ್ನು ಸಹ ಕಲಿಯೋಣ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಮಹಾನಗರ ಪಾಲಿಕೆಯು ನಗರದ ಸಿದ್ಧಾರೂಢ ಮಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಭುವನೇಶ್ವರಿ ಚಿತ್ರದ ಮೆರವಣಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದ ಬಗ್ಗೆ ಪಾಲಕರ ದೃಷ್ಟಿಕೋನ ಬದಲಾಗಬೇಕು.‌ ಇಂಗ್ಲಿಷ್ ವ್ಯಾಮೋಹ ತಗ್ಗಿಸಬೇಕು. ಪಾಲಕರ ಈ ಮನಸ್ಥಿತಿಯನ್ನು ಬದಲಾಯಿಸಬೇಕು. ಅದಕ್ಕಾಗಿ, ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯದೊಂದಿಗೆ ಗುಣಮಟ್ಟದ ಸೌಕರ್ಯ ನೀಡಿದರೆ, ಅದರ ಫಲಿತಾಂಶವೂ ಅಷ್ಟೇ ಉತ್ತಮವಾಗಿರುತ್ತದೆ. ಕನ್ನಡ ಹಾಗೂ‌ ಕನ್ನಡತನಕ್ಕೆ ಉತ್ತರ ಕರ್ನಾಟಕದ ಕೊಡುಗೆ ದೊಡ್ಡದು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಕನ್ನಡಿಗರು ಪಣ ತೊಡಬೇಕು. ಈ ಬಗ್ಗೆ ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡದಿದ್ದರೆ, ಕನ್ನಡ ಹೆಸರಿಗಷ್ಟೇ ಉಳಿಯುತ್ತದೆ. ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ಮಟ್ಟದ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಗೆ ಮಾತ್ರ ಆದ್ಯತೆ ನೀಡುತ್ತಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿದೆ. ಸರ್ಕಾರದ ಈ ನಡೆಯನ್ನು ಎಲ್ಲರೂ ವಿರೋಧಿಸಬೇಕು ಎಂದು ಕರೆ ನೀಡಿದರು.

ಘೋಷಣೆ ಕೂಗಿದರೆ ಭಾಷೆ ಬೆಳೆಯುವುದಿಲ್ಲ.‌ ಸರ್ಕಾರ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಕನ್ನಡ ಶಾಲೆಗಳನ್ನು ಮುಚ್ಚದೆ ಸಬಲೀಕರಣಗೊಳಿಸಬೇಕು.‌ ಕನ್ನಡ ಬೋರ್ಡ್ ಗಳ ಅಳವಡಿಕೆ ಮುಂದಾಗಬೇಕು. ನಮ್ಮ ದೇಶ ಭಾರತವಾದರೆ, ಬೇರು ಕನ್ನಡ ಎಂಬುದನ್ನು ಎಲ್ಲರೂ ಅರಿಯಬೇಕು. ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ, ಕರ್ನಾಟಕ ಏಕೀಕರಣಕ್ಕೆ ಧಾರವಾಡದ ಕೊಡುಗೆ ದೊಡ್ಡದು. ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಆಲೂರು ವೆಂಕಟರಾಯರು ಸೇರಿದಂತೆ ಹಲವರು ಅಖಂಡ ಕರ್ನಾಟಕಕ್ಕಾಗಿ ಶ್ರಮಿಸಿದರು. ಪೂರಕವಾಗಿ ಮೈಸೂರು ಮಹಾರಾಜರು ಕೂಡ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಸ್ಥಾಪಿಸಿ, ಕನ್ನಡತನಕ್ಕೆ ಅಡಿಪಾಯ ಹಾಕಿದರು ಎಂದರು.

ನೀರು ಸರಬರಾಜು, ಬೀದಿ ದೀಪ ಅಳವಡಿಕೆ, ತ್ಯಾಜ್ಯದಿಂದ 130 ಟನ್ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮಾರಾಟ ಮಾಡಲಾಗಿದೆ. ‌ಸ್ವಚ್ಛ ಸರ್ವೇಕ್ಷಣದಲ್ಲಿ ಪಾಲಿಕೆಯು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಅವಳಿನಗರದ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಮೇಯರ್ ಈರೇಶ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ ಹಾಗೂ ಪಾಲಿಕೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT