ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಮಿತಿ ಹೆಚ್ಚಿಸಿ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಲು ಸಲಹೆ

ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ಧ ಶೆಟ್ಟಿ ಸಲಹೆ
Last Updated 17 ಫೆಬ್ರುವರಿ 2021, 12:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಲ್ಲಿ ಈಗ ಮೀಸಲಾತಿಗೆ ಸಂಬಂಧಿಸಿದಂತೆ ಹಲವು ಹೋರಾಟಗಳು ನಡೆಯುತ್ತಿವೆ. ಇದಕ್ಕಿರುವ ಏಕೈಕ ಪರಿಹಾರ, ಮೀಸಲಾತಿಗೆ ಇರುವ ಶೇ 50 ಮಿತಿಯನ್ನು ಹೆಚ್ಚಿಸಬೇಕು ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ಧ ಶೆಟ್ಟಿ ಹೇಳಿದರು.

‘ಹಿಂದೆಂದೂ ಕಾಣದ ಮೀಸಲಾತಿ ಬೇಡಿಕೆ ಹೋರಾಟಗಳಿಗೆ ಮತ ಬ್ಯಾಂಕ್ ರಾಜಕಾರಣವೇ ಕಾರಣ. ಈಗಿರುವ ಮೀಸಲಾತಿ ಮಿತಿಯಲ್ಲೇ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾದರೆ, ಜೇನು ಗೂಡಿಗೆ ಕೈ ಹಾಕಿದಂತಾಗುತ್ತದೆ. ಇದರಿಂದ ವರ್ಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜನಸಂಖ್ಯಾವಾರು ಮೀಸಲಾತಿ ಜಾರಿಯಾದಾಗಷ್ಟೇ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ಅದಕ್ಕಾಗಿ, ಕೇಂದ್ರ ಸರ್ಕಾರ ಮೀಸಲಾತಿ ಮಿತಿಯನ್ನು ಹೆಚ್ಚಿಸಬೇಕು. ಈಗಿರುವ ಕಾಯ್ದೆಗೆ ತಿದ್ದುಪಡಿ ತರಬೇಕು. ಇದ್ಯಾವುದೂ ಸದ್ಯಕ್ಕೆ ಆಗುವ ಕೆಲಸವಲ್ಲ’ ಎಂದು ಅಭಿಪ್ರಾಯಪಟ್ಟರು.

ವರದಿ ಬಹಿರಂಗಪಡಿಸಿ

‘ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಹಾಗೂ ಜಾತಿಗಳ ಸ್ಥಿತಿ ಕುರಿತು ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಮೊದಲು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ಸಮುದಾಯಯವೊಂದರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯೇ ಮೀಸಲಾತಿಗೆ ಆಧಾರ. ಇದಕ್ಕಾಗಿ ಸಮುದಾಯಗಳ ಕುರಿತು ಅಧ್ಯಯನ ನಡೆಯಬೇಕು. ಆದರೆ, ಈಗಾಗಲೇ ನಡೆದಿರುವ ಅಧ್ಯಯನಗಳ ವರದಿ ಬಹಿರಂಗಕ್ಕೆ ಮುಂದಾಗದ ಸರ್ಕಾರ, ಅದ್ಯಾವ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸುವ ಭರವಸೆ ನೀಡುತ್ತಿದೆ?’ ಎಂದು ಪ್ರಶ್ನಿಸಿದರು.

‘ಬಲಿಷ್ಠ ಸಮುದಾಯಗಳು ನಡೆಸುತ್ತಿರುವ ಮೀಸಲಾತಿ ಹೋರಾಟ ನೈಜವಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕನನ್ನು ಸೃಷ್ಟಿಸುವ ಭಾಗವಾಗಿ, ಹೋರಾಟಗಳು ನಡೆಯುತ್ತಿವೆ. ಆದರೂ, ಎಲ್ಲರ ಬೇಡಿಕೆಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡುತ್ತಿರುವ ಹಾಸ್ಯಾಸ್ಪದವಾಗಿದೆ’ ಎಂದರು.

ಒಕ್ಕೂಟದ ಬೋರಪ್ಪ ಶೆಟ್ಟಿ, ಅಶೋಕ ಬಡಿಗೇರ, ವಿ.ಡಿ. ಜಾಧವ, ಇ.ಎಸ್. ಇಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT