ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕೋವಿಡ್–19 ತಗ್ಗಿದರೆ ಬಸ್ ಸಂಚಾರಕ್ಕೆ ಅವಕಾಶ: ಸಚಿವ ಜಗದೀಶ ಶೆಟ್ಟರ್

Last Updated 10 ಮೇ 2020, 8:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೋವಿಡ್–19 ಪ್ರಕರಣಗಳು ತಗ್ಗಿದರೆ, ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಲೋಕಪ್ಪನ ಹಕ್ಕಲದಲ್ಲಿ ಭಾನುವಾರ ಪೌರ ಕಾರ್ಮಿಕರಿಗೆ ದಿನಸಿ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಹಸಿರು ವಲಯಗಳಾಗಿ ಗುರುತಿಸಿಕೊಂಡಿರುವ ಜಿಲ್ಲೆಗಳಲ್ಲಿ ಈಗಾಗಲೇ ಬಸ್‌ ಸಂಚಾರ ಆರಂಭಿಸಲಾಗಿದೆ’ ಎಂದರು.

‘ಧಾರವಾಡ ಜಿಲ್ಲೆಯಲ್ಲಿ ಕೋವಿಡ್–19 ಕಾಣಿಸಿಕೊಂಡಿದ್ದ ಒಟ್ಟು 12 ಮಂದಿ ಪೈಕಿ, ಇನ್ನೂ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಅವರೂ ಗುಣಮುಖರಾಗುವ ವಿಶ್ವಾಸವಿದ್ದು, ಒಮ್ಮೆ ಆಸ್ಪತ್ರೆಯಿಂದ ಬಿಡುಗಡೆಯಾದರೆ ಬಸ್ ಸಂಚಾರ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಕೊರೊನಾ ವಿಶ್ವವನ್ನೇ ಕಾಡುತ್ತಿದೆ. ಭಾರತದಲ್ಲಿ ಈ ಸೋಂಕು ಹರಡದಂತೆ ತಡೆಯಲು 41 ದಿನ ಲಾಕ್‌ಡೌನ್‌ ಮಾಡುವ ಮೂಲಕ, ಒಂದು ಮಟ್ಟಿಗೆ ಹತೋಟಿಗೆ ತರಲಾಗಿದೆ. ಇದೀಗ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ’ ಎಂದರು.

‘ಜನರು ಇನ್ನು ಮುಂದೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಇಲ್ಲದೆ ಯಾರೂ ಹೊರಗೆ ಬರಬಾರದು. ಹೊರಗಡೆ ಬಂದಾಗ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಕೊರೊನಾ ತಡೆಗೆ ಸರ್ಕಾರದ ಜವಾಬ್ದಾರಿಯಷ್ಟೇ, ಜನರ ಹೊಣೆಗಾರಿಕೆಯೂ ಹೆಚ್ಚಿದೆ’ ಎಂದು ಹೇಳಿದರು.

‘ಕೊರೊನಾ ತಡೆಗಾಗಿ ವಿವಿಧ ಇಲಾಖೆಗಳ ಸಿಬ್ಬಂದಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅದೇ ರೀತಿ ಪೌರ ಕಾರ್ಮಿಕರು ಕೂಡ, ಜೀವದ ಹಂಗು ತೊರೆದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ದುಡಿಯುತ್ತಿರುವವರಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಮುಖಂಡರಾದ ಲಿಂಗರಾಜ ಪಾಟೀಲ ಹಾಗೂ ಸಂತೋಷ ಚವ್ಹಾಣ ಇದ್ದರು.

₹2 ಲಕ್ಷ ದೇಣಿಗೆ
ಕೋವಿಡ್–19 ವಿರುದ್ಧದ ಹೋರಾಟಕ್ಕಾಗಿ ಲೋಕಪ್ಪನ ಹಕ್ಕಲ ನಿವಾಸಿ ಹಾಗೂ ಗುತ್ತಿಗೆದಾರ ಟಿ.ಜಿ. ಸೇಠ್‌ ಅವರು, ಪ್ರಧಾನಮಂತ್ರಿ ಪರಿಹಾರ ನಿಧಿಗೆ ₹2 ಲಕ್ಷದ ಚೆಕ್ ಅನ್ನು ಸಚಿವ ಜಗದೀಶ ಶೆಟ್ಟರ್ ಅವರಿಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT