ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಅಲೆ: ನಿಯಮಕ್ಕಿಲ್ಲ ಬೆಲೆ

ಕೋವಿಡ್ ಸುರಕ್ಷತಾ ನಿಯಮ ಪಾಲಿಸದ ಸಾರ್ವಜನಿಕರು
Last Updated 28 ನವೆಂಬರ್ 2020, 4:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್–19 ಎರಡನೇ ಅಲೆಯ ಭೀತಿ ಇದ್ದರೂ, ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ದಂಡ ವಿಧಿಸಲು ಮುಂದಾದರೆ ವಾಗ್ವಾದಕ್ಕಿಳಿಯುತ್ತಿರುವುದು ಪಾಲಿಕೆ ಅಧಿಕಾರಿಗಳನ್ನು ಹೈರಾಣಾಗಿಸಿದೆ.

ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ನಿಯಮ ಪಾಲನೆಯನ್ನು ಖಾತ್ರಿಗೊಳಿಸಲು ಘನತ್ಯಾಜ್ಯ ನಿರ್ವಹಣಾ ವಿಭಾಗ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದೆ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಸಂಚರಿಸುವ ತಂಡದ ಸದಸ್ಯರು ಮಾಸ್ಕ್ ಧರಿಸದ, ಅಂತರ ಕಾಪಾಡದವರಿಗೆ ದಂಡ ವಿಧಿಸುತ್ತಿದ್ದಾರೆ. ಆದರೂ ನಿಯಮ ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದು ಸಿಬ್ಬಂದಿಯನ್ನು ಚಿಂತೆಗೀಡು ಮಾಡಿದೆ.

ಅಂಗಡಿ– ಮುಂಗಟ್ಟುಗಳಲ್ಲಿ ಪರಿಶೀಲನೆ: ಸೋಂಕಿನ ಎರಡನೇ ಅಲೆಗೆ ಧಾರವಾಡ ಜಿಲ್ಲೆ ತುತ್ತಾಗುವ ಸಾಧ್ಯತೆ ಇದೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ ನಂತರ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ನವೆಂಬರ್ 16ರಿಂದ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ಶೋರೂಂ, ಹೋಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಾಚರಣೆ ನಿಯಮ (ಎಸ್‌ಒಪಿ) ಜಾರಿಗೊಳಿದದ ಅಂಗಡಿ ಮಾಲೀಕರಿಗೆ ದಂಡ ವಿಧಿಸುತ್ತಿದ್ದಾರೆ. ವಾಣಿಜ್ಯ ವಹಿವಾಟು ನಡೆಯುವ ಸ್ಥಳಗಳಲ್ಲಿ ಅಂಗಡಿ ಸಿಬ್ಬಂದಿ ಹಾಗೂ ಗ್ರಾಹಕರು ಇಬ್ಬರೂ ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದು ತಿಳಿವಳಿಕೆ ಸಹ ನೀಡುತ್ತಿದ್ದಾರೆ.

ಅಂಗಡಿಗೆ ಬರುವ ಗ್ರಾಹಕರು ಮಾಸ್ಕ್‌ ಹಾಕಿದ್ದರೆ ಮಾತ್ರ ಒಳಗೆ ಬಿಡಬೇಕು, ಒಳಗೆ ಬಂದ ನಂತರ ಸ್ಯಾನಿಟೈಸರ್ ನೀಡಬೇಕು ಹಾಗೂ ಅಂಗಡಿಯ ಎಲ್ಲ ಸಿಬ್ಬಂದಿ ಮಾಸ್ಕ್ ಹಾಕಿಕೊಂಡಿರಬೇಕು. ಅಲ್ಲದೆ ವಹಿವಾಟ ನಡೆಯುವ ವೇಳೆ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶರಣಬಸಪ್ಪ ಕೆಂಭಾವಿ ‘ಪ್ರಜಾವಾಣಿ‘ಗೆ ತಿಳಿಸಿದರು.‌

ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ನಿಯಮ ಉಲ್ಲಂಘನೆ ಹೆಚ್ಚಾಗಿದೆ. ಬಸ್ ನಿಲ್ದಾಣ, ಆಟೊ ನಿಲ್ದಾಣ, ಬಿಆರ್‌ಟಿಎಸ್ ನಿಲ್ದಾಣ ಹಾಗೂ ವಾಣಿಜ್ಯ ವಹಿವಾಟು ನಡೆಯುವ ಸ್ಥಳಗಳಲ್ಲಿ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ. ಕೋವಿಡ್ ಸಂಪೂರ್ಣವಾಗಿ ಹೋಗಿದೆ ಎಂಬಂತೆಯೇ ವರ್ತಿಸುತ್ತಿದ್ದಾರೆ. ಆದರೆ ಎರಡನೇ ಅಲೆಯ ಭೀತಿ ಇದೆ ಎಂಬುದನ್ನು ಅವಳಿನಗರದ ಜನರು ಮರೆಯಬಾರದು. ಪ್ರತಿಯೊಂದು ನಿಯಮವನ್ನು ತಪ್ಪದೇ ಪಾಲಿಸಿ, ಕೋವಿಡ್ ವಿರುದ್ಧದ ಹೋರಾಟ ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್ ಎರಡನೇ ಅಲೆಯ ಭೀತಿ ಇರುವುದರಿಂದ ಹುಬ್ಬಳ್ಳಿ– ಧಾರವಾಡದ ಪ್ರತಿಯೊಬ್ಬ ನಾಗರಿಕರು ಮಾಸ್ಕ್, ಅಂತರ ಹಾಗೂ ಸ್ಯಾನಿಟೈಸರ್ ಬಳಕೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು
ಶರಣಬಸಪ್ಪ ಕೆಂಭಾವಿ,
ಇಇ, ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT