ಮಂಗಳವಾರ, ಸೆಪ್ಟೆಂಬರ್ 21, 2021
21 °C
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆಯಲ್ಲಿ ಶೆಟ್ಟರ್‌ ಹೇಳಿಕೆ

ಚುನಾವಣೆ ಘೋಷಣೆ ಆಯೋಗಕ್ಕೆ ಬಿಟ್ಟಿದ್ದು: ಸಚಿವ ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಆರು ತಿಂಗಳಲ್ಲಿ‌ ಕೈಗೊಳ್ಳಬಾರದು ಎಂದು ಸಚಿವ ಸಂಪುಟ ನಿರ್ಧರಿಸಿದೆ. ಅದರೆ, ಚುನಾವಣೆ ಘೋಷಣೆ ಅಧಿಕಾರ ಆಯೋಗಕ್ಕೆ ಬಿಟ್ಟಿದ್ದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಸಭಾಭವನದಲ್ಲಿ ನಡೆದ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷ ಸಂಘಟಿಸಲು ಕಾರ್ಯಕರ್ತರು ಈಗಿನಿಂದಲೇ ಸಿದ್ಧರಾಗಬೇಕು. ಮನೆಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಿ, ಅವರ ವಿಶ್ವಾಸಗಳಿಸಬೇಕು. ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಸೌಲಭ್ಯಗಳನ್ನು ತಿಳಿಸುವಲ್ಲಿ ಮುಂದಾಗಬೇಕು’ ಎಂದರು.

‘ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮರ್ಥವಾಗಿ ಎದುರಿಸಿದೆ. ಸಂಭಾವ್ಯ ಮೂರನೇ ಅಲೆ ಸಹ ಎದುರಿಸಲು ಸಿದ್ಧವಾಗಿದೆ. ಕೋವಿಡ್‌ನಿಂದ ಆರ್ಥಿಕ ಚಟುವಟಿಕೆಗಳು ಬಹುತೇಕವಾಗಿ ನಿಂತಿದ್ದವು. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪರಿಹಾರ ಘೋಷಣೆ ಮಾಡಿ ನೆರವಿಗೆ ನಿಂತಿದೆ’ ಎಂದರು.

‘ಕೊರೊನಾ ಸೋಂಕು ನಿಯಂತ್ರಣವಾಗಿದೆ ಎಂದು ಯಾರೂ ಮೈಮರೆಯಬಾರದು. ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲೆಡೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಎಲ್ಲರೂ ಅದನ್ನು ಪಡೆದು ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು. ಮೊದಲ ಹಂತದದಲ್ಲಿ ಲಸಿಕೆ ಪಡೆಯುವಾಗ ಪ್ರತಿಪಕ್ಷಗಳು ಅಪಪ್ರಚಾರ ನಡೆಸಿದ್ದವು. ಅದರಿಂದಾಗಿ ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆಯಾಗಿತ್ತು’ ಎಂದರು.

ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ್, ‘ಕ್ಷೇತ್ರದ ಒಂದೊಂದು ವಾರ್ಡ್‌ನಲ್ಲಿ ಕಾರ್ಯಕಾರಿಣಿ ಮಾಡುತ್ತಿದ್ದೇವೆ. ಹೊಸ ವಾರ್ಡ್‌ನ ಬೂತ್ ಮಟ್ಟದ ಸಮಿತಿ, ಶಕ್ತಿ ಕೇಂದ್ರಗಳ ಹಾಗೂ ಮತದಾರರ ಕುರಿತು ಚರ್ಚಿಸಲಾಗುತ್ತದೆ. ಸಂಘಟನಾತ್ಮಕ ಕಾರ್ಯಕ್ರಮ ನಡೆಸಿದ್ದು, ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್‌ನ ಹಿರಿಯರ ಪಟ್ಟಿ ಸಹ ಸಿದ್ಧಪಡಿಸಲಾಗಿದೆ’ ಎಂದರು.

ಭರವಸೆ: ‘ಸಾವಿರಾರು ಕೋಟಿ ವೆಚ್ಚದಲ್ಲಿ ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಕೋವಿಡ್ ಸಂದರ್ಭದಲ್ಲಿ ಕೆಲವು ಕಾಮಗಾರಿಗಳು ವಿಳಂಬವಾಗಿವೆ. ಗುತ್ತಿಗೆದಾರರಿಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಸಹ ಸಹಕರಿಸಬೇಕು. ಮುಂದಿನ ಏಳೆಂಟು ತಿಂಗಳಲ್ಲಿ ನಗರದ ಎಲ್ಲ ರಸ್ತೆಗಳು ಸಂಪೂರ್ಣ ಅಭಿವೃದ್ಧಿಯಗಲಿದೆ’ ಎಂದು ಶೆಟ್ಟರ್ ಭರವಸೆ ನೀಡಿದರು.

ಕಾರ್ಯಕಾರಿಣಿಗೂ ಪೂರ್ವ ಶೆಟ್ಟರ್‌ ಹಾಗೂ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ವೀಕ್ಷಿಸಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾವುಕಾರ, ಪಾಂಡುರಂಗ ಪಾಟೀಲ, ವೀರಣ್ಣ ಸವಡಿ, ಗೋಪಾಲ ಬದ್ದಿ, ದತ್ತಮೂರ್ತಿ ಕುಲಕರ್ಣಿ, ಮಹೇಂದ್ರ ಕೌತಾಳ, ವೀರೇಶ ಸಂಗಳದ, ಮೇನಕಾ ಹುರುಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು