ಬುಧವಾರ, ಸೆಪ್ಟೆಂಬರ್ 18, 2019
26 °C
₹2,000 ಲಂಚ ಪಡೆಯುತ್ತಿದ್ದ ವೇಳೆ ದಾಳಿ

ಹುಬ್ಬಳ್ಳಿ ಗ್ರಾಮೀಣ ಬಿಇಒ ಎಸಿಬಿ ಬಲೆಗೆ

Published:
Updated:
Prajavani

ಹುಬ್ಬಳ್ಳಿ: ಖಾಸಗಿ ಶಾಲೆ ಪರವಾನಗಿ ನವೀಕರಣ ಮಾಡಲು ಲಂಚ ಪಡೆಯುತ್ತಿದ್ದ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ. ಹುಡೇದಮನಿ ಹಾಗೂ ಎಫ್‌ಡಿಎ ಬಸವರಾಜ ಉನಕಿ ಅವರು ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ನಗರದ ಮ್ಯಾದಾರ ಓಣಿ ಬಳಿ ಇರುವ ಗ್ರಾಮೀಣ ಬಿಇಒ ಕಚೇರಿಯಲ್ಲಿ ಇವರಿಬ್ಬರೂ ಆಶಾ ಕುಲಕರ್ಣಿ ಅವರಿಂದ ₹2,000 ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಡಿಎಸ್‌ಪಿ ವಿಜಯಕುಮಾರ ಬಿಸ್ನಳ್ಳಿ ನೇತೃತ್ವದ ತಂಡ ದಾಳಿ ನಡೆಸಿದೆ.

ವಾಗ್ದೇವಿ ಎಜುಕೇಷನ್‌ ಸೊಸೈಟಿ ವತಿಯಿಂದ ನವನಗರದಲ್ಲಿ ಕಿಡ್ಸ್ ಪ್ಯಾರಡೈಸ್ ಪೂರ್ವ ಪ್ರಾಥಮಿಕ ಖಾಸಗಿ ಶಾಲೆ ತೆರೆಯಲಾಗಿದೆ. ಅದರ ನವೀಕರಣಕ್ಕಾಗಿ ಅಧ್ಯಕ್ಷೆ ಆಶಾ ಅವರಿಗೆ ಬಸವರಾಜ ಮೂಲಕ ಬಿಇಒ ಹುಡೇದಮನಿ ಅವರು ಹಣದ ಬೇಡಿಕೆ ಇಟ್ಟಿದ್ದರು.

ಮೂರು ವರ್ಷಗಳ ಅನುಮತಿಗೆ ₹2,000 ಕಚೇರಿಗೆ ತಂದು ನೀಡಲು ಬಿಇಒ ಹೇಳಿದ್ದಾರೆ ಎಂದು ಬಸವರಾಜ ಮೊಬೈಲ್‌ನಲ್ಲಿ ಆಶಾ ಅವರಿಗೆ ತಿಳಿಸಿದ್ದರು. ಈ ಕುರಿತು ಎಸಿಬಿ ಠಾಣೆಗೆ ದೂರು ನೀಡಿದ್ದರು. ಹಣ ಪಡೆಯುವಾಗ ಎಸಿಬಿ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದಿದೆ.

ಇನ್‌ಸ್ಪೆಕ್ಟರ್‌ ಬಿ.ಎ. ಜಾಧವ, ಶ್ರೀಶೈಲ ಕಾಜಗಾರ, ಗಿರೀಶ ಮನಸೂರ, ಲೋಕೇಶ ಬೆಂಡಿಕಾಯಿ, ಶಿವಾನಂದ ಕೆಲವಡಿ, ಕಾರ್ತಿಕ ಹುಯಿಲಗೋಡ ತಂಡ ದಾಳಿ ನಡೆಸಿತ್ತು.

Post Comments (+)