ಸೋಮವಾರ, ಸೆಪ್ಟೆಂಬರ್ 16, 2019
27 °C

ನಾವೂ ನೀವೂ ಕೃಷ್ಣನೂ

Published:
Updated:
Prajavani

ಪಂಚಮಿಗೆ ಮಾಡಿದ್ದ ಉಂಡಿ, ಅವಲಕ್ಕಿ ಮುಗ್ಯಾಕ ಬಂದಾಗ ಮತ್ತ ಡಬ್ಬಿ ಬೆಳಗಿ ತುಂಬಿಸಿಡಾಕ ಕೃಷ್ಣಾಷ್ಟಮಿ ಬರ್ತದ ಅಂತ ಅಂದ್ಕೊಂಡಿದ್ದೆ. ಯಾಕಂದ್ರ ರಾಖಿ ಹಬ್ಬ ಮುಗದ ಕೂಡಲೇ ಮತ್ತ ಚಕ್ಕುಲಿ, ಕೋಡುಬಳೆ, ಶಂಕರಪೋಳಿ ಇವುಗಳ ತಯಾರಿಗೆ ಬೆಣ್ಣಿ ತರಾಕ ಅಲೀತಿದ್ವಿ. ಬೆಣ್ಣಿ ತರೂಮುಂದ ಅದ್ಯಾಕಂತ ಗೊತ್ತಿಲ್ಲ ಬೆಣ್ಣಿ ಪಾತ್ರಿಯೊಳಗ ಒಂದು ಗಜ್ಜರಿ ಇಟ್ಟು ಕಳಸ್ತಿದ್ರು. ಆ ಗಜ್ಜರಿ ನೆಕ್ಕಿಡು ಖುಷಿಮುಂದ.. ಯಾರಿಗಾದರೂ ಗೊತ್ತಾದ್ರ ಹೆಂಗ ಅನ್ನುವ ಆತಂಕ ಮೀರಿ ಆ ಕಳ್ಳತನ ಮಾಡ್ತಿದ್ವಿ.

ಹೆಂಗಿದ್ರೂ ಕಳ್ಳ ಕೃಷ್ಣನಿಗಾಗಿಯೇ ಅಲ್ಲ... ಮಾಡೂದು.. ಆ ದೇವರು ಮಾಫಿ ಮಾಡ್ತಾನ ಅನ್ನೂದೊಂದು ಧೈರ್ಯ ಇರ್ತಿತ್ತು. ಈ ಕೃಷ್ಣ ಪ್ರಿಯನಾಗೂದು ಇಂಥ ಕೆಲಸಗಳಿಂದಾಗಿಯೇ... ಸಣ್ಣಾವ್ರಿದ್ದಾಗ, ಮೊಸರು ಉಣ್ಣಾಕ, ಬೆಣ್ಣಿ ಕದಿಯಾಕ, ಹಾಲುಣ್ಣಾಕ, ಅಮ್ಮಗ ಕಾಡಾಕ... ಮುದ್ದು ಕೃಷ್ಣನೇ ಪ್ರೇರಣೆ. ಅವ್ವಂದರೂ ಅಷ್ಟೆ.. ಕಳ್ಳ ಕಿಟ್ಟ, ಕಿಟ್ಟಣ್ಣ, ಕಿಟ್ಟಿ ಅನ್ಕೊಂತ, ಕಿರುನಗೆಯಿಂದಲೇ ತುಂಟತನ ಸಹಿಸೋರು.

ಅಷ್ಟೇ ಅಲ್ಲ; ಹದಿಹರೆಯಕ್ಕ ಬಂದಾಗಲೂ ‘ಮನ್‌ಮರ್ಜಿಯಾ’ ಆಗಿರಬೇಕಂದ್ರ ಮುರಲಿಲೋಲನೇ ಸ್ಫೂರ್ತಿ. ‘ಕೃಷ್ಣ’ನ ಛಾಯೆ ಮನಸಿನ ಮ್ಯಾಲೆ ಅದೆಷ್ಟು ದಟ್ಟ ಆಗ್ತದಂದ್ರ, ಕಾಡಿಸಿಕೊಳ್ಳುವ ಪ್ರತಿ ಹುಡುಗಿಯೂ ಗೋಪಿಯೇ ಅನಸ್ತಾಳ. ತಾನು ಗೋಪಾಲನೇ ಅಂದ್ಕೋತಾರ. ಅಷ್ಟರ ಮಟ್ಟಿಗೆ ತುಂಟತನಕ್ಕೂ ದೇವರ ಸಮರ್ಥನೆ ಸಿಗೂದು ಈ ನಂದಲಾಲನಿಂದಲೇ. 

ಮುಂದ ಪ್ರೀತಿಸಿ ಜೊತಿಗಿದ್ದಾಗ.. ಭೇಷ್ಯಾತು.. ಕೃಷ್ಣ ರುಕ್ಮಿಣಿ ಜೋಡಿ ಇದ್ದಂಗೈತಿ ಅಂತ ದೊಡ್ಡೋರು ಹರಸೋರು. ಪ್ರೀತಿ ಸಿಗದಿದ್ದಾಗ ಕೃಷ್ಣ ರಾಧೆ ಹಂಗ.., ಬ್ಯಾರೆ ಬ್ಯಾರೆ ಆಕರ್ಷಣೆಗೆ ಒಳಗಾಗಿ ಹಲವಾರು ಗೋಪಿಯರು ಮನದಂಗಳಕ್ಕೆ ಬಂದು ಹೋದರೂ ಮನಮೋಹನನ ಕೃತ್ಯ ಅಂತನೇ ಹೇಳ್ತೇವಿ. ತುಟಿಯಂಚಿಗೆ ನಗುವಿರಿಸಿಕೊಂಡೇ ಹಣಿಗೆ ಗಂಟು ಹಾಕ್ಕೊಂತಾರ.

ಬದುಕಿನ ವೃತ್ತ ವೃತ್ತಾಂತದೊಳಗ ಛೊಲೊನರೆ ಆಗ್ಲಿ, ಕೆಟ್ಟರೆ ಆಗ್ಲಿ ‘ಕರ್ಮ ಸಿದ್ಧಾಂತ’ ಯಾವತ್ತಿಗೂ ಸಮರ್ಥನೆಗೆ ನಿಲ್ತದ. ಒಬ್ಬ ಮನುಷ್ಯನ ಸಮಸ್ತ ಆಗುಹೋಗುಗಳಿಗೂ ಹಿಂಗೊಂದು ಸಮರ್ಥನೆ ಸಿಕ್ರ, ಅವನೊಳಗು ಸುಲಭವಾಗಿ ಕುಸಿಯುವುದಿಲ್ಲ.  ಮಾನಸಿಕವಾಗಿ ಕುಗ್ಗದಂತೆ ಎತ್ತಿಹಿಡಿಯುವ ಈ ತತ್ವ ನಮ್ಮ ಒಳಗನ್ನು ಗಟ್ಟಿಗೊಳಿಸುತ್ತದೆ. ಪ್ರತಿ ಕ್ರಿಯೆಗೂ ಪ್ರತಿಕ್ರಿಯೆ ಒಂದು ಇದ್ದ ಇರ್ತದ ಅನ್ನುವ ಸಮಾಧಾನ ಜೀವನ ಸ್ವೀಕರಿಸುವ ಮನಃಸ್ಥಿತಿಯನ್ನೇ ಸೃಷ್ಟಿಸ್ತದ.

ಕೃಷ್ಣಾ.. ಅಂತನ್ನಲಿ, ಬಿಡಲಿ.. ಒಟ್ನಾಗ ನಮ್ಮ ಜೀವನದಾಗ ಉದ್ದಕ್ಕೂ ಕೃಷ್ಣ ಇದ್ದೇ ಇರ್ತಾನ. ಹಿಂಗ ಪ್ರತಿಯೊಂದಕ್ಕೂ ‘ಕೃಷ್ಣಾ..’  ಅನ್ನುವ ನಾವು, ಅದ್ಯಾವಾಗ ಕೃಷ್ಣನನ್ನು ಕುಹಕಿಯಾಗಿಸಿದೆವೊ ಗೊತ್ತಿಲ್ಲ.

ಎಲ್ಲ ನಕಾರಾತ್ಮಕ ಅಂಶಗಳಿಗೂ ಕೃಷ್ಣನ ಹೆಸರನ್ನೇ ಕೊಟ್ವಿ. ಜೈಲಿಗೆ ಹೋದರು ಅನ್ನಾಕ ಕೃಷ್ಣನ ಜನ್ಮಸ್ಥಾನಕ್ಕ, ಸಮ್ಮತವಲ್ಲದ ಲೈಂಗಿಕ ಸಂಬಂಧವಿದ್ರೂ ರಾಸಲೀಲೆ, ಕೃಷ್ಣಲೀಲೆ ಅನ್ನೂದು, ಮೋಸ ಬಂದ ಕೂಡಲೇ, ರಾಮನ ಲೆಕ್ಕ, ಕೃಷ್ಣನ ಲೆಕ್ಕ.. ಅನ್ನೂದು... ಹಿಂಗ ಯಾವಾಗ ಕೃಷ್ಣ ಅನ್ನೂದು ಕರ್ಕಶ ಆಗಾಕ ಶುರು ಆಯ್ತು ಗೊತ್ತಿಲ್ಲ. ಆದ್ರೂ ಛೊಲೊನರ ಇರಲಿ, ಕೆಟ್ಟದ್ದರ ಇರಲಿ.. ಕೃಷ್ಣಾ... ಅನ್ನೂದು ತಪ್ಪಲಿಲ್ಲ.

ಇಷ್ಟಕ್ಕೂ ಕೃಷ್ಣ ಆರಾಧಿಸಬಹುದಾದ ದೇವರು ಹೌದೋ ಅಲ್ಲೋ ಗೊತ್ತಿಲ್ಲ.. ಯಾಕಂದ್ರ ಯಾವತ್ತಿದ್ದರೂ ಕೃಷ್ಣ ಒಂದು ಸಾಂಗತ್ಯಕ್ಕೆ ಬೇಕು. ಸಮಾಧಾನಕ್ಕ ಬೇಕು. ಅಗ್ದಿ ದೇವರ ಮುಂದ ನಿಂತು, ಶಿಸ್ತಾಗಿ ಕೈ ಮುಗಿಯುವ, ಇಲ್ಲಾಂದ್ರ ಕೈ ಚಾಚಿ ಬೇಡಿಕೊಳ್ಳುವ, ಪ್ರಾರ್ಥಿಸುವ ದೇವರಂತೆ ಕಾಣಿಸುವುದೇ ಇಲ್ಲ. ಸುಧಾಮನ ಸ್ನೇಹಿತನಾಗಿ.. ಕೃಷ್ಣದಾನಲ್ಲ.. ಅನ್ನುವ ಭರವಸೆಯಾಗಿಯೇ ಕಾಣ್ತಾನ. ಕಾಡ್ತಾನ.

ನಮ್ಮೊಟ್ಟಿಗೆ ಗುರುತಿಸಿಕೊಳ್ಳಬಹುದಾದ ಮನುಷ್ಯನಾಗಿ ಕಾಣಸ್ತಾನ. ಇದೇ ಕಾರಣಕ್ಕೇ ನಾವು ನಮ್ಮ ಮಕ್ಕಳಿಗೆ ಕೃಷ್ಣಾಷ್ಟಮಿಯ ದಿನ ಕೃಷ್ಣನ ರೂಪ ಧರಿಸುವಂಗ ಮಾಡ್ತೇವಿ. ಕೆಲವೊಮ್ಮೆ ದೇವಕಿಯ ನೋವು, ಅಭಿಮಾನ, ಇನ್ನೂ ಕೆಲವೊಮ್ಮೆ ಯಶೋದೆಯ ಮಮತೆ ಹಾಗೂ ಮಮಕಾರ ಎರಡೂ ಪಾತ್ರಗಳನ್ನೂ ನಿಭಾಯಿಸುವ ನಾವು ಮಾತ್ರ ಕೃಷ್ಣನೊಳಗ ಬೆಣ್ಣೆ ಕದ್ದ ಕಳ್ಳ ಕೃಷ್ಣನನ್ನೇ ಹುಡುಕ್ತೀವಿ.

ಮಗಳಾದ್ರ ರಾಧೆಯೇ ಆಗಲಿ ಅಂತ ಬಯಸ್ತೀವಿ. ಯಾವತ್ತಿಗೂ ಸತ್ಯಭಾಮೆಯಾಗಲಿ, ರುಕ್ಮಿಣಿಯಾಗಲಿ ಅಂತ ಬಯಸುವುದೇ ಇಲ್ಲ. ಯಾಕಂದ್ರ ರಾಧೆ ಪ್ರೀತಿಯನ್ನು ಗೆದ್ದಳು. ಪ್ರೇಮವನ್ನು ಜೀವಿಸಿದಳು. ಕೃಷ್ಣನನ್ನು ಆರಾಧಿಸಲಿಲ್ಲ, ಪಡೆಯಲಿಲ್ಲ, ಪಡೆಯಬೇಕೆಂಬ ಹಟ ಹಿಡಿಯಲಿಲ್ಲ.  ರಾಧೆಯೇ ಕೃಷ್ಣನಾದಳು. ಆ ಪ್ರೀತಿಯ ಭಕುತಿ, ನಮ್ಮನ್ನು ನಾವು ಪ್ರೀತಿಸುತ್ತಲೇ ಕೃಷ್ಣನನ್ನು ಪ್ರೀತಿಸುವುದು ಕಲಿಸಲಿ ಅನ್ನೂದನ್ನೇ ಹೇಳ್ತದ.ಇಲ್ಲಿ ರಾಧೆ ಬಲವಾದ ಪಾತ್ರವಾಗಿ ಕಾಣುತ್ತಾಳೆ. ಭಾವನಾತ್ಮಕವಾಗಿ ಯಾರಿಗೂ ಅಂಟಿಕೊಳ್ಳದಂತೆ, ತನ್ನ ಅಸ್ತಿತ್ವದಲ್ಲಿ ಕೃಷ್ಣನ ಇರುವನ್ನು ಬಿಂಬಿಸುವ ಈ ಪಾತ್ರದ ಗುಣ ಎಲ್ಲರಲ್ಲಿ ಅವಿರ್ಭವಿಸಲಿ ಎಂದೇ ಮಕ್ಕಳಿಗೆ ರಾಧೆಯ ಅಲಂಕಾರ ಮಾಡ್ತೀವಿ.

ಕೃಷ್ಣನ, ರಾಧೆಯ ಅಲಂಕಾರಗಳು ಆತ್ಮಕ್ಕಿಳಿದರೆ ಮಾತ್ರ ಬ್ರಹ್ಮಾಂಡ ಸುತ್ತಿ ಬಂದಂಥ ಚಕ್ಕುಲಿಗಳೂ, ಸಂಸಾರದ ಮೋಹವನ್ನೇ ಪ್ರತಿನಿಧಿಸುವ ಕೋಡುಬಳೆಗಳೂ, ಪ್ರೀತಿಯ ಚೌಕಟ್ಟಿನಲ್ಲಿ ಎಲ್ಲವೂ ಸವಿ ಎನ್ನುವ ಶಂಕರಪೋಳಿಗಳೂ ರುಚಿಕರವೆನಿಸುತ್ತವೆ.

Post Comments (+)