ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೂರು ಗ್ರಾಮ ಪಂಚಾಯ್ತಿ: ಬಿಜೆಪಿ ಕಾರ್ಯಕರ್ತರ ಜಗಳ ಕೊಲೆಯಲ್ಲಿ ಅಂತ್ಯ

Last Updated 19 ಏಪ್ರಿಲ್ 2023, 14:11 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ಕೋಟೂರು ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಪ್ರವೀಣ ಕಮ್ಮಾರ (36) ಅವರನ್ನು ದುಷ್ಕರ್ಮಿಗಳು ಚಾಕು ಇರಿದು ಹತ್ಯೆ ಮಾಡಿದ್ದಾರೆ.

ಗ್ರಾಮದೇವತೆ ಉಡಚಮ್ಮ ದೇವಿಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮಂಗಳವಾರ ತಡರಾತ್ರಿ ಪ್ರಸಾದ ನೀಡುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವನ್ನು ಬಿಡಿಸಲು ಮುಂದಾದ ಪ್ರವೀಣ ಕಮ್ಮಾರನಿಗೆ ಚಾಕುವಿನಿಂದ ಹಲವೆಡೆ ಇರಿಯಲಾಗಿದೆ.

ತೀವ್ರವಾಗಿ ಗಾಯಗೊಂಡ ಪ್ರವೀಣನನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಿಗ್ಗೆ 5ಕ್ಕೆ ಪ್ರವೀಣ ಕೊನೆಯುಸಿರೆಳೆದರು ಎಂದರು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಬಿಜೆಪಿಯ ಜಿಲ್ಲಾ ಗ್ರಾಮಾಂತರ ಒಬಿಸಿ ಉಪಾಧ್ಯಕ್ಷ ರಾಘವೇಂದ್ರ ಪಟಾತ್, ಯಲ್ಲಪ್ಪ ಕರಿಕಟ್ಟಿ, ಆತ್ಮಾನಂದ ಪಟಾತ, ಮಹಾಂತೇಶ ಪಟಾತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಕುರಿತಂತೆ ದೂರು ನೀಡಿರುವ ಪ್ರವೀಣ ಪತ್ನಿ ಶಿಲ್ಪಾ ಕಮ್ಮಾರ ಅವರ ಹೇಳಿಕೆ ಮೇರೆಗೆ ಬಸವರಾಜ ಪಾಟೀಲ, ಶಂಕರಯ್ಯ ಮಠಪತಿ ಹಾಗೂ ಗೀತಾ ಬಾರಕೇರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಗುತ್ತಿಗೆ ಕೆಲಸ ಮಾಡುತ್ತಿದ್ದ ರಾಘವೇಂದ್ರ ಪಟಾತ್‌ನಿಗೆ ಉಪಾಧ್ಯಕ್ಷನಾಗಿದ್ದ ಪ್ರವೀಣ ಕೆಲಸ ಕೊಡುತ್ತಿರಲಿಲ್ಲ. ಇದು ಇಬ್ಬರ ನಡುವೆ ವೈಷಮ್ಯಕ್ಕೆ ಕಾರಣವಾಗಿತ್ತು. ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದ ಗೀತಾಳನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ಹಿಂದಿನ ಅಧ್ಯಕ್ಷ ಶಂಕರಯ್ಯ ಮಠಪತಿ ಕುಮ್ಮಕ್ಕಿನಿಂದ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣ ತೆಗೆದು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ’ ಎಂದು ಶಿಲ್ಪಾ ದೂರಿನಲ್ಲಿ ಹೇಳಿದ್ದಾರೆ.

ಪ್ರಕರಣ ಬುಧವಾರ ಬೆಳಿಗ್ಗೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಪ್ರವೀಣ ಭಾವಚಿತ್ರ ಹಿಡಿದು ಬಿಜೆಪಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ಕೊಲೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರತಿಕ್ರಿಯಿಸಿ, ‘ಇದೊಂದು ರಾಜಕೀಯ ದ್ವೇಷದ ಹತ್ಯೆಯಾಗಿದೆ. ಜಿಲ್ಲೆಯಲ್ಲಿ ಯೋಗೀಶಗೌಡ ಕೊಲೆ ಪ್ರಕರಣದ ನಂತರ ಇಂಥ ರಾಜಕೀಯ ಹತ್ಯೆಗಳು ಆತಂಕ ಮೂಡಿಸಿವೆ. ಇದನ್ನು ಕೊನೆಗಾಣಿಸಬೇಕು’ ಎಂದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ‘ಕಳೆದ ಐದು ವರ್ಷಗಳಲ್ಲಿ ಇಂಥ ರಾಜಕೀಯ ಕೊಲೆಗಳು ನಡೆದಿರಲಿಲ್ಲ. ಆದರೆ ಸರ್ಕಾರದ ಅವಧಿ ಮುಗಿದು ನೀತಿ ಸಂಹಿತೆ ಜಾರಿಗೆ ಬಂದ ನಂತರ ಕೊಲೆ ನಡೆದಿದೆ. ಕೊಲೆಯ ಹಿಂದಿನ ಕಾಣದ ಕೈಯನ್ನು ಬಂಧಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ‘ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಈವರೆಗೂ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು ಕೊಲೆಯ ಹಿಂದಿನ ವ್ಯಕ್ತಿಗಳು ಯಾರೇ ಇದ್ದರೂ ಕಾನೂನಿನ ಚೌಕಟ್ಟಿನಡಿ ಶಿಕ್ಷೆಗೆ ಗುರಿಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT