ಆಲಿಕಲ್ಲು ಸಹಿತ ಧಾರಾಕಾರ ಮಳೆ

ಗುರುವಾರ , ಏಪ್ರಿಲ್ 25, 2019
31 °C
ಅಸ್ತವ್ಯಸ್ತವಾದ ಅಶೋಕನಗರ ಸಂತೆ; ವ್ಯಾಪಾರಿಗಳು, ಗ್ರಾಹಕರ ಪರದಾಟ

ಆಲಿಕಲ್ಲು ಸಹಿತ ಧಾರಾಕಾರ ಮಳೆ

Published:
Updated:
Prajavani

ಹುಬ್ಬಳ್ಳಿ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಸಂಜೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿಯಿತು.

ಬೆಳಿಗ್ಗೆಯಿಂದ ಬಿರುಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಆಗಸದಲ್ಲಿ ಮೋಡಗಳು ದಟ್ಟೈಸಿದ್ದವು. ಸಂಜೆ ವೇಳೆಗೆ ಸುಮಾರು ಒಂದು ತಾಸು ಧಾರಾಕಾರ ಮಳೆ ಸುರಿಯಿತು.

ರಾಜನಗರ, ಅಶೋಕನಗರ, ವಿದ್ಯಾನಗರ ವ್ಯಾಪ್ತಿಯಲ್ಲಿ ಮಳೆಯೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದ ಕಾರಣ ಜನರು ಆಲಿಕಲ್ಲು ಆರಿಸುತ್ತಿದ್ದ ದೃಶ್ಯ ಕಂಡುಬಂದಿತು.

ಅಶೋಕ ನಗರದ ವಾರದ ಸಂತೆಗೆ ಮಳೆಯಿಂದ ತೀವ್ರ ತೊಂದರೆಯಾಯಿತು. ಕಾಯಿಪಲ್ಲೆ, ತರಕಾರಿಗಳು ಮಳೆ ನೀರಿನಲ್ಲಿ ತೇಲಿಹೋದವು. ಇದರಿಂದ ವ್ಯಾಪಾರಸ್ಥರಿಗೆ ನಷ್ಠವಾಯಿತು. ಭಾರಿ ಗಾಳಿಗೆ ಟೆಂಟ್‌ಗಳು ಹಾರಿಹೋದವು. ಸಂಜೆ ವೇಳೆಗೆ ಸಂತೆಗೆ ತೆರಳಿದ್ದ ಸಾರ್ವಜನಿಕರು ಮಳೆಯಲ್ಲಿ ಸಿಲುಕಿಕೊಂಡರು. ರಾತ್ರಿ ವರೆಗೂ ತುಂತುರು ಹನಿ ಜಿನುಗುತ್ತಿದ್ದ ಕಾರಣ ಹಾಗೂ ಗುಡುಗು, ಸಿಡಿಲಿನ ಆರ್ಭಟದಿಂದಾಗಿ ಕೆಲವರಿಗೆ ಸಂತೆಗೆ ಹೋಗಲು ಸಾಧ್ಯವಾಗಲಿಲ್ಲ.

ಲಿಂಗರಾಜ ನಗರದ ವೈಷ್ಣವಿ ಅಪಾರ್ಟ್‌ಮೆಂಟ್‌ ಬಳಿ ಹಾಗೂ ಬೆಂಗೇರಿಯ ಚೇತನಾ ಕಾಲೇಜು ಬಳಿ ತಲಾ ಒಂದೊಂದು ಮರಗಳು ಧರೆಗುರುಳಿವೆ.

ಸಂಚಾರಕ್ಕೆ ಅಡಚಣೆ: ಹುಬ್ಬಳ್ಳಿ–ಧಾರವಾಡ ನಡುವಿನ ಬಿಆರ್‌ಟಿಎಸ್‌ ರಸ್ತೆ ಮೇಲೆ ಅಲ್ಲಲ್ಲಿ ನೀರು ನಿಂತಿದ್ದ ಪರಿಣಾಮ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಯಿತು. ಗುಡುಗು, ಸಿಡಿಲಿನ ಅಬ್ಬರಕ್ಕೆ ನಗರದಲ್ಲಿ ತಡರಾತ್ರಿ ವರೆಗೂ ವಿದ್ಯುತ್‌ ಕೈಕೊಟ್ಟಿತು.

ಪ್ರಚಾರಕ್ಕೆ ಅಡ್ಡಿ: ಜಿಲ್ಲೆಯಾದ್ಯಂತ ದಿನಬಿಟ್ಟು ದಿನ ಸಂಜೆ ವೇಳೆಗೆ ಮಳೆಯಾಗುತ್ತಿರುವುದರಿಂದ ರಾಜಕೀಯ ಪಕ್ಷಗಳ ಮುಖಂಡರಿಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಗತೊಡಗಿದೆ.

ಕಂಗೊಳಿಸುತ್ತಿರುವ ಹಸಿರು: ಹೋಳಿ ಹುಣ್ಣಿಮೆ ದಿನದಿಂದ ಆರಂಭವಾಗಿರುವ ಮಳೆಯು ದಿನಬಿಟ್ಟು ದಿನ ಸುರಿಯುತ್ತಿರುವುದರಿಂದ ನಗರದಲ್ಲಿ ಮರ, ಗಿಡಗಳು ಚಿಗುರೊಡೆದು ಹಸಿರಿನಿಂದ ಕಂಗೊಳಿಸತೊಡಗಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !