ಬುಧವಾರ, ಅಕ್ಟೋಬರ್ 23, 2019
25 °C
ಹೆಚ್ಚುವರಿ ಸಾರಿಗೆ ಆಯುಕ್ತ (ಉತ್ತರ– ಜಾರಿ) ಮಾರುತಿ ಸಾಂಬ್ರಾಣಿ ಸಲಹೆ: ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ದೂರವಾಣಿ ಕರೆಗಳ ಸುರಿಮಳೆ

ಮಧ್ಯವರ್ತಿ ದೂರವಿಡಿ; ಆನ್‌ಲೈನ್‌ ಸೇವೆ ಬಳಸಿ

Published:
Updated:
Prajavani

ಹುಬ್ಬಳ್ಳಿ: ‘ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಯಾವುದೇ ಕೆಲಸಕ್ಕೆ ನೀವು ಮಧ್ಯವರ್ತಿಗಳನ್ನು ನಂಬಬೇಡಿ. ಆನ್‌ಲೈನ್‌ ಮೊರೆ ಹೋಗಿ. ಇಲ್ಲವೇ ಹತ್ತಿರದ ಆರ್‌ಟಿಒ ಕಚೇರಿಗೆ ಖುದ್ದಾಗಿ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಿ...’

ಇದು ಹೆಚ್ಚುವರಿ ಸಾರಿಗೆ ಆಯುಕ್ತ (ಉತ್ತರ- ಜಾರಿ) ಮಾರುತಿ ಸಾಂಬ್ರಾಣಿ ಅವರು ಸಾರ್ವಜನಿಕರಿಗೆ ನೀಡಿದ ಸಲಹೆ.

ಗುರುವಾರ ಹುಬ್ಬಳ್ಳಿ ಕಚೇರಿಯಲ್ಲಿ ನಡೆದ ‘ಪ್ರಜಾವಾಣಿ’ ‘ಫೋನ್‌–ಇನ್’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿಬಂದ ಎಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದ ಮತ್ತು ವಿವರವಾಗಿ ಉತ್ತರಿಸಿ ಜನರ ಸಮಸ್ಯೆ, ಗೊಂದಲಗಳನ್ನು ಪರಿಹರಿಸಿದರು.

ಬಹಳಷ್ಟು ಕಡೆ ಇರುವ ಮಧ್ಯವರ್ತಿಗಳ ಹಾವಳಿ, ಲಂಚಾವತಾರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಹೇಗೆ ಎನ್ನುವ ಪ್ರಶ್ನೆಗೆ ತಾಂತ್ರಿಕತೆಯ ನೆರವು ಪಡೆಯಿರಿ ಎನ್ನುವುದೇ ಆಯುಕ್ತರ ಪರಿಹಾರವಾಗಿತ್ತು.

ಇಲಾಖೆ ವೆಬ್‌ಸೈಟ್‌ಗಳಾದ sarathi.parivahan.gov.in ಮತ್ತು transport.karnataka.gov.in ಮೂಲಕ ಎಲ್‌.ಎಲ್‌, ಡಿ.ಎಲ್‌. ಪಡೆಯುವುದು, ಆರ್‌.ಸಿ. ದಾಖಲೆಗಳ ನವೀಕರಣ ಮುಂತಾದ ಸೌಲಭ್ಯಗಳನ್ನು ಪಡೆಯಬಹುದು. ಜತೆಗೆ ನಿಮ್ಮ digi*ocker ಮೊಬೈಲ್‌ ಆ್ಯಪ್‌ ಮೂಲಕ ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಆರ್.ಸಿ. ದಾಖಲೆಗಳನ್ನು ಡೌನ್‌ಲೋಡ್‌ ಮಾಡಿಟ್ಟುಕೊಂಡು, ಸಂಚಾರ ಪೊಲೀಸರು ಕೇಳಿದಾಗ ತೋರಿಸಿ ಎಂದು ಅವರು ಸಲಹೆ ನೀಡಿದರು.

ಸಾರ್ವಜನಿಕರಿಂದ ಕೇಳಿಬಂದ ಪ್ರಶ್ನೆಗಳು ಹಾಗೂ ಆಯುಕ್ತರ ಉತ್ತರ ಇಲ್ಲಿದೆ.

* ಮಹೇಶ್‌, ಓಂನಗರ, ಕಲಬುರ್ಗಿ: ಕಲಬುರ್ಗಿ ಆರ್‌ಟಿಒ ಕಚೇರಿಯಲ್ಲಿ ಯಾವುದೇ ಕೆಲಸಕ್ಕೆ ಹೋದರೂ ಮೊದಲು ಮಧ್ಯವರ್ತಿಗಳು ಎದುರಾಗುತ್ತಾರೆ. ಎಲ್ಲ ಆನ್‌ಲೈನ್ ಎನ್ನುತ್ತಾರೆ, ಆದರೆ ಮಾಹಿತಿ ನೀಡುವವರೇ ಇಲ್ಲ.

ಕಚೇರಿಗೆ ಬರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಹೆಲ್ಪ್‌ ಡೆಸ್ಕ್ ಆರಂಭಿಸಲಾಗಿದೆ. ಮಧ್ಯವರ್ತಿಗಳ ಹಾವಳಿ ಇದ್ದರೆ, ಲಂಚ ಕೇಳಿದರೆ ಅಲ್ಲೇ ಇರುವ ಜಂಟಿ ಸಾರಿಗೆ ಆಯುಕ್ತರಿಗೆ ದೂರು ನೀಡಿ.

* ಮಲ್ಲಿಕಾರ್ಜುನ ಗಡೇದ (ಬೆಳಗಾವಿ): ವಾಹನವನ್ನು ಬೇರೆಯವರ ಹೆಸರಿಗೆ ವರ್ಗಾಯಿಸುವಾಗ ವಾಹನ ವಿಮೆ ಇರಬೇಕಾದುದು ಕಡ್ಡಾಯವೇ?

ಹೌದು, ಕಡ್ಡಾಯವಾಗಿ ವಾಹನ ವಿಮೆ ಇರಲೇಬೇಕು.

* ಚನ್ನಬಸಪ್ಪ ಜ್ಞಾನಗುಡಿ, ಹುಬ್ಬಳ್ಳಿ: 2002ರ ಮಾಡೆಲ್‌ನ ನನ್ನ ಆಟೊ ಪರ್ಮಿಟ್ ಮುಗಿದಿದೆ. ನವೀಕರಣ ಮಾಡಲು ಸಾಧ್ಯವೇ?

ಪರ್ಮಿಟ್‌ ಮುಗಿದಿದ್ದರೆ ನವೀಕರಣ ಆಗುವುದಿಲ್ಲ. ಹೊಸ ವಾಹನಗಳಿಗೆ ಮಾತ್ರ ನವೀಕರಣ ಮಾಡಲಾಗುತ್ತದೆ.

* ಕೃಷ್ಣಾ ಲೋಖಂಡೆ, ಹಾವೇರಿ: 15 ವರ್ಷಗಳ ಹಳೆಯ ಗಾಡಿಗಳ ನವೀಕರಣದ ಕುರಿತು ಮಾಹಿತಿ ನೀಡಿ‌.

ಪ್ರಯಾಣಿಕ ಸಾಗಣೆ ವಾಹನಗಳಿಗೆ ಸಂಬಂಧಿಸಿದಂತೆ 2019ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿತ್ತು. 15 ವರ್ಷಕ್ಕೂ ಹಳೆಯ ವಾಹನಗಳ ಪರವಾನಗಿ ನವೀಕರಿಸುವಂತಿರಲಿಲ್ಲ. ಆದರೆ, ಅದಕ್ಕೆ ರಾಜ್ಯ ಹೈಕೋರ್ಟ್‌ ತಡೆಯೊಡ್ಡಿದೆ. ಹೀಗಾಗಿ ನೀವು ಪರವಾನಗಿ, ಎಫ್‌.ಸಿ (ಫಿಟನೆಸ್‌ ಪ್ರಮಾಣ ಪತ್ರ) ನೀಡಿ ನವೀಕರಿಸಿಕೊಳ್ಳಬಹುದು.

*  ಶ್ರೀಮಂತ, ಕಲಬುರ್ಗಿ: ಇಲ್ಲಿ ಆಟೊ ಪರವಾನಗಿಗೆ ₹4,000, ಬ್ಯಾಡ್ಜ್‌ ನಂಬರ್‌ಗೆ ₹6,000 ಲಂಚ ಕೇಳುತ್ತಾರೆ.

ನೀವು ಆರ್‌ಟಿಒ ಕಚೇರಿಗೆ ಇಂದೇ ಹೋಗಿ. ಸಾಂಬ್ರಾಣಿ ಸರ್‌ ಅವರೊಂದಿಗೆ ಮಾತನಾಡಿದ್ದೇನೆ ಅಂತೇಳಿ. ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.

* ಜಹಾಂಗೀರ್‌, ರಾಣೆಬೆನ್ನೂರು: ಬೈಕ್‌ನ ಆರ್‌.ಸಿ.ದಾಖಲೆ ನವೀಕರಣ ಮಾಡಿಕೊಡಲು ತಾಂತ್ರಿಕ ತೊಂದರೆ ಇದೆ. ನಾಳೆ ಬಾ, ನಾಡಿದ್ದು ಬಾ ಎಂದು ಅಲೆದಾಡಿಸುತ್ತಿದ್ದಾರೆ.

ನೇರವಾಗಿ ಆರ್‌ಟಿಒ ಕಚೇರಿಗೆ ಹೋಗಿ ಕೇಳಿ. ಕೊಡದಿದ್ದರೆ ಮೇಲಧಿಕಾರಿಗೆ ದೂರು ದಾಖಲಿಸುತ್ತೇನೆ ಎಂದು ಎಚ್ಚರಿಕೆ ನೀಡಿ.

* ಸತೀಶ್‌, ಕಲಬುರ್ಗಿ: ನನಗೆ ಆಟೊ ಓಡಿಸಲು ಪರವಾನಗಿ ಸಿಕ್ಕಿದೆ. ಆದರೆ ಬ್ಯಾಡ್ಜ್‌ ಕೊಟ್ಟಿಲ್ಲ. ಆರ್‌ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ದಯವಿಟ್ಟು ಕ್ರಮ ಕೈಗೊಳ್ಳಿ.

ಹೆಲ್ಪ್‌ ಡೆಸ್ಕ್‌ನಲ್ಲಿ ನೀವು ಯಾವ ಕೆಲಸಕ್ಕೆ ಯಾವ ವಿಭಾಗವನ್ನು, ಯಾವ ಸಿಬ್ಬಂದಿಯನ್ನು ಭೇಟಿಯಾಗಬೇಕು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ನಿಮ್ಮ ಬಳಿ ಯಾರಾದರೂ ಲಂಚ ಕೇಳಿದರೆ ಜಂಟಿ ಆಯುಕ್ತರಿಗೆ ದೂರು ನೀಡಿ.

ಬೈಕ್‌ ಟ್ಯಾಕ್ಸಿಗೆ ಅವಕಾಶ ಕೊಡಿ
* ಕೇಶವ ತೆಲುಗು, ಧಾರವಾಡ: ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ತಮಿಳುನಾಡು ಮಾದರಿಯಲ್ಲಿ ‘ಬೈಕ್‌’ ಟ್ಯಾಕ್ಸಿಗಳಾಗಿ ಬಳಸಲು ಅವಕಾಶ ಕೊಡಿ.

ಸಾಂಬ್ರಾಣಿ: ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಓಡಿಸಲು ಪರವಾನಗಿ ನೀಡಲು ಅವಕಾಶವಿಲ್ಲ. ಬಾಡಿಗೆ ವಾಹನಗಳ (ರೆಂಟ್‌ ಕ್ಯಾಬ್‌) ನೋಂದಣಿ ಅಡಿಯಲ್ಲಿ ಬಾಡಿಗೆ ಬೈಕ್‌ಗಳ ಪರವಾನಗಿ ನೀಡಬಹುದು. ಜೊತೆಗೆ ಅಂಗವಿಕಲರಿಗೆ ನೀಡಿರುವ ತ್ರಿಚಕ್ರ ಬೈಕ್‌ಗಳು ‘ಕಪ್ಪು ಬೋರ್ಡ್‌’ ಹೊಂದಿರುವಂಥದ್ದು. ಹೀಗಾಗಿ ಅವುಗಳನ್ನು ಬೈಕ್‌ ಟ್ಯಾಕ್ಸಿಗಳಾಗಿ ಬಳಸಲು ಬರುವುದಿಲ್ಲ.

ಲಂಚ ಕೊಡದೇ ಕೆಲಸ ಆಗಲ್ಲ...
* ಗೋವಿಂದ ಕಾಂಬಳೆ (ಕಲಬುರ್ಗಿ): ಕಲಬುರ್ಗಿ ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್ಸ್‌ ಹಾವಳಿ ಜೋರಾಗಿದೆ. ಆನ್‌ಲೈನ್‌ ಪ್ರಿಂಟೆಡ್‌ ಅರ್ಜಿಯ ಬಲಬದಿಯಲ್ಲಿ ಸಂಕೇತ ನಮೂದಿಸಲಾಗುತ್ತದೆ. ಆಯಾ ಸಂಕೇತಕ್ಕೆ ಅನುಗುಣವಾಗಿ ₹500, 1,000, 1,500, 2,000 ಲಂಚ ಪಡೆಯಲಾಗುತ್ತದೆ. ಲಂಚ ಕೊಡದಿದ್ದರೆ ಎಲ್ಲವೂ ಸರಿ ಇದ್ದರೂ ಟೆಸ್ಟ್‌ ಡ್ರೈವ್‌ನಲ್ಲಿ ಫೇಲ್‌ ಮಾಡುತ್ತಾರೆ.

ಸಾಂಬ್ರಾಣಿ: ಈ ಕುರಿತು ಸಂಬಂಧಪಟ್ಟವರಿಗೆ ತಾಕೀತು ಮಾಡುತ್ತೇನೆ. ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮವಹಿಸಲಾಗುವುದು. ಇನ್ನೊಮ್ಮೆ ಈ ರೀತಿಯಾಗದಂತೆ ತಡೆಯಲಾಗುವುದು.

ಹಿರಿಯರಿಗೆ ಹೆಲ್ಮೆಟ್‌ನಿಂದ ವಿನಾಯಿತಿ ಸಿಗಬಹುದೇ?
* ಸಾಹೇಬ್ರೆ, ನಮ್ಮಲ್ಲಿ ಬಿಸಿಲು ಜಾಸ್ತಿ. ಹಾಗಾಗಿ ಹೆಲ್ಮೆಟ್‌ ಧರಿಸುವುದು ಕಷ್ಟವಾಗುತ್ತದೆ. ಜತೆಗೆ, ಹಿರಿಯ ನಾಗರಿಕರಿಗೆ ಕಿವಿ ಮಂದ ಇರುತ್ತದೆ. ಹೆಲ್ಮೆಟ್‌ ಹಾಕಿದರೆ ಕಿವಿ ಪೂರ್ತಿ ಕೇಳಿಸೋದೇ ಇಲ್ಲ. ಕತ್ತು ನೋವು ಕೂಡ ಬರುತ್ತದೆ. ಹಾಗಾಗಿ ವಿನಾಯಿತಿ ನೀಡಬಹುದೇ? ಎಂದು ಯಾದಗಿರಿಯ ಜಗನ್ನಾಥ ಪತ್ತಾರ ಕೇಳಿದರು.

ಸಾಂಬ್ರಾಣಿ: ಹಿರಿಯ ನಾಗರಿಕರಿಗೆ ಹೆಲ್ಮೆಟ್‌ನಿಂದ ವಿನಾಯಿತಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಕಿವಿ ಮಂದ ಆಗಿದ್ದರೆ, ಕತ್ತು ನೋವು ಬರುತ್ತಿದ್ದರೆ ಅಥವಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ವಾಹನ ಚಾಲನೆ ಮಾಡುವುದು ಸರಿಯಲ್ಲ. ಇದರಿಂದ ಅವರಿಗೂ ಅಪಾಯ, ಇತರರಿಗೂ ಅಪಾಯ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)