ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಯಿಂದ ಹೆಚ್ಚಿದ ಪಾರದರ್ಶಕತೆ: ನಾಗೇಂದ್ರ ಕುಮಾರ್‌

ಉದ್ಯಮಿಗಳು, ಸಿಎಗಳ ಜೊತೆಗಿನ ಸಂವಾದ
Last Updated 5 ಏಪ್ರಿಲ್ 2019, 14:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಿಎಸ್‌ಟಿ ಬಂದ ಬಳಿಕ ಸಣ್ಣ ಕೈಗಾರಿಕಾ ಉದ್ಯಮಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ದೊಡ್ಡ ಕಂಪನಿಗಳಿಂದ ಕಚ್ಚಾವಸ್ತು ತರಿಸಲು ಮುಂಗಡ ಹಣ ಕೊಡಬೇಕಾಗುತ್ತದೆ. ಇದರಿಂದ ನಮಗೆ ತೆರಿಗೆ ತೋರಿಸುವುದು, ಬಿಲ್‌ ಹಾಕುವುದು ಎರಡೂ ಕಷ್ಟವಾಗುತ್ತಿದೆ. ಇದಕ್ಕೆ ಪರಿಹಾರವಿಲ್ಲವೇ...’

ನಗರದ ಉದ್ಯಮಿ ಸಂದೀಪ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ತೆರಿಗೆ ಇಲಾಖೆಯ ಬೆಂಗಳೂರು ವಲಯದ ಮುಖ್ಯ ಆಯುಕ್ತ ಡಿ.ಪಿ. ನಾಗೇಂದ್ರ ಕುಮಾರ್ ಅಷ್ಟೇ ಚುರುಕಿನ ಉತ್ತರ ನೀಡಿದರು.

‘ಹೆಸರು ನೋಂದಾಯಿಸದ ಕೆಲ ಕಂಪನಿಗಳು ತೆರಿಗೆ ಉಳಿಸಲು ಅಡ್ಡಹಾದಿ ಹಿಡಿದಿವೆ. ಆದ್ದರಿಂದ ಪಾರದರ್ಶಕತೆ ತರುವ ಸಲುವಾಗಿ ಜಿಎಸ್‌ಟಿ ಕಡ್ಡಾಯ ಮಾಡಲಾಗಿದೆ. ಮುಂಗಡ ಹಣಕೊಟ್ಟಾಗ ಅದನ್ನು ತೆರಿಗೆಯಲ್ಲಿ ತೋರಿಸಲು ಬರುವುದಿಲ್ಲ. ನಿಮಗೆ ಬಿಲ್‌ ಬಂದ ಮೇಲೆ ಅದರ ಆಧಾರದ ಮೇಲೆ ತೆರಿಗೆ ವರದಿ ಸಲ್ಲಿಸಬೇಕು’ ಎಂದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಶುಕ್ರವಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಕೇಳಿಬಂದ ಪ್ರಶ್ನೋತ್ತರಗಳು ಇವು.

ಸುಮಾರು ಎರಡು ಗಂಟೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಆಯುಕ್ತರು ಎಲ್ಲರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಜಿಎಸ್‌ಟಿಯನ್ನು ಇನ್ನಷ್ಟು ಗ್ರಾಹಕ ಸ್ನೇಹಿ ಮಾಡಬೇಕು ಎನ್ನುವ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದರು.

ಉದ್ಯಮಿಗಳು, ಚಾರ್ಟೆಂಡ್‌ ಅಕೌಂಟೆಂಟ್‌ಗಳ ಜೊತೆಗಿನ ಸಂವಾದಕ್ಕೂ ಮೊದಲು ಉದ್ಘಾಟನಾ ಭಾಷಣ ಮಾಡಿದ ನಾಗೇಂದ್ರ ಕುಮಾರ್‌ ‘ದೇಶದ ಎಲ್ಲ ಸರಕುಗಳಿಗೂ ಒಂದೇ ತೆರಿಗೆ ಮಾಡಿದ್ದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ವ್ಯಾಪಾರಿಗಳಿಗೂ ಲಾಭವಾಗಿದೆ. ತೆರಿಗೆ ಪಾವತಿಸುವುದು ಕಡ್ಡಾಯ ಎಂಬ ನಿಯಮವಿದ್ದರೂ ಕೆಲವರು ತೆರಿಗೆ ತಪ್ಪಿಸಲು ಬೇರೆ ಹಾದಿ ಹುಡುಕುತ್ತಿದ್ದರು. ಜಿಎಸ್‌ಟಿ ಬಂದ ಬಳಿಕ ಇದಕ್ಕೆಲ್ಲ ಕಡಿವಾಣ ಬಿದ್ದಿದೆ’ ಎಂದರು.

‘ಜಿಎಸ್‌ಟಿ ಜಾರಿಗೆ ಬಂದು 21 ತಿಂಗಳಾಗಿವೆ. ಈ ಅವಧಿಯಲ್ಲಿ ದೇಶದಲ್ಲಿ 31 ಕೋಟಿ ನಕಲಿ ವಹಿವಾಟುದಾರರ ಮಾಹಿತಿ ಬಯಲಾಗಿದೆ. ಜಿಎಸ್‌ಟಿಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಇದುವರೆಗೂ 34 ಬಾರಿ ಸಭೆ ನಡೆಸಲಾಗಿದೆ’ ಎಂದರು.

ಉದ್ಯಮಿಯೊಬ್ಬರು ‘ಜಿಎಸ್‌ಟಿ ತೆರಿಗೆ ವರದಿ ಸಲ್ಲಿಸುವಾಗ ಕೆಲ ಬಾರಿ ಮಾನವ ಸಹಜ ತಪ್ಪುಗಳಾಗುತ್ತವೆ. ಆದ್ದರಿಂದ ತಿದ್ದುಪಡಿ ಮಾಡಿ ವರದಿ ಸಲ್ಲಿಸಲು ಎರಡನೇ ಬಾರಿಗೆ ಅವಕಾಶ ಕೊಡಬೇಕು’ ಎಂದು ಮಾಡಿದ ಮನವಿಗೆ ನಾಗೇಂದ್ರ ‘ನೀವು ನಿಮ್ಮದೊಂದೇ ತೆರಿಗೆ ಮಾಹಿತಿ ನೀಡುವಾಗ ಸಹಜ ತಪ್ಪುಗಳಾಗುತ್ತವೆ ಎಂದು ಹೇಳುತ್ತೀರಿ. ಕಚೇರಿ ಸಿಬ್ಬಂದಿ ನಿತ್ಯ ನೂರಾರು ಜನರ ತೆರಿಗೆ ವರದಿಗಳನ್ನು ಪರಿಶೀಲಿಸಬೇಕಲ್ಲವೇ’ ಎಂದು ಪ್ರಶ್ನಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ಜಂಟಿ ಕಾರ್ಯದರ್ಶಿ ಅಶೋಕ ಗಡಾದ, ಉಪಾಧ್ಯಕ್ಷರಾದ ಮಹೇಂದ್ರ ಲಡಾದ, ಅಶೋಕ ತೋಳನವರ, ಆದಪ್ಪಗೌಡರ, ಮಾಜಿ ಅಧ್ಯಕ್ಷರಾದ ರಮೇಶ ಪಾಟೀಲ, ವಸಂತ ಲದವಾ, ಕೇಂದ್ರ ತೆರಿಗೆಯ ಬೆಳಗಾವಿ ವಿಭಾಗದ ಮುಖ್ಯ ಆಯುಕ್ತ ಬಿಜೋಯ್‌ ಕುಮಾರ್‌, ಆಯುಕ್ತ ಶಿವಾಜಿ ಎಚ್‌. ಡಾಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT