‘ನಾನು ಎಡವೂ ಹೌದು, ಬಲವೂ ಹೌದು’

7
ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ ಅಧ್ಯಕ್ಷ ಕಂಬಾರ

‘ನಾನು ಎಡವೂ ಹೌದು, ಬಲವೂ ಹೌದು’

Published:
Updated:
Prajavani

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ಹೆಣ್ಣು ಭೋಗದ ವಸ್ತುವೇ? ಪೂರ್ಣ ಕುಂಭವನ್ನು ನೀವೇಕೆ ವಿರೋಧಿಸಲಿಲ್ಲ? ಕನ್ನಡದ ಅಸ್ಮಿತೆಗೆ ಧಕ್ಕೆಯಾಗುತ್ತಿಲ್ಲವೇ? ನೀವು ಎಡವೋ, ಬಲವೋ?

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಸರಣಿ ಪ್ರಶ್ನೆಗಳಿಗೆ, ಹಿರಿಯ ಜೀವ ಡಾ. ಚಂದ್ರಶೇಖರ ಕಂಬಾರ ತಾಳ್ಮೆಯಿಂದ ಉತ್ತರಿಸಿದರು. ಕೆಲವು ಪ್ರಶ್ನೆಗಳಿಗೆ ತಣ್ಣನೆಯ ಉತ್ತರ ನೀಡಿದರು. ಕೆಲವೊಂದು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡುವ ಗೋಜಿಗೆ ಹೋಗದೇ ಜಾರಿಕೊಂಡರು.

ಮಲ್ಲಿಕಾರ್ಜುನ ಕಡಕೋಳ ಅವರು ಕೇಳಿದ ‘ನೀವು ಎಡ ಪಂಥದವರೋ, ಬಲಪಂಥದವರೋ ಎನ್ನುವ ಬಗ್ಗೆ ಸ್ಪಷ್ಟನೆ ಬೇಕಾಗಿದೆ. ರಾಮ ನನ್ನ ಎದೆಯಲ್ಲಿದ್ದಾನೆ ಎಂದು ಹೇಳಿದಾಗ ನೀವು ಬಲಪಂಥದವರು ಅನಿಸುತ್ತದೆ. ಇನ್ನೊಮ್ಮೆ ನಿಮ್ಮ ಕೃತಿಗಳನ್ನು ಅವಲೋಕಿಸಿದಾಗ ಎಡಪಂಥದವರು ಅನಿಸುತ್ತದೆ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆಯಾದಾಗ ನೀವು ಪ್ರಶಸ್ತಿಗಳನ್ನು ವಾಪಸ್‌ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ ಕಂಬಾರರು, ‘ಗೌರಿಯನ್ನು ನಾನು ಎತ್ತಿ ಆಟವಾಡಿಸಿದ್ದೇನೆ. ಲಂಕೇಶ್‌ ಜತೆಯೂ ಆತ್ಮೀಯ ಒಡನಾಟವಿತ್ತು. ಕಲಬುರ್ಗಿ ನನ್ನ ಸಹಪಾಠಿ. ಗೌರಿ ಮತ್ತು ಕಲಬುರ್ಗಿ ಹತ್ಯೆಯಾದಾಗ ದುಃಖಪಟ್ಟಿದ್ದೇನೆ. ಇದನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಬೇಕಾಗಿಲ್ಲ. ನನಗೆ ಯಾವುದು ಎಡ, ಯಾವುದು ಬಲ ಎಂಬುದು ಗೊತ್ತಾಗುತ್ತಿಲ್ಲ. ನಾನು ಎಡವೂ ಹೌದು, ಬಲವೂ ಹೌದು’ ಎಂದರು.

ಪೂರ್ಣಕುಂಭ ಸ್ವಾಗತವನ್ನು ಏಕೆ ವಿರೋಧಿಸಲಿಲ್ಲ ಎಂದು ಭಾರತಿ ಹೆಗಡೆ ಕೇಳಿದ ಪ್ರಶ್ನೆಗೆ ನಯವಾಗಿಯೇ ಜಾರಿಕೊಂಡ ಕಂಬಾರರು, ‘ಕುಂಭದ ಬಗ್ಗೆ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸ್ತ್ರೀಯರಿಗೆ ಅನ್ಯಾಯವಾದರೆ ನಮಗೂ ದುಃಖವಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರ ಅನಗತ್ಯ. ದಯವಿಟ್ಟು ಕ್ಷಮಿಸಿ’ ಎಂದು ವಿವಾದದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

‘ಕನ್ನಡದಲ್ಲೇ ಯೋಚಿಸಿ’

ಕನ್ನಡದ ಅಸ್ಮಿತೆ ಕುರಿತು ಡಾ. ಚಂದ್ರಶೇಖರ ಉಷಾಲ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂಬಾರರು ಮೂರು ಸೂತ್ರಗಳನ್ನು ನೀಡಿದರು.

ಪ್ರಪಂಚದ ಯಾವುದೇ ಮೂಲೆಯಲ್ಲಿ ಇಬ್ಬರು ಕನ್ನಡಿಗರು ಭೇಟಿಯಾದರೆ ಕನ್ನಡದಲ್ಲೇ ಮಾತನಾಡಿ. ವಿದೇಶಿಯರು ಭೇಟಿಯಾದರೆ ನೀವಾಗಿಯೇ ಇಂಗ್ಲಿಷ್‌ನಲ್ಲಿ ಮಾತನಾಡಬೇಡಿ. ಅವರಿಗೆ ಕನ್ನಡ ಗೊತ್ತಿಲ್ಲದಿದ್ದರೆ ಮಾತ್ರ ಬೇರೆ ಭಾಷೆ ಬಳಸಿ. ಆದರೆ, ಮರೆಯದೆ ಅವರಿಗೂ ಕನ್ನಡ ಕಲಿಸಿ. ವಿದ್ಯಾವಂತರು ಕನ್ನಡದಲ್ಲೇ ವಿಚಾರ ಮಂಥನ ಮಾಡಿ, ಆಲೋಚನೆ ಮಾಡಿ ಎಂದು ಸಲಹೆ ನೀಡಿದರು. ಡಿಜಿಟಲೀಕರಣ ಕುರಿತು ಸವಿತಾ ಶ್ರೀನಿವಾಸ್‌ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂಬಾರರು, ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಉನ್ನತ ಸ್ಥಾನ ಪಡೆದಿದ್ದರೂ ಕನ್ನಡದ ತಂತ್ರಾಂಶ ಅಭಿವೃದ್ಧಿ ವಿಷಯದಲ್ಲಿ ಇನ್ನೂ ಬಡವರಾಗಿದ್ದೇವೆ. ಸರ್ಕಾರ ಈಗಲಾದರೂ ಒಂದು ಉನ್ನತ ಸಮಿತಿ ರಚಿಸಬೇಕು’ ಎಂದರು.

ದೇವರ ಜನಗಣತಿ ನಡೆದಿಲ್ಲ

‘ಭಾರತದಲ್ಲಿ 64 ಸಾವಿರ ಜಾತಿಗಳಿವೆ. 900 ಕೋಟಿ ದೇವತೆಗಳಿವೆ. 12 ಸಾಯಿಬಾಬಾಗಳು ಸಹ ಇದ್ದಾರೆ. ನಮ್ಮಲ್ಲಿನ ದೇವರಗಳ ಬಗ್ಗೆ ಇದುವರೆಗೆ ಜನಗಣತಿಯೂ ನಡೆದಿಲ್ಲ’ ಎಂದು ಚಂದ್ರಶೇಖರ ಕಂಬಾರ ದೇಶದ ವೈವಿಧ್ಯತೆಯನ್ನು ವಿಶ್ಲೇಷಿಸಿದರು.

ಡಾ. ಪದ್ಮಿನಿ ನಾಗರಾಜ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಭಾರತದಂತಹ ಸಹನಾಶಕ್ತಿ ಹೊಂದಿರುವ ದೇಶ ಎಲ್ಲಿಯೂ ಇಲ್ಲ. ಭಿನ್ನಾಭಿಪ್ರಾಯಗಳ ನಡುವೆ ಏಕತೆಯಿಂದ ಬದುಕುತ್ತಿದ್ದೇವೆ. ನೂರಾರು ಮಹಾಭಾರತ, ರಾಮಾಯಣಗಳಿವೆ. ಅಯೋಧ್ಯೆಯ ರಾಮ ಚರಿತ್ರೆ ಆಗುತ್ತಾನೆ. ಹೃದಯಲ್ಲಿರುವ ರಾಮ ಪುರಾಣ ಆಗುತ್ತಾನೆ. ಇಂತಹ ಸಾಮರಸ್ಯ ಯಾವ ದೇಶದಲ್ಲಿದೆ’ ಎಂದು ವಿವರಿಸಿದರು.’

ಎಚ್‌.ಜಿ. ಮದನಗೌಡರ ಪ್ರಶ್ನೆಗೂ ಇದೇ ರೀತಿ ವಿಶ್ಲೇಷಿಸಿದ ಅವರು, ‘ನಮ್ಮ ದೇಶದಲ್ಲಿ ಅಂತಃಕರಣ ಇದೆ. ಯಾವ ಧರ್ಮ ದೊಡ್ಡದು ಎನ್ನುವ ಬಗ್ಗೆ ಸಾವಳಗಿ ಶಿವಲಿಂಗೇಶ್ವರರು ಮತ್ತು ಬಂದೇ ನವಾಬರು 13 ದಿನ ವಾಗ್ವಾದ ನಡೆಸಿದ್ದರು. ಕೊನೆಗೆ ನಾವಿಬ್ಬರು ಒಂದೇ ಎಂದು ಬಟ್ಟೆ ಬದಲಾಯಿಸಿಕೊಂಡರು. ಇದೇ ಈ ದೇಶದ ಅಸ್ಮಿತೆ’ ಎಂದು ತಿಳಿಸಿದರು.

ಸಂಗ್ಯಾಬಾಳ್ಯಾ ನಾನು ಬರೆದಿಲ್ಲ: ‘ಸಂಗ್ಯಾಬಾಳ್ಯಾ ನಾಟಕವನ್ನು ನಾನು ಬರೆದಿಲ್ಲ. ಅದೊಂದು ಬಯಲಾಟ. ಯಾರೋ ಒಬ್ಬ ಬರೆದಿದ್ದ. ನಾನು ಕೇವಲ ಸಂಭಾಷಣೆ ಬರೆದೆ’ ಎಂದು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !