ಭಾನುವಾರ, ಜೂಲೈ 12, 2020
22 °C

ಧಾರವಾಡ | ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ಅದಾಲತ್‌‌: ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವುಗಳಲ್ಲಿ ಬಹುಪಾಲು ಪ್ರಕರಣಗಳನ್ನು ಸುಲಭವಾಗಿ ಇತ್ಯರ್ಥ ಪಡಿಸಬಹುದು. ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ಅದಾಲತ್ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಗಾಮನಗಟ್ಟಿ ಕೈಗಾರಿಕಾ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಲವಾರು ವರ್ಷಗಳಿಂದ ಪ್ರಕರಣಗಳು ಹಾಗೆಯೇ ಉಳಿದಿವೆ. ಇವುಗಳನ್ನು ಬಗೆಹರಿಸಿದರೆ ಅಭಿವೃದ್ಧಿಗೆ ಸಹಾಯವಾಗಲಿದೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಅದಾಲತ್‌ ಆಯೋಜಿಸಲಾಗುವುದು ಎಂದರು.

ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕೆಐಡಿಬಿ ವತಿಯಿಂದ ನಿರ್ಮಿಸಲಾಗಿರುವ ಸಿಂಗಲ್‌ ಹಾಗೂ ಡಬಲ್‌ ಬೆಡ್‌ರೂಂ ಮನೆಗಳನ್ನು ನಿರ್ಮಿಸಲಾಗಿದೆ. ಸಿಂಗಲ್‌ಗೆ ₹11 ಲಕ್ಷ, ಡಬಲ್‌ ಬೆಡ್‌ರೂಂ ಮನೆಗೆ ₹14 ಲಕ್ಷ ನಿಗದಿ ಪಡಿಸಿರುವುದು ಹೆಚ್ಚಾಗಿದೆ ಎಂದು ಯಾರೂ ತೆಗೆದುಕೊಂಡಿಲ್ಲ. ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸೇತುವೆ ನಿರ್ಮಾಣಕ್ಕೆ ಮನವಿ: ನೂಲ್ವಿ ಕ್ರಾಸ್ ಬಳಿ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಹುಬ್ಬಳ್ಳಿ ನಗರದ ವರ್ತುಲ ರಸ್ತೆ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳ್ಳಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 15 ಕಿ.ಮಿ. ವರ್ತುಲ ರಸ್ತೆಯಲ್ಲಿ 12.5 ಕಿ.ಮೀ. ರಸ್ತೆಯನ್ನು ಈಗಾಗಲೇ ನಿರ್ಮಿಸಿದೆ. ಗಬ್ಬೂರು ಬಳಿಯ ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಇದ್ದು, ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಇದರಿಂದ ಕಾರವಾರ, ಗದಗ ಹಾಗೂ ವಿಜಯಪುರ ರಸ್ತೆಗಳಿಗೆ ನೇರವಾಗಿ ಸಂಪರ್ಕ ಲಭಿಸಲಿದೆ. ಇದರೊಂದಿಗೆ ಹುಬ್ಬಳ್ಳಿ ಧಾರವಾಡ ನಗರದ ನಡುವೆ 6 ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ್, ಜಿಲ್ಲಾ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ಮೋಹನ್ ಭರಮಕ್ಕನವರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜೆ.ಎಚ್. ಎಲಿಗಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.