ಶುಕ್ರವಾರ, ಜೂನ್ 5, 2020
27 °C

‘ಅವ್ವನ ಬಗಲಲ್ಲೇ ಮಣ್ಣಾಗಬೇಕು ಅನ್ನುತ್ತಿದ್ದ ಅಪ್ಪಾಜಿ...’

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ‘ನನ್ನಾಸೆ ಒಂದೇ. ಸತ್ತ ಮೇಲೆ ನಿಮ್ಮವ್ವನ ಬಗಲಲ್ಲೇ ನಾನೂ ಮಣ್ಣಾಗಬೇಕು...’ – ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ಉಸಿರೆಳೆದುಕೊಂಡು ತಡೆದುಕೊಳ್ಳುತ್ತಲೇ, ತಂದೆ ಪಾಟೀಲ ಪುಟ್ಟಪ್ಪ ಅವರ ಕೊನೆಯ ಆಸೆಯನ್ನು ಹಿರಿಯ ಮಗಳಾದ ಮಂಜುಳಾ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಅವ್ವ ಇಂದುಮತಿ ಅಪ್ಪಾಜಿಯ ಸರ್ವಸ್ವವಾಗಿದ್ದರು. ಹಾಗಾಗಿ, ಅವ್ವ ಸತ್ತಾಗ ಯಾರ ವಿರೋಧವನ್ನೂ ಲೆಕ್ಕಿಸದೆ, ಮನೆಯಂಗಳದಲ್ಲೇ ಸಮಾಧಿ ಮಾಡಿ, ಅವ್ವನ ಪುತ್ಥಳಿಯನ್ನು ಸ್ಥಾಪಿಸಿದ್ದರು. ಅವ್ವ ಹೋದ ಬಳಿಕ, ಅವರಲ್ಲಿದ್ದ ಉತ್ಸಾಹ ಕಮ್ಮಿಯಾಗಿತ್ತು’ ಎಂದು ಪಾಪುವಿನ ಅಂದಿನ ಮನಸ್ಥಿತಿ ಬಗ್ಗೆ ಬಿಚ್ಚಿಟ್ಟರು.

‘ಅವ್ವನ ವಿಷಯ ಮಾತನಾಡುವಾಗಲೆಲ್ಲಾ, ‘ನಾ ಸತ್ತಾಗ ನನ್ನನ್ನೂ ಅವಳ ಬಗಲಲ್ಲೇ ಮಣ್ಣು ಮಾಡಿ. ಅವಳ ಜತೆಯಲ್ಲೇ ನಾನೂ ಇರುತ್ತೇನೆ’ ಎಂದು ಹೇಳುತ್ತಿದ್ದರು. ‘ನೀ ಹೀಂಗೆಲ್ಲಾ ಮಾತಾಡಬ್ಯಾಡ ನೋಡು’ ಎಂದರೆ, ‘ಯಾಕ್ ಸಿಟ್ಟಾಕ್ತಿ. ನನ್ನಾಸೆ ಇದೊಂದಾ ನೋಡು’ ಎಂದು ನಗುತ್ತಿದ್ದರು’ ಎಂದು  ತಂದೆಯ ಮನದ ಇಂಗಿತದ ಬಗ್ಗೆ ತಿಳಿಸಿದರು.

‘ಮಾ. 15ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೆಲ ಗಣ್ಯರು ಅಪ್ಪಾಜಿಯನ್ನು ಕಿಮ್ಸ್‌ನಲ್ಲಿ ಭೇಟಿ ಮಾಡಿದರು. ಸಚಿವರಾದ ಜಗದೀಶ ಶೆಟ್ಟರ್ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು. ಆಗ, ಅವರೊಂದಿಗೆ ಅಪ್ಪಾಜಿಯ ಕೊನೆಯ ಆಸೆ ಬಗ್ಗೆ ತಿಳಿಸಿದ್ದೆ. ಅದರ ಬಗ್ಗೆ ಯೋಚಿಸುವ ಸಮಯ ಇದಲ್ಲ ಎಂದು ಎಲ್ಲರೂ ಹೇಳಿದ್ದರು’ ಎಂದರು.

‘ಯಾವುದೇ ಪ್ರಶಸ್ತಿ, ಬಿರುದುಗಳನ್ನೂ ಬಯಸದ ಅಪ್ಪಾಜಿಯ ಕಡೆಯಾಸೆಯೂ ಈಡೇರಲಿಲ್ಲ. ಇದೀಗ ಹಲಗೇರಿಯಲ್ಲಿ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ. ಅವ್ವ ಹುಬ್ಬಳ್ಳಿಯಲ್ಲಿ, ಅಪ್ಪಾಜಿ ಹಲಗೇರಿಯಲ್ಲಿ... ಸತ್ತ ಮೇಲೂ ಅವರಿಬ್ಬರನ್ನು ಒಂದು ಮಾಡಲು ನಮ್ಮಿಂದಾಗಲಿಲ್ಲ ನೋಡಿ’ ಎಂದು ಮಂಜುಳಾ ಕಣ್ಣೀರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.