ಜನರನ್ನು ವಂಚಿಸುತ್ತಿರುವ ಜೋಶಿ ಸೋಲು ಖಚಿತ: ಕೋನರಡ್ಡಿ

ಶನಿವಾರ, ಮೇ 25, 2019
28 °C

ಜನರನ್ನು ವಂಚಿಸುತ್ತಿರುವ ಜೋಶಿ ಸೋಲು ಖಚಿತ: ಕೋನರಡ್ಡಿ

Published:
Updated:

ಧಾರವಾಡ: ‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಜನರನ್ನು ವಂಚಿಸುತ್ತಿರುವ ಪ್ರಹ್ಲಾದ ಜೋಶಿ ಅವರನ್ನು ಈ ಬಾರಿ ಜನ ಸೋಲಿಸುವುದು ನಿಶ್ಚಿತ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಅಭಿಪ್ರಾಯಪಟ್ಟರು.

‘ಮೂರು ಬಾರಿ ಸಂಸದರಾಗಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸುಳ್ಳು ಹೇಳಿಕೊಂಡೇ ಹದಿನೈದು ವರ್ಷ ಕಳೆದಿದ್ದಾರೆ. ಕೇಂದ್ರ ನೀಡಿರುವ ಅನುದಾನದಲ್ಲಿ ರಾಜ್ಯ ಸರ್ಕಾರದ ಪಾಲೂ ಇದೆ. ಆದರೆ, ಇದನ್ನೇ ಕೇಂದ್ರದ ಕೊಡುಗೆ ಎಂದು ಹೇಳಿ ಜೋಶಿ ಜನರನ್ನು ಯಾಮಾರಿಸುತ್ತಿದ್ದಾರೆ. ಕೇವಲ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಲ್ಲಿ ಅಭಿವೃದ್ಧಿ ತೋರಿಸುತ್ತಿದ್ದಾರೆಯೇ ಹೊರತು ನೈಜ ಅಭಿವೃದ್ಧಿ ಸಾಧಿಸಿಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರಮುಖವಾಗಿ ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಕಳಸಾ-ಬಂಡೂರಿ, ಮಹದಾಯಿ ನಾಲಾ ಜೋಡಣೆಯ ವಿಷಯದಲ್ಲಿ ಸುಳ್ಳು ಹೇಳುತ್ತಿರುವ ಜೋಶಿ, ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಯಾವ ಒತ್ತಡ ತರುವ ಕೆಲಸವನ್ನೂ ಇವರು ಮಾಡಲಿಲ್ಲ. ಮಹಾದಾಯಿ ಯೋಜನೆ ಜಾರಿಗೆ ಜೋಶಿ ಅಡ್ಡಗಾಲು ಹಾಕಿದ್ದರಿಂದಾಗಿ ಕೇಂದ್ರ ಅಧಿಸೂಚನೆ ಹೊರಡಿಸಲಿಲ್ಲ’ ಎಂದು ಆರೋಪ ಮಾಡಿದರು.

‘ಮಹಾದಾಯಿ ವ್ಯಾಪ್ತಿಗೆ ಬರುವ ನಾಲ್ಕು ಜಿಲ್ಲೆಗಳ ಸಂಸದರ ಕೊಡುಗೆಯೂ ಏನಿಲ್ಲ. ಈ ಸತ್ಯ ಅರಿತಿರುವ ಮಹದಾಯಿ ಹೋರಾಟಗಾರರು ಮತ್ತು ಜನರು ಜೋಶಿ ವಿರುದ್ದ ಮತ ಹಾಕಲಿದ್ದಾರೆ’ ಎಂದರು.

‘ಇನ್ನೊಂದೆಡೆ ಕಳೆದ 20 ವರ್ಷಗಳಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಿಂದಾಗಿ ಅವಳಿನಗರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಬಿಜೆಪಿ ಆಡಳಿತದ ಕಾರ್ಯ ವೈಖರಿಯಿಂದ ಜನ ಬೇಸತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಪಾಠ ಕಲಿಯಲಿದೆ’ ಎಂದರು.

‘ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಲೇಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ದಿಸೆಯಲ್ಲಿ ಜೆಡಿಎಸ್ ನಾಯಕರು ಗಂಭೀರವಾಗಿ ಪರಿಗಣಿಸಿ, ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಿದ್ದೇವೆ’ ಎಂದರು.

‘ಜೆಡಿಎಸ್ ಬೆಂಬಲದಿಂದ 1ರಿಂದ 1.5ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ವಿನಯ ಕುಲಕರ್ಣಿ ಆಯ್ಕೆಯಾಗಲಿದ್ದಾರೆ. ಅವರ ಗೆಲುವಿನಲ್ಲಿ ಜೆಡಿಎಸ್ ಬಹು ದೊಡ್ಡ ಪಾತ್ರ ವಹಿಸಲಿದೆ’ ಎಂದು ಕೋನರಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ‘ಬಿಜೆಪಿ ಅಭ್ಯರ್ಥಿಯ ಕೊಡುಗೆ ಏನಿಲ್ಲ. ಬರೀ ಬೇರೊಬ್ಬರ ಅಲೆಯಿಂದ ಆರಿಸಿ ಬಂದಿದ್ದಾರೆ ಹೊರತು ತಮ್ಮ ಸ್ವಂತ ಬಲದಿಂದ ಅಲ್ಲ. ಧರ್ಮಗಳ ನಡುವೆ ಒಡಕು ತಂದು ಅದರಲ್ಲಿ ರಾಜಕಾರಣ ಮಾಡುತ್ತಾ ಬಂದಿರುವ ಜೋಶಿ ಅವರಿಗೆ ಈ ಬಾರಿ ಯಾವುದೇ ಅಲೆ ಇಲ್ಲದಾಗಿದೆ’ ಎಂದರು.

‘ಆಖಿಲ ಭಾರತ ವೀರಶೈವ ಮಹಾಸಭಾದಿಂದ ಅಧಿಕೃತವಾಗಿ ಯಾವ ಪಕ್ಷದ ಯಾವ ಅಭ್ಯರ್ಥಿಗೂ ಬೆಂಬಲವಿಲ್ಲ. ಆದರೆ ಸಮಾಜದ ಬೆಂಬಲ ವಿನಯ ಕುಲಕರ್ಣಿ ಅವರಿಗಿದೆ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಅಧ್ಯಕ್ಷ ಬಿ.ಬಿ.ಗಂಗಾಧರಮಠ, ಗಂಗಾಧರ ಪಾಟೀಲಕುಲಕರ್ಣಿ, ಎಂ.ಎಫ್.ಹಿರೇಮಠ, ಬಸವರಾಜ ಮುಗದೂರ, ಭೀಮಪ್ಪ ಕಾಸಾಯಿ, ವೆಂಕಟೇಶ ಸಗಬಾಲ, ಶಂಕರ ದೊಡಮನಿ ಇದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !