ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ | ನೇರಳೆ ಹಣ್ಣಿಗೆ ಬಂತು ಬೇಡಿಕೆ; 1 ಕೆ.ಜಿಗೆ ₹200ರಿಂದ ₹250ಕ್ಕೆ ಮಾರಾಟ

ಮಧುಮೇಹಿಗಳಿಗೆ ಔಷಧವಾಗಿ ಕೆಲಸ ಮಾಡುವ ಹಣ್ಣು
ಅಬ್ದುಲರಝಾಕ ನದಾಫ
Published 5 ಜುಲೈ 2024, 5:24 IST
Last Updated 5 ಜುಲೈ 2024, 5:24 IST
ಅಕ್ಷರ ಗಾತ್ರ

ನವಲಗುಂದ: ಪಟ್ಟಣದ ಗಾಂಧಿಮಾರುಕಟ್ಟೆ, ಲಿಂಗರಾಜ ವೃತ್ತ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ನೇರಳೆ ಹಣ್ಣುಗಳ ಮಾರಾಟ ಜೋರಾಗಿದೆ. ಕೆಲವರು ಬಳ್ಳಾರಿ, ಬೆಳಗಾವಿ, ಮಂತ್ರಾಲಯದಿಂದ ಹಣ್ಣು ತಂದು ಮಾರುತ್ತಿದ್ದಾರೆ. ಕೆಲವರು ಹಳ್ಳಿಗಳಲ್ಲಿ ರೈತರು ಬೆಳೆಯುವ ನೇರಳೆ ಹಣ್ಣಿನ ಗಿಡಗಳನ್ನು ಗುತ್ತಿಗೆ ಪಡೆದಿದ್ದಾರೆ.

ಕೆ.ಜಿ.ಗೆ ₹200ರಿಂದ ₹250ಕ್ಕೆ ಹಣ್ಣು ವಹಿವಾಟು ನಡೆಯುತ್ತಿದೆ. ಈ ಭಾಗದಲ್ಲಿ ನೇರಳೆ ಮತ್ತು ಕವಳೆ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಕೇವಲ ಎರಡು ತಿಂಗಳು ಸಿಗುವ ನೇರಳೆ ಹಣ್ಣು ಸಕ್ಕರೆ ಕಾಯಿಲೆಗೆ ರೋಗ ನಿರೋಧಕ ಶಕ್ತಿ ಇದ್ದಂತೆ. ಹಣ್ಣಿನ ಹಾಗೆಯೇ ಬೀಜಕ್ಕೂ ಬೇಡಿಕೆ ಇದೆ.

‘ನೇರಳೆ ಹಣ್ಣಿನಲ್ಲಿ ಹಲವು ವಿಧಗಳಿವೆ. ಗಾತ್ರದಲ್ಲಿ ದೊಡ್ಡದು ಎನಿಸಿರುವ ಜಂಬು ನೇರಳೆಗೆ ಬೇಡಿಕೆ ಹೆಚ್ಚು’ ಎನ್ನುತ್ತಾರೆ ವ್ಯಾಪಾರಿ ರಾಮಪ್ಪ ಶಿರೋಳ.

‘ಸಕ್ಕರೆ ಕಾಯಿಲೆ ಹೊಂದಿದವರು ಈ ಹಣ್ಣನ್ನು ಸೇವಿಸಬಹುದು. ಹಣ್ಣಿನ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಔಷಧದ ರೂಪದಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ನೇರಳೆ ಹಣ್ಣು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸುತ್ತದೆ. ಪೈಲ್ಸ್ ಸಮಸ್ಯೆ ಇರುವವರು ಇದನ್ನು ಆಗಾಗ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು. ಕಣ್ಣಿನ ಆರೋಗ್ಯವನ್ನೂ ಕಾಪಾಡುವ ಈ ಪಾನೀಯವನ್ನು ಮಕ್ಕಳಿಗೂ ಕುಡಿಸಬಹುದು’ ಎನ್ನುವುದು ಖಾಸಗಿ ಆಸ್ಪತ್ರೆ ವೈದ್ಯ ಮಹೇಶ ಹಿರೇಮಠ ಅವರ ಸಲಹೆ.

‘ಮಳೆಗಾಲದಲ್ಲಿ ನೇರಳೆ ಹಾಗೂ ಕವಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ನೇರಳೆ ಹಣ್ಣು ಹೇರಳ ಚೌಷಧೀಯ ಗುಣ ಹೊಂದಿದೆ. ಈ ಹಣ್ಣುಗಳು ಮಧುಮೇಹಿಗಳಿಗೆ ಸಾಕಷ್ಟು ಉಪಕಾರಿ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಬಿ. ಕರ್ಲವಾಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT