ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: 10 ದಿನದಲ್ಲಿ ‘ಮೇಕ್ ಶಿಫ್ಟ್ ವಾರ್ಡ್‌’ ನಿರ್ಮಾಣ

Last Updated 2 ಮೇ 2021, 9:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಕ್ಕಪಕ್ಕದ ಆರೇಳು ಜಿಲ್ಲೆಗಳಿಂದಲೂ ಸೋಂಕಿತರು ಧಾರವಾಡ ಜಿಲ್ಲೆಗೆ ಬರುತ್ತಿದ್ದಾರೆ. ಅವರಿಂದ ಜಿಲ್ಲೆಯ ಸೋಂಕಿತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು 10 ದಿನದಲ್ಲಿ ‘ಮೇಕ್ ಶಿಫ್ಟ್ ವಾರ್ಡ್‌’ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌)ಯಲ್ಲಿ ಭಾನುವಾರ ದಾನಿಗಳು ನೀಡಿದ 100 ಹಾಸಿಗೆಯನ್ನು ಕಿಮ್ಸ್‌ಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸೋಂಕಿತರಲ್ಲಿ ಶೇ30ರಿಂದ 35ರಷ್ಟು ಜನ ಹೊರ ಜಿಲ್ಲೆಯವರೇ ಇದ್ದಾರೆ. ಅವರಿಗೂ ಉತ್ತಮವಾದ ಚಿಕಿತ್ಸೆ ನೀಡಲಾಗುವುದು. ಕಿಮ್ಸ್ ಆವರಣದಲ್ಲಿ ಎರಡೂವರೆ ಎಕರೆ ಜಾಗದಲ್ಲಿ 100 ಹಾಸಿಗೆಗಳ ‘ಮೇಕ್ ಶಿಫ್ಟ್ ವಾರ್ಡ್‌’ ನಿರ್ಮಿಸಲಾಗುವುದು’ ಎಂದರು.

‘100 ಹಾಸಿಗೆಗಳ ವಾರ್ಡ್‌ನಲ್ಲಿ 10 ವೆಂಟಿಲೇಟರ್‌, 10 ಐಸಿಯು ಮತ್ತು 70 ಆಕ್ಸಿಜನ್‌ ಸೌಲಭ್ಯ ಹೊಂದಿರುವ ಬೆಡ್‌ಗಳು ಇರಲಿವೆ. ಕಿಮ್ಸ್‌ ವೈದ್ಯಕೀಯ ಸಿಬ್ಬಂದಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆಯಾಗಂತೆ ಕ್ರಮ ಕೈಗೊಳ್ಳಲಾಗಿದ್ದು, ಬೇರೆ ಕಡೆ ಆದ ಸಮಸ್ಯೆ ಇಲ್ಲಿಯೂ ಆಗಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ವಿವಿಧ ಕಂಪನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದರು.

‘ಇದು ವೈದ್ಯಕೀಯ ಲೋಕಕ್ಕೆ ಸವಾಲಿನ ಸಮಯ. ಆದ್ದರಿಂದ ಕಿಮ್ಸ್‌ ಸಿಬ್ಬಂದಿ ಮನಸ್ಸಿಟ್ಟು, ಸೇವಾ ಬದ್ಧತೆಯಿಂದ ಕೆಲಸ ಮಾಡಬೇಕು. ಕೋವಿಡ್‌ ಪರೀಕ್ಷೆಗೆ ಒಳಗಾದವರ ವರದಿ ಆದಷ್ಟು ಬೇಗನೆ ಕೊಡಲು ನಾಲ್ಕು ಶಿಫ್ಟ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ಲಸಿಕೆ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ ‘ವಿದೇಶಗಳಿಗೆ ಲಸಿಕೆ ನೀಡಿದ್ದನ್ನೇ ಮುಂದಿಟ್ಟುಕೊಂಡು ವಿವಿಧ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿವೆ. ಮೊದಲ ಅಲೆಯ ಸಮಯದಲ್ಲಿ ಅಮೆರಿಕದಲ್ಲಿ ಸೋಂಕಿನ ಹಾವಳಿ ವಿಪರೀತವಾಗಿದ್ದಾಗ ನಾವು ಅವರಿಗೆ ನೆರವಿನ ಹಸ್ತ ಚಾಚಿದ್ದೇವೆ. ಈಗ ಭಾರತಕ್ಕೆ 40 ರಾಷ್ಟ್ರಗಳು ನೆರವಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ವಿಶ್ವಾಸ ಹೆಚ್ಚಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಯಾವ ಪಕ್ಷಗಳೂ ರಾಜಕಾರಣ ಮಾಡಬಾರದು. ಕೋವಿಡ್‌ ಚಿಕಿತ್ಸೆಗೆ ಜಿಲ್ಲೆಯಲ್ಲಿ ಯಾವುದೇ ವೈದ್ಯಕೀಯ ಉಪಕರಣಗಳ ಕೊರತೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT