ಬುಧವಾರ, ಆಗಸ್ಟ್ 10, 2022
20 °C
100 ಹಾಸಿಗೆಗಳ ಸೌಲಭ್ಯ, ಮೂರು ವಾರಗಳಲ್ಲಿ ಪೂರ್ಣಗೊಂಡ ಕಾಮಗಾರಿ

ಹುಬ್ಬಳ್ಳಿ ಕಿಮ್ಸ್‌ನಲ್ಲಿ ‘ಮೇಕ್‌ ಶಿಫ್ಟ್‌ ಆಸ್ಪತ್ರೆ’ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಗರದ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ‘ಮೇಕ್‌ ಶಿಫ್ಟ್‌ ಆಸ್ಪತ್ರೆ’ಯ ಉದ್ಘಾಟನೆ ಶನಿವಾರ ನಡೆಯಿತು.

ಅನಿಲ್‌ ಅಗರವಾಲ್‌ ಫೌಂಡೇಷನ್‌ನ ವೇದಾಂತ್ ಕೇರ್ಸ್ ಕೋವಿಡ್ ಫೀಲ್ಡ್‌ ಕಂಪನಿ ಮೂರು ವಾರಗಳಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಇದರಲ್ಲಿ 20 ಹಾಸಿಗೆಗಳಿಗೆ ಐಸಿಯು ಸೌಲಭ್ಯವಿದೆ.

ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ’ದೇಶದಲ್ಲಿ ಕೋವಿಡ್‌ ಮೂರನೆ ಅಲೆ ಬರಬಾರದು ಎನ್ನುವ ಆಶಯ ನನ್ನದು. ಒಂದು ವೇಳೆ ಬಂದರೂ ಅದನ್ನು ಎದುರಿಸಲು ಬೇಕಾದ ಸಿದ್ಧತೆ ಮಾಡಿಟ್ಟುಕೊಂಡಿದ್ದೇವೆ. ಮೊದಲನೆ ಅಲೆ  ಸಮಯದಲ್ಲಿ ಅಮೆರಿಕದಲ್ಲಾದ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ನಮ್ಮಲ್ಲಿ ಸಾವು ಕಡಿಮೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಲಸಿಕೆ ಹಾಕುವುದು ಹಾಗೂ ಕೋವಿಡ್ ನಿರ್ವಹಣೆ ಸವಾಲಿನ ಕೆಲಸ’ ಎಂದರು.

’ಬಿಹಾರ್‌ ಹಾಗೂ ಉತ್ತರ ಪ್ರದೇಶದಲ್ಲಿ ಲಸಿಕೆ ಪಡೆಯಲು ಜನ ಈಗಲೂ ಮುಂದೆ ಬರುತ್ತಿಲ್ಲ. ದೇಶದ ಎಲ್ಲ ಜನರಿಗೂ ಲಸಿಕೆ ನೀಡಬೇಕೆನ್ನುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದು, ನವೆಂಬರ್‌ ಅಥವಾ ಡಿಸೆಂಬರ್‌ ತನಕ ಕೇಂದ್ರವೇ ಲಸಿಕೆ ನೀಡಲಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ’ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ 15ರಿಂದ 20 ಮೆಟ್ರಿಕ್‌ ಟನ್‌ ಆಮ್ಲಜನಕ ಸಂಗ್ರಹ ಮಾಡಿಟ್ಟುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಇದರಿಂದ ಮುಂದೆ ಆಮ್ಲಜನಕದ ಕೊರತೆ ಕಾಡುವುದಿಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರಿಂದ ಈಗ ಆಮ್ಲಜನಕದ ಬೇಡಿಕೆ ಕಡಿಮೆಯಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಾಗಿ ಬೇಕಿರುವುದನ್ನು ಬಿಟ್ಟು ಉಳಿದದ್ದನ್ನು ಕೈಗಾರಿಕೆಗಳಿಗೆ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ’ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ’ಹೆಚ್ಚು ಒತ್ತಡವಿದ್ದರೂ ಕಿಮ್ಸ್‌ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ನಾನು ಅಲ್ಲಿದ್ದು ಚಿಕಿತ್ಸೆ ಪಡೆದಾಗ ಅಲ್ಲಿನ ಸಿಬ್ಬಂದಿ ನೋಡಿಕೊಂಡ ರೀತಿ ಮೆಚ್ಚುವಂಥದ್ದು. ಸೋಂಕಿನ ವಿರುದ್ಧ ಹೋರಾಡಲು ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಸೋಂಕು ಮುಕ್ತವಾದ ಮೇಲೆ ರಾಜಕೀಯ ಮಾಡೋಣ’ ಎಂದರು.

ವೇದಾಂತ ಕಂಪನಿಯ ನಿರ್ದೇಶಕ ಅನಿಲ ಅಗರವಾಲ್ ಲಂಡನ್‌ನಿಂದ ಆನ್‌ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್‌, ಹೂಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ವೇದಾಂತ ಕಂಪನಿಯ ಮುಖ್ಯಾಧಿಕಾರಿ ನಾರಾಯಣ, ರಾಜ್ಯ ನಿರ್ದೇಶಕ ಕೃಷ್ಣ ರಾವ್‌, ಸುನೀಲ ಇದ್ದರು.

 

ಸೋಂಕಿತರಿಗೆ ಮೇಕ್‌ಶಿಫ್ಟ್‌: ಜೋಶಿ

ಸದ್ಯಕ್ಕೆ ಕಿಮ್ಸ್‌ನ ಪಿಎಂಎಸ್‌ಎಸ್‌ವೈ ಕಟ್ಟಡ ಹಾಗೂ ಹಳೇ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಈಗ ಕಡಿಮೆಯಾಗುತ್ತಿರುವುದರಿಂದ ಕೆಲ ದಿನಗಳ ಬಳಿಕ ಎಲ್ಲ ಸೋಂಕಿತರನ್ನು ಪೂರ್ಣ ಪ್ರಮಾಣದಲ್ಲಿ ಮೇಕ್‌ ಶಿಫ್ಟ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗುವುದು. ಹಳೇ ಹಾಗೂ ಹೊಸ ಕಟ್ಟಡದಲ್ಲಿ ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಜೋಶಿ ಹೇಳಿದರು.

ಆಸ್ಪತ್ರೆಗಳಿಗೆ ದಾನಿಗಳು ನೀಡಿದ ವೈದ್ಯಕೀಯ ಉಪಕರಣಗಳು ಸಂಪೂರ್ಣವಾಗಿ ಬಡವರಿಗೆ ಬಳಕೆಯಾಗಬೇಕು. ಇವುಗಳ ಮೇಲೆ ನಿಗಾವಹಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ರಚಿಸಬೇಕು ಎಂದು ಹೇಳಿದರು.

 

’ರಾಜ್ಯದಲ್ಲಿಯೇ ಹೆಚ್ಚು ಶಸ್ತ್ರಚಿಕಿತ್ಸೆ‘

ಕಪ್ಪು ಶಿಲೀಂದ್ರ ಸೋಂಕಿಗೆ ತುತ್ತಾದ 108 ರೋಗಿಗಳಿಗೆ ಕಿಮ್ಸ್‌ನಲ್ಲಿ ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, 80ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ರೋಗಿಗಳಿಗೆ ರಾಜ್ಯದಲ್ಲಿ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ ಹೆಗ್ಗಳಿಕೆ ಕಿಮ್ಸ್‌ ಹೊಂದಿದೆ. ಒಬ್ಬ ವ್ಯಕ್ತಿಯ ಶಸ್ತ್ರಚಿಕಿತ್ಸೆಗೆ ನಾಲ್ಕು ತಾಸು ಬೇಕಾಗುತ್ತದೆ ಎಂದು ಶೆಟ್ಟರ್‌ ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು