ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | 27ರಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ

Published 24 ಜನವರಿ 2024, 6:26 IST
Last Updated 24 ಜನವರಿ 2024, 6:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರತಿವರ್ಷದಂತೆ ‘ಸಂಸದ ಸಾಂಸ್ಕೃತಿಕ ಮಹೋತ್ಸವ–24’ ಅಂಗವಾಗಿ ಇದೇ ಜನವರಿ 27 ಮತ್ತು 28 ರಂದು 5ನೇ ಸಾಲಿನ ಹುಬ್ಬಳ್ಳಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವವನ್ನು ಏರ್ಪಡಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಕೇಶ್ವಾಪುರದ ಆಕ್ಸ್‌ಫರ್ಡ್‌ ಕಾಲೇಜು ಪಕ್ಕದಲ್ಲಿ ಉತ್ಸವ ನಡೆಯಲಿದೆ. ಎಲ್ಲರಿಗೂ ಮುಕ್ತವಾದ ಪ್ರವೇಶವಿದೆ. ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವುದು ಈ ಸಾಂಸ್ಕೃತಿಕ ಮಹೋತ್ಸವದ ಉದ್ದೇಶ. ದೇಶಿ ಸಂಸ್ಕೃತಿಯನ್ನು ಬೇರೆಯವರಿಗೂ ಪರಿಚಯಿಸುವ ಉದ್ದೇಶಕ್ಕಾಗಿ ಅಂತರರಾಷ್ಟ್ರೀಯ ಮಟ್ಟದ ಪಟುಗಳು ಭಾಗವಹಿಸಲು ಅವಕಾಶ ನೀಡಲಾಗಿದೆ. ಇಂಗ್ಲೆಂಡ್‌, ಅಮೆರಿಕ, ಫ್ರಾನ್ಸ್‌ ಸೇರಿದಂತೆ 15 ದೇಶಗಳಿಂದ 23 ಪಟುಗಳು ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

27 ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆ, 10.30 ಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ, 11ಕ್ಕೆ ಆಹಾರ ಉತ್ಸವ ಉದ್ಘಾಟನೆ, 11.30 ರಿಂದ ದೇಶಿ ಕ್ರೀಡೆಗಳು ಮತ್ತು ಮನರಂಜನೆ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಲಾಗುವುದು. ಸಂಜೆ 6.30ರಿಂದ ಸಂಗೀತ ಕಾರ್ಯಕ್ರಮವಿದೆ. ಸಂಗೀತ ನಿರ್ದೇಶಕ ಅರ್ಜುನ ಜನ್ಯ, ಗಾಯಕ ಸಂಜಿತ್‌ ಹೆಗ್ಡೆ ಹಾಗೂ ತಂಡದವರು ಸಂಗೀತ ರಸದೌತಣ ನೀಡುವರು ಎಂದರು.

28 ರಂದು ಬೆಳಿಗ್ಗೆ 9.30 ಕ್ಕೆ ವಿಶಿಷ್ಟ ಗಾಳಿಪಟ ಹಾರಾಟದ ಪ್ರದರ್ಶನ ನಡೆಯುವುದು. ಮಧ್ಯಾಹ್ನ 12.30ರಿಂದ ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ದೇಸಿ ಕ್ರೀಡೆಗಳು ನಡೆಯಲಿವೆ. ಸಂಜೆ 6 ಗಂಟೆಗೆ ಗಾಯಕ ಜುಟಿನ್‌ ನೌಟಿಯಾಲ್‌ ಹಾಗೂ ತಂಡದಿಂದ ಸಂಗೀತ ಸಂಜೆ ನಡೆಯುವುದು. ಬಾಲಪ್ರತಿಭೆ ಮಹನ್ಯಾ ಪಾಟೀಲ ಕೂಡಾ ಗಾಯನ ಮಾಡಲಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಈ ಉತ್ಸವಕ್ಕೆ ಸುಮಾರು ಎರಡು ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಉತ್ಸವದಲ್ಲಿ ಐದು ಸಾವಿರ ಮಕ್ಕಳಿಗೆ ಉಚಿತವಾಗಿ ಗಾಳಿಪಟ ವಿತರಿಸಲಾಗುವುದು ಎಂದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್‌.ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT