ಭಾನುವಾರ, ಏಪ್ರಿಲ್ 11, 2021
30 °C
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆ

ಕ್ರೀಡಾಕ್ಷೇತ್ರದಿಂದ ರಾಜಕಾರಣ ದೂರವಿಡಿ: ಅರುಣ ಶಹಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕ್ರೀಡಾಕೂಟಗಳ ಆಯೋಜನೆ ಸೇರಿದಂತೆ ಕ್ರೀಡೆಯ ಎಲ್ಲ ಚಟುವಟಿಕೆಗಳಲ್ಲಿ ರಾಜಕಾರಣದ ಆರ್ಭಟವೇ ಮೆರೆದಾಡುತ್ತಿದ್ದು; ಕ್ರೀಡಾಕ್ಷೇತ್ರವನ್ನು ರಾಜಕಾರಣದಿಂದ ಹಾಗೂ ಪಟ್ಟಭದ್ರಗಳ ಹಿತಾಸಕ್ತಿಯಿಂದ ಮುಕ್ತಿಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು.

ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ನಗರದ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿ ಸಮಿತಿಯ ಮಹಾಸಭೆಯಲ್ಲಿ ಮಾತನಾಡಿದ ಅವರು ‘ಕ್ರೀಡಾಕೂಟಗಳು ನಡೆಸುವ ಶಾಲೆಗಳೇ ಬೇರೆ; ಹಣ ತಿನ್ನುವವರೇ ಬೇರೆ. ಮಕ್ಕಳಿಂದ ಕ್ರೀಡಾ ಶುಲ್ಕ ಪಡೆದು ಅವರಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ರೀಡಾಕ್ಷೇತ್ರಕ್ಕೆ ಹೆಚ್ಚು ಹಣ ಮೀಸಲಿಟ್ಟಿಲ್ಲ’ ಎಂದರು.

‘ದೈಹಿಕ ಶಿಕ್ಷಣ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಹೋರಾಟ ಮಾಡಿದ್ದಾರೆ. ಇದಕ್ಕಾಗಿ ಈಗಿರುವ ಸಂಘದಲ್ಲಿ ಗ್ರೇಡ್‌ 1 ಶಿಕ್ಷಕರು, ಗ್ರೇಡ್ 2 ಶಿಕ್ಷಕರು ಎಂದು ಪ್ರತ್ಯೇಕಿಸಿ ಸಂಘಟನೆಗಳನ್ನು ಮಾಡಲಾಗುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ವೈದ್ಯನಾಥನ್‌ ವರದಿ ಪೂರ್ಣ ಪ್ರಮಾಣದಲ್ಲಿ ಜಾರಿ ಸೇರಿದಂತೆ ಮಹತ್ವದ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುವಾಗಿ ಸಂಘಟನೆಗಳು ವಿಘಟನೆಗಳಾದರೆ ನಿಮ್ಮ ಶ್ರಮಕ್ಕೆ ಯಾವುದೇ ಬೆಲೆ ಸಿಗುವುದಿಲ್ಲ. ಶಿಕ್ಷಣ ಇಲಾಖೆ ಕೆಲವರ ಕಪಿಮುಷ್ಠಿಯಲ್ಲಿ ಸಿಲುಕಿದೆ’ ಎಂದು ಟೀಕಿಸಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ‘ದೈಹಿಕ ಶಿಕ್ಷಣ ಶಿಕ್ಷಕರು ಸಹ ಶಿಕ್ಷಕರಿಗೆ ಸಮಾನ ಎನ್ನುವ ನಿಯಮಕ್ಕೆ ಸಹ ಶಿಕ್ಷಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮವರೇ ನಿಮ್ಮ ಬೆಂಬಲಕ್ಕೆ ನಿಲ್ಲದಿದ್ದರೆ ಬೇಡಿಕೆ ಈಡೇರುವುದು ಯಾವಾಗ?’ ಎಂದು ಪ್ರಶ್ನಿಸಿದರು.

‘ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಅಛಲವಾಗಿ ಹೋರಾಟ ಮಾಡುತ್ತಿಲ್ಲ. ನಿಮ್ಮ ಹೋರಾಟ ಸಭೆ, ಸಮಾರಂಭಗಳಿಗಷ್ಟೇ ಸೀಮಿತವಾಗಿದೆ. ಗಟ್ಟಿ ನಿರ್ಧಾರದಿಂದ ಹೋರಾಟ ಮಾಡಿ; ಇಲ್ಲವಾದರೆ ಈಗಲೇ ಹೋರಾಟದಿಂದ ಹಿಂದೆ ಸರಿದು ಬಿಡಿ’ ಎಂದು ಕಟುವಾಗಿ ಹೇಳಿದರು.

ವಿಜಯಪುರ, ಕಲಬುರ್ಗಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಮಹಾಸಭೆಯಲ್ಲಿ  ಪಾಲ್ಗೊಂಡಿದ್ದರು. ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್‌.ಎಸ್‌. ತೋಟಗೇರ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೌಡಪ್ಪ ಎಸ್‌., ಶ್ರೀನಿವಾಸ ಗೌಡ, ಸಂದೀಪ ಬೂದಿಯಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 

ನಿವೃತ್ತ ಶಿಕ್ಷಕನಿಗೆ ಉದ್ಘಾಟನೆ ಗೌರವ

ಹುಬ್ಬಳ್ಳಿ: ಕಾರ್ಯಕ್ರಮದ ಉದ್ಘಾಟನೆಗೆ ಗಣ್ಯರು ಸಜ್ಜಾದಾಗ ಹೊರಟ್ಟಿ ಅವರು, 86 ವರ್ಷದ ಕೃಷ್ಣಪ್ಪ ಅವರನ್ನು ವೇದಿಕೆ ಮೇಲೆ ಕರೆದು ಉದ್ಘಾಟನೆ ನೀವೇ ನೆರವೇರಿಸಿ ಎಂದು ಹೇಳಿದರು.

ಈ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ‘ನನಗೆ ಕಲಿಸಿದ ಶಿಕ್ಷಕರಲ್ಲಿ ಕೃಷ್ಣಪ್ಪ ಕೂಡ ಒಬ್ಬರು. ಇಷ್ಟೊಂದು ವಯಸ್ಸಾದರೂ ಅತ್ಯಂತ ಚಟುವಟಿಕೆಯಿಂದ ಇದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.