ಶನಿವಾರ, ಸೆಪ್ಟೆಂಬರ್ 25, 2021
22 °C

‘ಸ್ವಾತಂತ್ರ್ಯ ಹೋರಾಟಕ್ಕೆ ಹುಬ್ಬಳ್ಳಿ ಕೊಡುಗೆ ಅಪಾರ’; ಶಶಿಧರ ಮಾಡ್ಯಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:‘ಸ್ವಾತಂತ್ರ್ಯಹೋರಾಟಕ್ಕೆ ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕೊಡುಗೆ ಅಮೂಲ್ಯವಾಗಿದೆ. ಬಾಲಗಂಗಾಧರ ತಿಲಕರು ಸ್ಥಾಪಿಸಿದ ‘ಹೋಂ ರೂಲ್‌ ಲೀಗ್’ ಕರ್ನಾಟಕದ ಶಾಖೆಯನ್ನು ಧಾರವಾಡದಲ್ಲಿ ಗಂಗಾಧರರಾವ್‌ ದೇಶಪಾಂಡೆ ಅವರು ಸ್ಥಾಪಿಸಿದರು’ ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಹೇಳಿದರು.

75ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ನೆಹರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.

‘ಸ್ವಾತಂತ್ರವೇ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿದ್ದ ತಿಲಕ ಅವರು ಹುಬ್ಬಳ್ಳಿಗೂ ಭೇಟಿ ನೀಡಿದ್ದರು. ಸಿದ್ಧರೂಢ ಸ್ವಾಮೀಜಿ ಅವರೊಂದಿಗೆ ಸ್ವಾತಂತ್ರ ಹೋರಾಟದ ಕುರಿತು ಚರ್ಚಿಸಿದ್ದರು’ ಎಂದು ಸ್ಮರಿಸಿದರು.

‘ಹಿರಿಯರು, ಅಂಗವಿಕಲರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾಸಾಶಾನ ಮೊತ್ತ ಹೆಚ್ಚಿಸಿರುವುದು ಶ್ಲಾಘನೀಯ. ಹುಬ್ಬಳ್ಳಿ ನಗರ ತಾಲ್ಲೂಕು ವ್ಯಾಪ್ತಿಯಲ್ಲಿ 3,482 ಅಂಗವಿಕಲರು, 9,543 ವಿಧವಾ, 11,790 ವೃದ್ಯಾಪ್ಯ, 2,247 ಸಂಧ್ಯಾ ಸುರಕ್ಷ ಸೇರಿದಂತೆ ಒಟ್ಟು 27062 ಪಲಾನುಭಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶಾನ ನೀಡಲಾಗುತ್ತಿದೆ’ ಎಂದರು.

‘ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಬಸವ ವಸತಿ ಯೋಜನೆಯಡಿ 3,580, ಪ್ರಧಾನ ಮಂತ್ರಿ ಗ್ರಾಮ ಆವಾಸ್ ಯೋಜನೆಯಡಿ 2834, ಡಾ.ಬಿ.ಆರ್.ಅಂಬೇಡ್ಕರ್ ಯೋಜನೆಯಡಿ 458 ಮನೆಗಳನ್ನು ನಿರ್ಮಿಸಲಾಗಿದೆ. ಅವಳಿ ನಗರ ವ್ಯಾಪ್ತಿಯಲ್ಲಿ 39,668 ವಸತಿ ರಹಿತ ಕುಟುಂಬಗಳನ್ನು ಗುರುತಿಸಲಾಗಿದೆ. ಇದುವರೆಗೆ ಅಂಬೇಡ್ಕರ್ ನಿವಾಸ ಯೋಜನೆಯಡಿ 537 ಹಾಗೂ ವಾಜಪೇಯಿ ವಸತಿ ಯೋಜನೆಯಡಿ 379 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3,888 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯನ್ನು ಕೈಗಾರಿಕೆಗೆ ಪೂರಕವಾಗೆ ಹುಬ್ಬಳ್ಳಿಯಲ್ಲಿ ಹೂಡಿಕೆ (ಇನ್ವೆಸ್ಟ್‌) ಕರ್ನಾಟಕ ಸಮಾವೇಶ ಆಯೋಜಿಸಿದ್ದರಿಂದಾಗಿ ಈ ಭಾಗದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದ್ದು, ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ’ ಎಂದರು.

ಶಾಸಕರಾದ ಜಗದೀಶ ಶೆಟ್ಟರ್, ಅಬ್ಬಯ್ಯ ಪ್ರಸಾದ್, ಪ್ರದೀಪ್ ಶೆಟ್ಟರ್,ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಶಿ, ಮಲ್ಲಿಕಾರ್ಜುನ ಸವಕಾರ ಇದ್ದರು. 

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಅದರಗುಂಚಿ ಗ್ರಾಮದ ದಿವಂಗತ ಶಂಕರಗೌಡ ಪಾಟೀಲ ಅವರ ಕುಟುಂಬವನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು