ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಯಾರಂಭಿಸದ ಇಂದಿರಾ ಕ್ಯಾಂಟೀನ್

ಕಟ್ಟಡ ಕಾಮಗಾರಿ ಮುಗಿದು ಐದು ತಿಂಗಳು ಪೂರ್ಣ
ಕಲ್ಲಪ್ಪ ಮ. ಮಿರ್ಜಿ
Published : 15 ಸೆಪ್ಟೆಂಬರ್ 2024, 4:39 IST
Last Updated : 15 ಸೆಪ್ಟೆಂಬರ್ 2024, 4:39 IST
ಫಾಲೋ ಮಾಡಿ
Comments

ಕಲಘಟಗಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕಡಿಮೆ ದರದಲ್ಲಿ ಹಸಿದವರಿಗೆ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್ ಕಟ್ಟಡ ಪಟ್ಟಣದಲ್ಲಿ ಪೂರ್ಣಗೊಂಡರೂ ಕಾರ್ಯಾರಂಭ ಮಾಡದ ಕಾರಣ ಸಾರ್ವಜನಿಕರಿಗೆ ನಿರಾಸೆಯಾಗಿದೆ.

2017ರಲ್ಲಿ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತಂದಿದ್ದರೂ, ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರಿಂದ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ರಾಜ್ಯ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತ ಇರುವ ಕಾರಣ ಸಚಿವ ಸಂತೋಷ್ ಲಾಡ್ ಅವರು ಆಸಕ್ತಿ ತೋರಿ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಪೂರ್ಣಗೊಳಿಸಿ ಐದು ತಿಂಗಳೇ ಕಳೆದಿವೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕ್ಯಾಂಟೀನ್ ಆರಂಭಕ್ಕೆ ಹಿನ್ನಡೆ ಆಗಿತ್ತು. ಇದೀಗ ಚುನಾವಣೆ ಮುಗಿದು ಮೂರು ತಿಂಗಳು ಕಳೆದರೂ ಕ್ಯಾಂಟೀನ್ ಆರಂಭಕ್ಕೆ ಕಾಲ ಕೂಡಿ ಬಂದಿಲ್ಲ. ಕಟ್ಟಡ ಪೂರ್ಣಗೊಂಡ ನಂತರ ಸಚಿವ ಸಂತೋಷ್ ಲಾಡ್ ಕ್ಯಾಂಟೀನ್ ಕಟ್ಟಡ ಪರಿಶೀಲನೆ ಮಾಡಿ ಒಂದು ವಾರದಲ್ಲಿ ಆರಂಭ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದರೂ, ಅದು ಇನ್ನೂ ನನಸಾಗಿಲ್ಲ.

ಕಲಘಟಗಿ ತಾಲ್ಲೂಕು ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲ್ಲೂಕಾಗಿದೆ. ಬಡವರು, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಬೇರೆ ಕಡೆಯಿಂದ ವಲಸೆ ಬಂದ ವಿವಿಧ ಜನಾಂಗಗಳ ಜನರು ಪಟ್ಟಣದಲ್ಲಿ ವಾಸ ಮಾಡುತ್ತಾರೆ. ಭಿಕ್ಷುಕರೂ ಇದ್ದಾರೆ. ಇಂದಿರಾ ಕ್ಯಾಂಟೀನ್ ಆರಂಭವಾಗದೆ ಖಾಸಗಿ ಹೋಟೆಲ್‌ಗಳಲ್ಲಿ ದುಬಾರಿ ವೆಚ್ಚ ತೆತ್ತು ಹೊಟ್ಟೆ ತುಂಬಿಸಿಕೊಳ್ಳಬೇಕಾಗಿದೆ.

‘ಸಚಿವರು ಇತ್ತ ಗಮನ ಹರಿಸಿ ಕಡಿಮೆ ದರದಲ್ಲಿ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಆರಂಭ ಮಾಡಿದಲ್ಲಿ ಪಟ್ಟಣಕ್ಕೆ ಬರುವ ನೂರಾರು ಕೂಲಿ ಕಾರ್ಮಿಕರಿಗೆ, ಬಡವರಿಗೆ, ರೈತರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವರದಾನವಾಗಲಿದೆ’ ಎಂದು ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ತಿಳಿಸಿದರು.

‘ಈಗಾಗಲೇ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿದೆ. ಆರಂಭ ಮಾಡಲು ಸಚಿವರಿಗೆ ಮಾಹಿತಿ ಒದಗಿಸಿ ಬರುವ ದಿನಗಳಲ್ಲಿ ಈ ಭಾಗದ ಬಹುದಿನಗಳ ಜನರ ಕನಸು ನನಸು ಮಾಡಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಭರವಸೆ ನೀಡಿದರು.

Quote - ಗುತ್ತಿಗೆ ಪಡೆದ ಕಂಪನಿ ಕಟ್ಟಡ ಮಾತ್ರ ನಿರ್ಮಿಸಿದ್ದು ಇನ್ನೂ ಕೆಲಸಗಳು ಬಾಕಿ ಇವೆ. ಕೆಲಸ ಪೂರ್ಣಗೊಳ್ಳಿಸಲು ಸಂಸ್ಥೆಗೆ ನೋಟಿಸ್ ನೀಡಲಾಗುವುದು ಅಕ್ಕಮಹಾದೇವಿ ತಡಸ ಪಟ್ಟಣ ಪಂಚಾಯಿತಿ ಎಂಜಿನಿಯರ್ ಕಲಘಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT