ಶನಿವಾರ, ಸೆಪ್ಟೆಂಬರ್ 24, 2022
24 °C
ಸಂಭ್ರಮ– ಸಡಗರದ ಕೃಷ್ಣ ಜನ್ಮಾಷ್ಟಮಿ

ಕೃಷ್ಣ, ರಾಧೆ ವೇಷ ತೊಟ್ಟು ಮಕ್ಕಳ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಇಲ್ಲಿನ ರೇಣುಕಾನಗರ ಹಾಗೂ ಕೇಶ್ವಾಪುರದ ಬನಶಂಕರಿ ಕಾಲೊನಿ ಸೇರಿದಂತೆ ವಿವಿಧೆಡೆ ಪುಟ್ಟ ಮಕ್ಕಳು ಕೃಷ್ಣ, ರಾಧೆ ಹಾಗೂ ಶ್ರೀರಾಮರ ವೇಷ–ಭೂಷಣ ತೊಟ್ಟು ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. 

ರೇಣುಕಾನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಮುದ್ದು ಮಕ್ಕಳುಮೆರುಗು ತಂದರು. ಮಕ್ಕಳ ಪೋಷಕರು ಸಹ ಯಶೋಧೆ ವೇಷ ಧರಿಸಿ ಉತ್ಸಾಹದಿಂದ ಯಾತ್ರೆಯಲ್ಲಿ ಪಾಲ್ಗೊಂಡರು.

ಕೃಷ್ಣನ ವೇಷ ಧರಿಸಿದ್ದ ಮಕ್ಕಳನ್ನು ಪೋಷಕರು ಭುಜದ ಮೇಲೆ ಕೂರಿಸಿಕೊಂಡಿದ್ದು ವಿಶೇಷವಾಗಿತ್ತು. ಉದ್ಯಮಿ‌ ಕಿರಣ ಹೆಬಸೂರ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಗೌಡಪ್ಪ ಗೌಡ ಇದ್ದರು.

ನೃತ್ಯ ಮಾಡಿದ ಪುಟಾಣಿಗಳು: ಸೇವಾ ಭಾರತಿ ಟ್ರಸ್ಟ್‌ ವತಿಯಿಂದ ಕೇಶ್ವಾಪುರದ ಬನಶಂಕರಿ ಕಾಲೊನಿಯಲ್ಲಿ ಗುರುವಾರ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಹಾಗೂ ಮಹಿಳೆಯರು ಕೋಲಾಟ ಆಡಿದರು. ಭಕ್ತಿಗೀತೆ ಹಾಗೂ ಸಿನಿಮಾ ಗೀತೆಗಳಿಗೆ ಹೆಜ್ಜೆ ಹಾಕಿದರು. 40ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷ ತೊಟ್ಟು ನೋಡುಗರ ಗಮನ ಸೆಳೆದರು.

ಹುಬ್ಬಳ್ಳಿ– ಧಾರವಾಡ ಪಾಲಿಕೆಯ ಉಪಮೇಯರ್‌ ಉಮಾ ಮುಕುಂದ ಅವರು ಕೋಲಾಟ ಆಡಿ ಸಂಭ್ರಮಿಸಿದರು. ಪೋಷಕರು ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಚುರುಮುರಿ ಹಾಕಿದ್ದ ಗಡಿಗೆಯನ್ನು ಒಡೆಯಲಾಯಿತು. ನಂತರ ಕೇಶ್ವಾಪುರದ ಬನಶಂಕರಿ ಕಾಲೊನಿಯ ಸೇವಾ ಸದನದಲ್ಲಿ ತೊಟ್ಟಿಲೋತ್ಸವ ನಡೆಯಿತು.

ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಶಿಲ್ಪಾ ಶೆಟ್ಟರ್‌ ಇದ್ದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.