ಹುಬ್ಬಳ್ಳಿ | 100 ಸಿಸಿಟಿವಿ ಕ್ಯಾಮೆರಾ ಅಳವಡಿಕೆ : ಪೊಲೀಸ್ ಕಮಿಷನರ್ ಲಾಭೂರಾಮ್

ಹುಬ್ಬಳ್ಳಿ: ‘ಅವಳಿನಗರದಲ್ಲಿ ನಡೆಯುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಆಯ್ದ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ 100 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದು ಕಮಿಷನರ್ ಲಾಭೂರಾಮ್ ಹೇಳಿದರು.
‘ಕ್ಯಾಮೆರಾ ಅಳವಡಿಕೆ ಕುರಿತು ಈಗಾಗಲೇ ಟೆಂಡರ್ ಕರೆದಿದ್ದು, ಒಂದೆರಡು ವಾರಗಳಲ್ಲಿ ಕಾರ್ಯಾದೇಶ ನೀಡಲಾಗುವುದು. ಇದಕ್ಕಾಗಿ ₹1.25 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಬಿಆರ್‌ಟಿಎಸ್ ₹25 ಲಕ್ಷ ನೀಡಲಿದೆ. ನೂತನವಾಗಿ ಅಳವಡಿಸಿದ ಕ್ಯಾಮೆರಾಗಳನ್ನು ಕಮಿಷನರ್ ಕಚೇರಿಯಲ್ಲಿರುವ ಸಂಚಾರ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸಲಾಗುವುದು’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಪೊಲೀಸ್ ಇಲಾಖೆಯಿಂದ ಈಗಾಗಲೇ ಅಳವಡಿಸಿರುವ ಕ್ಯಾಮೆರಾಗಳು ಸಹ ಕಾರ್ಯನಿರ್ವಹಿಸುತ್ತಿವೆ. ಒಂದೆರಡು ಕಡೆ ಮಾತ್ರ ದುರಸ್ತಿಗೆ ಬಂದಿದ್ದು, ಸರಿಪಡಿಸಲಾಗಿದೆ’ ಎಂದರು.
‘ಚಾಕು ಇರಿತ, ಮನೆ ಬಾಗಿಲು ಮುರಿದು ಕಳವು ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಆಯಾ ಪೊಲೀಸ್ ಠಾಣಾ ಸಿಬ್ಬಂದಿ ಗಸ್ತು ನಡೆಸಲು ಆರಂಭಿಸಿದ್ದಾರೆ. ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಮೇಲೆ ಗಸ್ತು ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ವಾರಕ್ಕೊಮ್ಮೆಯಾದರೂ ಇದನ್ನು ನಡೆಸಬೇಕು ಎಂದು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.