ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೋಕುಮಾರನ ಹಬ್ಬ: ಸಾಂಪ್ರದಾಯಿಕ ಆಚರಣೆ

ರಮೇಶ ಓರಣಕರ
Published : 17 ಸೆಪ್ಟೆಂಬರ್ 2024, 7:10 IST
Last Updated : 17 ಸೆಪ್ಟೆಂಬರ್ 2024, 7:10 IST
ಫಾಲೋ ಮಾಡಿ
Comments

ಉಪ್ಪಿನಬೆಟಗೇರಿ: ಗಣೇಶ ವಿಸರ್ಜನೆಯ ಮರುದಿನ ಜೋಕುಮಾರಸ್ವಾಮಿ ಅಷ್ಟಮಿಯ ಗಡಗಿಯೊಳಗೆ ಹುಟ್ಟುತ್ತಾನೆ. ಆತನ ಆಯುಷ್ಯ ಏಳು ದಿನ. ಆ ಏಳು ದಿನಗಳಲ್ಲಿ ಬಾಲ್ಯ, ಯೌವ್ವನ, ಸಾವು ಎಲ್ಲವೂ ಸಂಭವಿಸುತ್ತದೆ. ಉತ್ತರ ಕರ್ನಾಟಕ ಸೇರಿ ನಾಡಿನ ಹಲವು ಹಳ್ಳಿಗಳಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಇಂದಿಗೂ ಆಚರಿಸಲಾಗುತ್ತದೆ.

ಬಡಿಗೇರ ಮನೆಯವರು ತಯಾರಿಸುವ ಜೋಕುಮಾರನ ಮಣ್ಣಿನ ಮೂರ್ತಿಯನ್ನು ಅಂಬಿಗೇರ ಮನೆತನದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಇಟ್ಟು ಬೇವಿನ ತಪ್ಪಲಿನಿಂದ ಸಿಂಗರಿಸುತ್ತಾರೆ. ಸುಣಗಾರ ಮನೆ ಮಹಿಳೆಯರು ಜೋಕುಮಾರನನ್ನು ಗ್ರಾಮದ ಗೌಡರ ಮನೆ, ಸ್ವಾಮಿಗಳ ಮನೆ, ಕಟ್ಟಿಮನಿಯವರ ಮನೆಗಳು ಹಾಗೂ ಗ್ರಾಮಸ್ಥರ ಮನೆಗಳಿಗೆ ಒಯ್ದು ’ಜೋಕುಮಾರ ಬಂದಾನ ಬರ್ರೆ‍ವ್ವ ಬಾಗಿನ ತಂದು ಅರ್ಪಿಸಿ’ ಎಂದು ಜಾನಪದ ಪದ ಹಾಡುತ್ತಾರೆ.

ಮನೆಯ ಹೆಂಗಳೆಯರು ಜೋಕುಮಾರನ ಬಾಯಿಗೆ ಬೆಣ್ಣೆ ಒರೆಸಿ, ಕುಂಕುಮ, ಹೂವು, ಪತ್ರಿ ಮುಡಿಸಿ ಆರತಿ ಬೆಳಗಿ ಪೂಜಿಸಿ ನಂತರ ಮರದಲ್ಲಿ ಉಲುಪಿ (ಎಣ್ಣೆ ಬತ್ತಿ, ರೊಟ್ಟಿ, ಪಲ್ಲೆ, ಕಾಳುಕಡಿ, ಉಪ್ಪು, ಒಣಮೆಣಸಿನಕಾಯಿ, ಊದಿನಕಡ್ಡಿ) ಸಲ್ಲಿಸುತ್ತಾರೆ.

ಭಾದ್ರಪದ ಚೌತಿಯ ನಂತರ ಹುಟ್ಟಿ ಬರುವ ಜೋಕುಮಾರನ ಮೂರ್ತಿ ಇರುವ ಬಿದಿರಿನ ಬುಟ್ಟಿಯನ್ನು ಹೊತ್ತು ಮಹಿಳೆಯರು ಏಳು ದಿನ ಏಳು ಗ್ರಾಮಗಳಿಗೆ ತೆರಳಿ ಪೂಜೆ ಸಲ್ಲಿಸಿ, ಏಳನೇ ದಿನ ಮನೆಗೆ ತೆರಳಿ ರಾತ್ರಿಯ ವೇಳೆ ಹರಿಜನ ಓಣಿಯಲ್ಲಿ ಮರಣ ಹೊಂದುತ್ತಾನೆ.

ನಂತರ ಹಳ್ಳಕ್ಕೆ ತೆರಳಿದಾಗ ಅಗಸರು ಕಲ್ಲಿನ ಕೆಳಗೆ ಮುಚ್ಚಿ ಪೂಜೆ ಮಾಡಿ ತಿರುಗಿ ನೋಡದ ಹಾಗೆ ಮನೆಗೆ ಬರುತ್ತಾರೆ. ಮೂರು ದಿನದ ನಂತರ (ಅಳ್ಯಾಮ್ಲಿ) ಕಿಚಡಿ ಮಾಡಿ ಮನೆಗಳಿಗೆ ಹಂಚುತ್ತಾರೆ. ಅದನ್ನು ಮನೆಯವರು ಹೊಲಗಳಿಗೆ ಹೋಗಿ ಚರಗದ ರೂಪದಲ್ಲಿ ಚೆಲ್ಲಿ ಬರುವ ಪದ್ದತ್ತಿ ಇಂದಿಗೂ ಚಾಲ್ತಿಯಲ್ಲಿದೆ.

ಜೋಕುಮಾರನ ಪೂಜೆ ಮಾಡಿ ಆತನ ರುಂಡ ಕತ್ತರಿಸುತ್ತಾರೆ, ರುಂಡವು ಮೇಲ್ಮುಖವಾಗಿ ಬಿದ್ದರೆ ಉತ್ತಮ ಮಳೆಯಾಗಿ ಬೆಳೆಗಳು ಚೆನ್ನಾಗಿ ಬರುವ ನಂಬಿಕೆ ಇದೆ. ಒಂದೊಮ್ಮೆ ಕೆಳ ಮುಖವಾಗಿ ಬಿದ್ದರೆ ಅಶುಭದ ಸಂಕೇತ ಎನ್ನುತ್ತಾರೆ ಗಂಗವ್ವ ಅರವಟಗಿ ಹಾಗೂ ಶಿವಕ್ಕ ಸುಣಗಾರ.

ಚಿತ್ರಾವಳಿ: ಜೋಕುಮಾರನ ಮೂರ್ತಿ ಇರುವ ಬುಟ್ಟಿಯನ್ನು ಹೊತ್ತು ಮಹಿಳೆಯರು ಉಪ್ಪಿನಬೆಟಗೇರಿಯ ಗ್ರಾಮದ ಮನೆಗಳಿಗೆ ತೆರಳಿದರು.
ಚಿತ್ರಾವಳಿ: ಜೋಕುಮಾರನ ಮೂರ್ತಿ ಇರುವ ಬುಟ್ಟಿಯನ್ನು ಹೊತ್ತು ಮಹಿಳೆಯರು ಉಪ್ಪಿನಬೆಟಗೇರಿಯ ಗ್ರಾಮದ ಮನೆಗಳಿಗೆ ತೆರಳಿದರು.
ಚಿತ್ರಾವಳಿ: ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿ ಪ್ರತಿಷ್ಠಾಪಿಸಿ ಸಿಂಗರಿಸಿರುವುದು
ಚಿತ್ರಾವಳಿ: ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿ ಪ್ರತಿಷ್ಠಾಪಿಸಿ ಸಿಂಗರಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT