ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲುವೆ ನಿರ್ಮಿಸಿ, ನದಿ ಜೋಡಿಸುತ್ತೇವೆ ಅಂದರೆ ಅದೊಂದು ದೊಡ್ಡ ದುರಂತ ಆಗಲಿದೆ’

ಇಶಾ ಫೌಂಡೇಷನ್‌ ಸಂಸ್ಥಾಪಕ
Last Updated 30 ಜನವರಿ 2019, 6:46 IST
ಅಕ್ಷರ ಗಾತ್ರ

‘ಟೈಕಾನ್‌’ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಲು ಶನಿವಾರ ಬಂದಿದ್ದ ಇಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಹುಬ್ಬಳ್ಳಿಯ ಜನರನ್ನು ಕಂಡು ಪುಳಕಿತರಾದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನಂತರ ವಿಮಾನ ನಿಲ್ದಾಣಕ್ಕೆ ತೆರಳುವಾಗ ಕಾರಿನಲ್ಲಿಯೇ ‘ಪ್ರಜಾವಾಣಿ’ ಜತೆ ಮಾತನಾಡಿದರು.

*ಹುಬ್ಬಳ್ಳಿಗರ ಪ್ರತಿಕ್ರಿಯೆ ನೋಡಿ ಏನನ್ನಿಸಿತು?
ಜಗ್ಗಿ ವಾಸುದೇವ್ : ಹೋ... ತುಂಬಾನೇ ಖುಷಿ ಆಯಿತು. ವಿಪರೀತ ಜನ.. ಒಳ್ಳೆ ಕ್ರೌಡ್‌... ಒಳ್ಳೆಯ ಪ್ರತಿಕ್ರಿಯೆ..

* ಅಂದ್ಮೇಲೆ ಇತ್ತ ಇಶಾ ಪಯಣ ಯಾವಾಗ?
–ಅದರ ಬಗ್ಗೆ ಪ್ಲಾನ್‌ ಮಾಡುತ್ತಿದ್ದೇವೆ. ಇಷ್ಟು ದಿನ ಇಶಾ ಪ್ರತಿಷ್ಠಾನದ ಯೋಜನೆಗಳು ಕೇವಲ ಇಂಗ್ಲಿಷ್‌ ಮಾತನಾಡುವ ಜನರನ್ನು ಹೆಚ್ಚು ತಲುಪಿವೆ. ಇನ್ನು ಮುಂದೆ ಕನ್ನಡಿಗರನ್ನೂ ತಲುಪುವ ಉದ್ದೇಶ ಇದೆ. ಅದರಲ್ಲೂ ಉತ್ತರ ಕರ್ನಾಟಕ, ವಿಶೇಷವಾಗಿ ಹುಬ್ಬಳ್ಳಿ ಜನರನ್ನು ತಲುಪುವ ಯೋಚನೆ ಇದೆ. ಜನರ ಪ್ರತಿಕ್ರಿಯೆ ನೋಡಿದರೆ ಇಶಾ ಕಾರ್ಯಚಟುವಟಿಕೆ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಹೀಗಾಗಿಯೇ ಕನ್ನಡದ ತರಬೇತುದಾರರನ್ನೂ ಸಿದ್ಧ ಮಾಡುತ್ತಿದ್ದೇವೆ.ಸಣ್ಣ ಪ್ರಮಾಣದಲ್ಲಿ ಇರುವುದನ್ನು ವಿಸ್ತರಿಸಲಾಗುವುದು.

* ಉತ್ತರ ಕರ್ನಾಟಕದತ್ತ ಬರಲು ತಡ ಆಗಿದ್ದು ಏಕೆ?
–ನೋಡಿ ನಮ್ಮದು ಸ್ವಯಂ ಸೇವಾ ಸಂಸ್ಥೆ. ನಾವು ಯಾರನ್ನೂ ಸಂಬಳಕ್ಕೆ ನೇಮಕ ಮಾಡಿಕೊಂಡು ಕೆಲಸ ಮಾಡುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ 15 ಸಾವಿರ ಚ. ಅಡಿ ಜಾಗವನ್ನು ಒಬ್ಬರು ಉಚಿತವಾಗಿ ಕೊಟ್ಟಿದ್ದಾರೆ. ಕಚೇರಿ ಕೂಡ ತೆರೆದಿದ್ದೇವೆ. ಅಲ್ಲಿ ಕೆಲಸ ಮಾಡುವವರ ವೇತನವನ್ನೂ ಬೇರೆ ಬೇರೆ ಸಂಸ್ಥೆ/ವ್ಯಕ್ತಿಗಳು ಪಾವತಿ ಮಾಡುತ್ತಾರೆ. ಎಲ್ಲೆಲ್ಲಿ ಈ ರೀತಿಯ ಸೌಲಭ್ಯ/ಅನುಕೂಲಗಳು ಸಿಗುತ್ತವೆಯೊ ಅಂತಹ ಕಡೆ ವಿಸ್ತರಣೆಯೂ ನಡೆಯಲಿದೆ.

* ಅಧ್ಯಾತ್ಮದ ಜತೆಗೆ ಶಿಕ್ಷಣದ ಬಗ್ಗೆಯೂ ಹೆಚ್ಚು ಮಾತನಾಡುತ್ತಿದ್ದೀರಿ? ಶಾಲೆಗಳನ್ನು ತೆರೆಯುವ ಯೋಚನೆ ಏನಾದರೂ ಇದೆಯೇ?
–ಖಂಡಿತ ಇದೆ. ಆದರೆ ಅವು ಮಾಮೂಲಿ ಶಾಲೆಗಳಾಗಿರುವುದಿಲ್ಲ. ಅವುಗಳ ಹೆಸರು ಇಶಾ ಹೋಮ್‌ ಸ್ಕೂಲ್‌. ಸದ್ಯಕ್ಕೆ ದಕ್ಷಿಣ ಭಾರತ, ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ಒಂದೊಂದು ಶಾಲೆ ತೆರೆಯಬೇಕು ಎನ್ನುವ ಯೋಚನೆ ಇದೆ.

* ಇಶಾ ಶಾಲೆಗಳ ವಿಶೇಷತೆ ಏನು?
–ಒಂದು ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 340. ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಲ್ಲ. ಪ್ರತಿ 4–5 ಮಂದಿಗೆ ಒಬ್ಬ ಉಸ್ತುವಾರಿ ಇರುತ್ತಾನೆ. ಈ ಶಾಲೆಗಳಲ್ಲಿ ಶಿಕ್ಷಕ ತರಬೇತಿ ಪಡೆದವರು ಶಿಕ್ಷಕರಾಗಿರುವುದಿಲ್ಲ! ವೈದ್ಯರು, ಎಂಜಿನಿಯರ್‌ಗಳು, ಲೆಕ್ಕಪರಿಶೋಧಕರು.... ಹೀಗೆ ವಿವಿಧ ಕ್ಷೇತ್ರಗಳ ಪರಿಣತರೇ ಶಿಕ್ಷಕರಾಗಿರುತ್ತಾರೆ. ಈ ಶಾಲೆಯ ಉದ್ದೇಶವೇ ಹಾಗೆ. ಶಿಕ್ಷಕರಿಂದ ಪಾಠ ಮಾಡಿಸುವುದಿಲ್ಲ. ತಜ್ಞರಿಂದ ಪಾಠ ಮಾಡಿಸುತ್ತೇವೆ. ದೇಶಕ್ಕೆ ಒಳ್ಳೆ ನಾಯಕರನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡುತ್ತಿದ್ದೇವೆ. ಇದು ಯಶಸ್ವಿಯಾದರೆ ದೇಶದ ಇತರೆ ಕಡೆಗೂ ಇಂತಹ ಶಾಲೆಗಳನ್ನು ಸ್ಥಾಪಿಸಬಹುದು.

* ಇಶಾ ಶಾಲೆ ಹುಬ್ಬಳ್ಳಿಯಲ್ಲೂ ತಲೆ ಎತ್ತಲಿದೆಯೇ?
–ಹುಬ್ಬಳ್ಳಿಯಲ್ಲಿ ವೀರಶೈವ ಮಠ/ಸಂಸ್ಥೆಗಳು ಒಳ್ಳೆ ಶಿಕ್ಷಣ ಕೊಡುತ್ತಿವೆ. ನನ್ನ ಪ್ರಕಾರ ಇಲ್ಲಿ ಶಿಕ್ಷಣಕ್ಕೆ ಏನೂ ಕೊರತೆ ಇಲ್ಲ. ಆದರೆ, ವಿಶೇಷ ಶಾಲೆ ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು.

* ‘ರ್‍ಯಾಲಿ ಫಾರ್‌ ರಿವರ್‌’ ಘೋಷವಾಕ್ಯ ದೇಶದಲ್ಲಿ ಸಂಚಲನ ಉಂಟು ಮಾಡಿತು. ಈ ಕುರಿತು ಅಧ್ಯಯನ ಮಾಡಿ ಪ್ರಧಾನಿಗೆ ಕೊಟ್ಟ ವರದಿಯ ಸ್ಥಿತಿ ಏನಾಗಿದೆ?
–ನದಿ ಉಳಿಸಿ ಎನ್ನುವ ನನ್ನ ಹೋರಾಟಕ್ಕೆ ಒಳ್ಳೆ ಬಲ ಸಿಕ್ಕಿದೆ. 761 ಪುಟಗಳ ವರದಿಯನ್ನು ಪ್ರಧಾನಿಗೆ ಕೊಟ್ಟಿದ್ದೇನೆ. ಅದನ್ನು ಅವರು ನೀತಿ ಆಯೋಗಕ್ಕೆ ಕೊಟ್ಟಿದ್ದು, ಅದು ಎಲ್ಲ ರಾಜ್ಯಗಳ ಜತೆಗೂ ಹಂಚಿಕೊಂಡಿದೆ. ಅನುಷ್ಠಾನದ ವಿವಿಧ ಹಂತಗಳಲ್ಲಿ ಇದೆ. ವಿಶ್ವಸಂಸ್ಥೆ ಕೂಡ ಇದಕ್ಕೆ ಬೆಂಬಲ ಸೂಚಿಸಿದೆ. ಇದರಿಂದ ದೇಶದ ಭವಿಷ್ಯ ಸುಂದರವಾಗಿರಲಿದೆ.

* ಕೇಂದ್ರ ಸರ್ಕಾರ ನದಿಗಳ ಜೋಡಣೆ ಬಗ್ಗೆ ಮಾತನಾಡುತ್ತಿದೆ. ಇದರ ಬಗ್ಗೆ ಏನು ಹೇಳ್ತೀರಾ?
–ಕಾಲುವೆಗಳನ್ನು ನಿರ್ಮಾಣ ಮಾಡಿ, ನದಿಗಳನ್ನು ಜೋಡಿಸುತ್ತೇವೆ ಅಂದರೆ ಅದೊಂದು ದೊಡ್ಡ ದುರಂತ ಆಗಲಿದೆ. ಈ ರೀತಿಯ ಜೋಡಣೆಯಿಂದ ಶೇ 80ರಷ್ಟು ನೀರು ಸೋರಿಕೆ ಮತ್ತು ಆವಿಯಾಗುವುದರ ಮೂಲಕ ವ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಇದು ಕಾರ್ಯಸಾಧುವಾದ ಯೋಜನೆ ಆಗುವುದಿಲ್ಲ. ಇದರ ಬದಲಿಗೆ ಪೈಪುಗಳ ಮೂಲಕ ಗೋದಾವರಿ– ಕಾವೇರಿ ನದಿ ಜೋಡಣೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದು, ಇದನ್ನು ವಿರೋಧಿಸಲು ಆಗುವುದಿಲ್ಲ. ಕಾರಣ, ನೀರಿನ ಅಗತ್ಯವೂ ಇದೆ.

* ಕೃಷಿ ಭೂಮಿಯಲ್ಲಿ ಮರ ಬೆಳೆಸುವ ಯೋಜನೆ ಎಲ್ಲಿಗೆ ಬಂತು?
–ಇದು ತಮಿಳುನಾಡಿನಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಅಲ್ಲಿನ 650 ಎಕರೆ ಕೃಷಿ ಭೂಮಿಯಲ್ಲಿ ಮರಗಳನ್ನು ಬೆಳೆಸಲಾಗುತ್ತಿದೆ. 5ರಿಂದ 10 ಎಕರೆ ಕೃಷಿ ಭೂಮಿ ಇರುವ ರೈತರೂ ಮರಗಳನ್ನು ಬೆಳೆಸುತ್ತಿದ್ದಾರೆ. ಅವರ ಕೃಷಿ ಆದಾಯ 8ರಿಂದ 13 ಪಟ್ಟು ಹೆಚ್ಚಾಗಿದೆ. ಹೆಕ್ಟೇರ್‌ಗೆ ₹45ರಿಂದ 50 ಸಾವಿರ ದುಡಿಯುತ್ತಿದ್ದವರು ಆರು ವರ್ಷಗಳಲ್ಲಿ ₹7ರಿಂದ 8 ಲಕ್ಷ ಗಳಿಸುತ್ತಿದ್ದಾರೆ. 25 ವರ್ಷಗಳಲ್ಲಿ ಅವರ ವಾರ್ಷಿಕ ಆದಾಯ ಒಂದೂವರೆ ಕೋಟಿ ರೂಪಾಯಿ ಆಗಲಿದೆ! ಈ ವಿಷಯವೂ ಪ್ರಧಾನಿಗೆ ಕೊಟ್ಟ ವರದಿಯಲ್ಲಿ ಇದೆ.

* ಕೃಷಿ ಭೂಮಿಯಲ್ಲಿನ ಮರಗಳನ್ನು ಕತ್ತರಿಸುವುದಕ್ಕೂ ನಿರ್ಬಂಧಗಳು ಇವೆಯಲ್ಲ...
–ಹೌದು. ಆದರೆ, ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 18 ತಳಿಯ ಮರಗಳನ್ನು ಯಾವುದೇ ಅನುಮತಿ ಇಲ್ಲದೆ ಕತ್ತರಿಸುವುದಕ್ಕೆ ಅವಕಾಶ ಇದೆ. ಇದರಿಂದ ರೈತರ ಆದಾಯ ಹೆಚ್ಚಾಗುವುದರ ಜತೆಗೆ ಮರ ಬೆಳೆಸುವುದಕ್ಕೂ ಅವರು ಆಸಕ್ತಿ ತೋರುತ್ತಾರೆ. ಹೆಚ್ಚು ಮರಗಳನ್ನು ಬೆಳೆಸಿದರೆ ಮರ ಮತ್ತು ಮರ ಸಂಬಂಧಿತ ವಸ್ತುಗಳ ಆಮದು ಕಡಿಮೆ ಆಗಲಿದೆ. ಇದರಿಂದಲೂ ಸಾಕಷ್ಟು ಹಣ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT