ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್‌ ಎರಡನೇ ಮಹಡಿಯಿಂದ ಬಿದ್ದು ದುರ್ಮರಣ

Last Updated 16 ಡಿಸೆಂಬರ್ 2020, 1:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದ ಧಾರವಾಡದ ಮಾಳಮಡ್ಡಿಯ ರಾಘವೇಂದ್ರ ಶಂಕ್ರಪ್ಪ ಎಂಬುವವರು ಮಂಗಳವಾರ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಒಂದು ವಾರದಿಂದ ಕಟ್ಟಡಕ್ಕೆ ಬಣ್ಣ ಹಚ್ಚುವ ಕೆಲಸ ನಡೆದಿತ್ತು.

ಎರಡನೆ ಮಹಡಿಯಿಂದ ಬಿದ್ದ ತಕ್ಷಣವೇ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆ ವೇಳೆಗಾಗಲೇ ರಾಘವೇಂದ್ರ ಮೃತಪಟ್ಟಿದ್ದರು ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ವಿದ್ಯಾನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

ಇಲಿಯಾಸ್ ಸಾವು: ಡಿ. 11ರಂದು ನಗರದಲ್ಲಿ ನಡೆದಿದ್ದ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಲಿಯಾಸ್‌ ಅಹ್ಮದ್‌ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟರು. ಎಗ್‌ ರೈಸ್‌ ಅಂಗಡಿ ನಡೆಸುತ್ತಿದ್ದ ಅಹ್ಮದ್‌ ಮೇಲೆ ಹಲ್ಲೆ ನಡೆದಿತ್ತು. ಶಹರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಮಹಿಳೆ ಮೇಲೆ ಹಲ್ಲೆ, ಬಂಧನ: ಹೆಗ್ಗೇರಿಯ ಮಾರುತಿ ನಗರದಲ್ಲಿ ಭಾನುವಾರ ತಡರಾತ್ರಿ ರಾಜೇಶ್ವರಿ ಎಂಬುವರ ಮೇಲೆ ರೌಡಿಶೀಟರ್‌ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಗಲಾಟೆ ಮಾಡಬೇಡಿ ಎಂದು ರಾಜೇಶ್ವರಿ ಬುದ್ಧಿವಾದ ಹೇಳಿದ್ದಕ್ಕೆ ರೌಡಿಶೀಟರ್‌ ಸಚಿನ್ ಹೆಬ್ಬಳ್ಳಿ ಮತ್ತು ರಾಕೇಶ ಹೆಬ್ಬಳ್ಳಿ ಸೇರಿಕೊಂಡು ಹಲ್ಲೆ ಮಾಡಿದ್ದರು. ಈ ಕುರಿತು ಮಹಿಳೆ ದೂರು ನೀಡಿದ್ದರು. ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರ ಬಂಧನ: ನಗರದ ವಿವಿಧೆಡೆ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದ್ದು ಅವರಿಂದ ₹21,620 ನಗದು ವಶಪಡಿಸಿಕೊಳ್ಳಲಾಗಿದೆ.

ಹಳೇ-ಹುಬ್ಬಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆನಂದ ನಗರದಲ್ಲಿ ಜೂಜಾಟವಾಡುತ್ತಿದ್ದ ಮುಜಾಮೀಲ್ ಸುದರ್ಜಿ ಮತ್ತು ಮಲ್ಲಿಕ ಬಳಿಗಾರ ಎಂಬುವರಿಂದ ₹20,300 ಹಣ ಮತ್ತು ಎರಡು ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಶೋಕ ನಗರ ಠಾಣೆ ವ್ಯಾಪ್ತಿಯ ಶಕ್ತಿ ಕಾಲೊನಿಯಲ್ಲಿ ಜೂಜಾಟವಾಡುತ್ತಿದ್ದ ಸ್ವಾಗತ ಕಾಲೊನಿಯ ಇರ್ಷಾದ ಹುಬ್ಬಳ್ಳಿ ಎಂಬಾತನನ್ನು ಬಂಧಿಸಿ ₹1,320 ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT