ಶನಿವಾರ, ಜುಲೈ 31, 2021
27 °C
ಬಡ್ಡಿ ಹೊರೆ

ಸಾಲ ಮರಳಿಸದ ವ್ಯಕ್ತಿಯ ಅಪಹರಣ; ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾಲ ಮರಳಿಸಲು ತಡ ಮಾಡಿದ್ದರಿಂದ ಹಳೇ ಹುಬ್ಬಳ್ಳಿಯ ಬಡ್ಡಿ ವ್ಯಾಪಾರಿ ಸಿದ್ದೇಶ್ವರ ಬಂಕಾಪುರ ಎಂಬಾತ, ತಾಲ್ಲೂಕಿನ ಅದರಗುಂಚಿ ಗ್ರಾಮದಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಜಿ. ಶಿವಶಂಕರ ಎಂಬುವವರನ್ನು ಅಪಹರಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಶಿವಶಂಕರ ಶೇ 10ರಷ್ಟು ಬಡ್ಡಿ ದರದಲ್ಲಿ ₹5 ಲಕ್ಷ ಸಾಲ ಪಡೆದಿದ್ದರು. ನಿಗದಿತ ಸಮಯಕ್ಕೆ ಸಾಲ ಮರುಪಾವತಿಸದ ಕಾರಣ ಸಿದ್ದೇಶ್ವರ, ಅದರಗುಂಚಿಯ ಶಿವಶಂಕರ ಅವರ ಮನೆಗೆ ಬೀಗ ಹಾಕಿ ಅಪಹರಿಸಿಕೊಂಡು ಬಂದು ಹಳೇ ಹುಬ್ಬಳ್ಳಿಯ ಬೃಂದಾವನ ಲಾಡ್ಜ್‌ನಲ್ಲಿ ನಾಲ್ಕು ದಿನ ಬಂಧನದಲ್ಲಿಟ್ಟಿದ್ದ. ಶಿವಶಂಕರ ಅವರಿಂದ ಸಿದ್ದೇಶ್ವರ ಒತ್ತಾಯಪೂರ್ವಕವಾಗಿ ಒಂದು ಸ್ಯಾಂಟ್ರೊ ಮತ್ತು ನ್ಯಾನೊ ಕಾರು ಕಸಿದುಕೊಂಡು ಮಾರಾಟ ಮಾಡಿದ್ದ. ಮಾರಾಟದಿಂದ ಬಂದ ಹಣವನ್ನೂ ತಾನೇ ಇಟ್ಟುಕೊಂಡಿದ್ದ. ಮನೆಯ ಮೂಲಕಾಗದ ಪತ್ರಗಳನ್ನು, ಎಂಟು ಚೆಕ್‌ಗಳನ್ನು ಕೂಡ ಪಡೆದುಕೊಂಡಿದ್ದ. ಶಿವಶಂಕರ, ಹೋಟೆಲ್‌ ಬಂಧನದಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬಯಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಸಿದ್ದೇಶ್ವರನನ್ನು ಪತ್ತೆ ಹಚ್ಚಿದ ಪೊಲೀಸರು ಕೃತ್ಯಕ್ಕೆ ಉಪಯೋಗಿಸಿದ ಇನ್ನೊವಾ ಕಾರು, ಸ್ಯಾಂಟ್ರೊ ಕಾರು, ಮನೆಯ ಮೂಲದಾಖಲೆ ಮತ್ತು ಎಂಟು ಚೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರು ಮೀಟರ್‌ ಬಡ್ಡಿ ಕಾರಣಕ್ಕೆ ತೊಂದರೆ ಅನುಭವಿಸುತ್ತಿದ್ದರೆ ಪೊಲೀಸ್ ಕಂಟ್ರೋಲ್ ರೂ 0836-2233555 ದೂರು ನೀಡುವಂತೆ ಪೊಲೀಸ್‌ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು