ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ಲಾಭದ ಹಾದಿಗೆ ತರಲು ಯತ್ನ- ಭರಮಗೌಡ ಕಾಗೆ

ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಭರಮಗೌಡ ಕಾಗೆ
Published 3 ಫೆಬ್ರುವರಿ 2024, 5:03 IST
Last Updated 3 ಫೆಬ್ರುವರಿ 2024, 5:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಷ್ಟ ಎದುರಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಲಾಭದ ಹಾದಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸಂಸ್ಥೆಯ ಅಧ್ಯಕ್ಷ ಭರಮಗೌಡ ಕಾಗೆ ಹೇಳಿದರು.

ನಗರದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಶಕ್ತಿ ಯೋಜನೆ ಜಾರಿಯಾದ ನಂತರ ಕೆಲವು ಸಮಸ್ಯೆಗಳು ಎದುರಾಗಿವೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬಸ್ಸಿನ ಕೊರತೆಯಾಗಿದೆ. ಬಸ್‌ ಹಾಗೂ ಸಿಬ್ಬಂದಿ ಕೊರತೆಯೂ ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ, ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

‘ಅವ್ಯವಹಾರದಲ್ಲಿ ತೊಡಗಿರುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ. ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ. ಹಿಂದಿನ ಸರ್ಕಾರ ಹಣ ಲೂಟಿ ಹೊಡೆದಿದ್ದರಿಂದ ಈಗ ನಾವು ಹಣದ ಕೊರತೆ ಎದುರಿಸುತ್ತಿದ್ದೇವೆ’ ಎಂದು ಹೇಳಿದರು.

₹ 250 ಕೋಟಿ ಬಾಕಿ: ‘ಕಳೆದ ವರ್ಷದ ಡಿಸೆಂಬರ್‌ ತಿಂಗಳ ಅಂತ್ಯದವರೆಗೆ ಸಂಸ್ಥೆಗೆ ಸರ್ಕಾರದಿಂದ ₹ 250 ಕೋಟಿ ಬಾಕಿ ಬರಬೇಕಾಗಿದೆ. ಇದುವರೆಗೆ ಸರ್ಕಾರ ₹ 490 ಕೋಟಿ ಅನುದಾನ ನೀಡಿದೆ. ಪ್ರತಿ ದಿನ ಸಂಸ್ಥೆಗೆ ₹ 6.50 ಕೋಟಿಯಿಂದ ₹ 7 ಕೋಟಿ ಆದಾಯವಿದ್ದು, ₹ 8 ಕೋಟಿ ವೆಚ್ಚವಿದೆ. ಸರಾಸರಿ ಪ್ರತಿದಿನ ಸಂಸ್ಥೆಗೆ ₹ 1 ಕೋಟಿ ನಷ್ಟ ಉಂಟಾಗುತ್ತಿದೆ’ ಎಂದು ತಿಳಿಸಿದರು.

ಸಿ.ಎಂ ಆಗುವ ಆಸೆ: ‘ನಾವು 135 ಜನ ಕಾಂಗ್ರೆಸ್‌ನಿಂದ ಗೆದ್ದಿದ್ದೇವೆ. ಎಲ್ಲರಿಗೂ ಸಚಿವ ಸ್ಥಾನ ಸಿಗಲು ಸಾಧ್ಯವೇ? ಅದಕ್ಕಾಗಿ ಹಿರಿಯರನ್ನು, 3–4 ಸಲ ಗೆದ್ದವರನ್ನು ಗುರುತಿಸಿ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ’ ಎಂದು ಹೇಳಿದರು.

‘ಮತಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚು ಒತ್ತು ನೀಡಬೇಕೇ ಹೊರತು ಲಾಭದ ಹುದ್ದೆಗೆ ಆಸೆ ಪಡಬಾರದು. ಎಲ್ಲರಿಗೂ ಅಧಿಕಾರ ಸಿಗಲ್ಲ. ನನಗೂ ಸಿ.ಎಂ ಆಗಬೇಕು ಎನ್ನುವ ಆಸೆ ಇದೆ. ಇದು ಸಾಧ್ಯವಾಗುತ್ತದೆಯೇ?’ ಎಂದು ಪ್ರಶ್ನಿಸಿದರು.

‘ಸಮಸ್ಯೆಗಳನ್ನು ಬಗೆಹರಿಸಲು ಜನರು ನಮ್ಮನ್ನು ಆಯ್ಕೆ ಮಾಡಿ, ಕಳುಹಿಸಿದ್ದಾರೆ. ಸಚಿವ ಸ್ಥಾನ ಸಿಗುವುದಕ್ಕಿಂತ ಮುಖ್ಯವಾಗಿ ಅವರ ಸಮಸ್ಯೆಗಳು ಬಗೆಹರಿಯಬೇಕಾಗಿದೆ. ಅದಕ್ಕಾಗಿ ನಾವು ಇಲ್ಲಿದ್ದೇವೆ’ ಎಂದರು.

ಏಪ್ರಿಲ್‌ ಒಳಗೆ 325 ಹೊಸ ಬಸ್‌: ಭರತ್‌ ‘ಶಕ್ತಿ ಯೋಜನೆ ಅನುಷ್ಠಾನದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ದಟ್ಟಣೆ ನಿವಾರಿಸಲು 375 ಹೊಸ ಬಸ್‌ ಖರೀದಿಸಲು ಕಾರ್ಯಾದೇಶ ನೀಡಿದ್ದೇವೆ. ಈ ಪೈಕಿ 50 ಬಸ್‌ಗಳು ಶುಕ್ರವಾರ ಲೋಕಾರ್ಪಣೆಗೊಳ್ಳಲಿವೆ. ಇನ್ನುಳಿದ 325 ಬಸ್‌ಗಳು ಏಪ್ರಿಲ್‌ ಒಳಗೆ ಲೋಕಾರ್ಪಣೆಗೊಳ್ಳಲಿವೆ’ ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ್‌ ಹೇಳಿದರು. ‘ಸಂಸ್ಥೆಯಲ್ಲಿ ಈಗ 4855 ಬಸ್‌ಗಳು ಕಾರ್ಯಾಚರಣೆಯಲ್ಲಿವೆ. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ 50 ಹೊಸ ಬಸ್‌ಗಳನ್ನು ಗ್ರಾಮಾಂತರ ವಿಭಾಗಕ್ಕೆ ನೀಡಲಾಗಿದೆ. 10 ಹೊಸ ‘ಪಲ್ಲಕ್ಕಿ’ ಬಸ್‌ಗಳು ಬಂದಿವೆ. ಮುಂದಿನ ದಿನಗಳಲ್ಲಿ ಇನ್ನೂ 10 ‘ಪಲ್ಲಕ್ಕಿ’ ಬಸ್‌ಗಳು ಸೇರ್ಪಡೆಯಾಗಲಿವೆ’ ಎಂದು ತಿಳಿಸಿದರು. 350 ಎಲೆಕ್ಟ್ರಿಕ್‌ ಬಸ್‌: ‘350 ಹೊಸ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸದ್ಯಕ್ಕೆ ಟೆಂಡರ್‌ ಹಂತದಲ್ಲಿದ್ದು ಗ್ರಾಮಾಂತರ ವಿಭಾಗಕ್ಕೆ 250 ಬಸ್‌ ಹಾಗೂ ನಗರ ವಿಭಾಗಕ್ಕೆ 100 ಬಸ್‌ ನೀಡಲಾಗುವುದು’ ಎಂದು ಹೇಳಿದರು.  ‘ಕೇಂದ್ರ ಸರ್ಕಾರವು ಪಿಎಂ ಇ–ಸೇವಾ ಬಸ್‌ ಯೋಜನೆಯಡಿ ಹುಬ್ಬಳ್ಳಿ–ಧಾರವಾಡ ಹಾಗೂ ಬೆಳಗಾವಿಗೆ ತಲಾ 100 ಎಲೆಕ್ಟ್ರಿಕ್‌ ಬಸ್‌ಗಳನ್ನು ಒದಗಿಸಬಹುದು ಎನ್ನುವ ಪ್ರಸ್ತಾವ ಇದೆ. ರಾಜ್ಯದ ಒಟ್ಟು 10 ನಗರಗಳಿಗೆ ಎಲೆಕ್ಟ್ರಿಕ್‌ ಬಸ್‌ ಒದಗಿಸಬೇಕು ಎನ್ನುವ ಅಂಶವೂ ಇದರಲ್ಲಿದೆ. ಈ 10 ನಗರಗಳನ್ನು ಇನ್ನೂ ಅಂತಿಮಗೊಳಿಸಿಲ್ಲ’ ಎಂದು ತಿಳಿಸಿದರು.

ಕಾಲು ತೊಳೆದು ನೀರು ಕುಡಿಯುತ್ತಾರೆಯೇ? ‘ವಿರೋಧ ಪಕ್ಷದವರು ಇರುವುದೇ ವಿರೋಧ ಮಾಡುವುದಕ್ಕಾಗಿ. ಇದನ್ನು ಬಿಟ್ಟು ನಮಗೆ ಆರತಿ ಮಾಡಿ ಕಾಲು ತೊಳೆದು ನೀರು ಕುಡಿಯುತ್ತಾರೆಯೇ?’ ಎಂದು ಭರಮಗೌಡ ಕಾಗೆ ಹರಿಹಾಯ್ದರು. ‘ಸರ್ಕಾರ ಪತನವಾಗಲ್ಲ ಸ್ಥಿರವಾಗಿರುತ್ತದೆ. ವಿರೋಧ ಪಕ್ಷದವರು ಹಗಲು ಕನಸು ಕಾಣುತ್ತಿದ್ದಾರೆ. ಇದು ನಿಜವಾಗಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT