ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕರ್ನಾಟಕ ವಿವಿ; ಕಾಣಸಿಗದ ನಿರ್ವಹಣೆ

ವಿಶ್ವದರ್ಜೆ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನನೆಗುದಿಗೆ
Published 27 ನವೆಂಬರ್ 2023, 5:24 IST
Last Updated 27 ನವೆಂಬರ್ 2023, 5:24 IST
ಅಕ್ಷರ ಗಾತ್ರ

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯೋದ್ಯಾನ, ಈಜುಕೊಳ ನಿರ್ವಹಣೆ ಕೊರತೆಯಿಂದಾಗಿ ಅಧ್ವಾನವಾಗಿವೆ. ವಿಶ್ವದರ್ಜೆಯ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದೆ.

ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಯೋಜನೆಗಳು ಹಣಕಾಸಿನ ಕೊರತೆಯಿಂದ ಈಡೇರುತ್ತಿಲ್ಲ. ಆಂತರಿಕ ಸಂಪನ್ಮೂಲಗಳಿಂದ ವಿಶ್ವವಿದ್ಯಾಲಯದ ವಿವಿಧ ಚಟುವಟಿಕೆ ನಿರ್ವಹಿಸುವಂತೆ ಸರ್ಕಾರದ ‘ಫರ್ಮಾನು’, ಅನುದಾನ ಕಡಿತದಿಂದ ವಿಶ್ವವಿದ್ಯಾಲಯದ ಸಮಸ್ಯೆಗಳ ಸುಳಿಗೆ ಸಿಲುಕಿದೆ.

ವಿಶ್ವವಿದ್ಯಾಲಯದ ಆವರಣ 900 ಎಕರೆ ವಿಸ್ತೀರ್ಣ ಇದೆ. 44 ಎಕರೆಯಲ್ಲಿ ಆವರಣದಲ್ಲಿ ಸಸ್ಯೋದ್ಯಾನ ಇದೆ. 1963ರಲ್ಲಿ ಸ್ಥಾಪಿತ ಸಸ್ಯ ಕಾಶಿಯು ಈಗ ಪಾಳುಕೊಂಪೆಯಂತಾಗಿದೆ. ಉದ್ಯಾನದ ಸುತ್ತ ಒಂದು ವ್ಯವಸ್ಥಿತ ಬೇಲಿಯೂ ಇಲ್ಲ. ಔಷಧೀಯ, ಸಾಂಪ್ರದಾಯಿಕ, ಅಪರೂಪದ ಗಿಡಗಳು ಇದ್ದವು. ಅವುಗಳಲ್ಲಿ ಈಗ ಬಹುತೇಕ ನಾಶವಾಗಿವೆ. ಕುರುಚುಲು ಪೊದೆ, ಹುಲ್ಲು, ಮುಳ್ಳಿನ ಗಿಡಗಳು ಬೆಳೆದು ನಿಂತಿವೆ.

ಸಸ್ಯ ವಿಜ್ಞಾನ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ವಿಚಾರಗಳನ್ನು ಪ್ರಾಯೋಗಿಕವಾಗಿ ಮನದಟ್ಟು ಮಾಡಿಕೊಳ್ಳಲು ಪೂರಕವಾದ ಪ್ರಯೋಗಾಲಯದಂತೆ ಇರಬೇಕಾಗಿದ್ದ ಉದ್ಯಾನ ಈಗ ಪಾಳುಬಿದ್ದಿದೆ. ಹುಳುಉಪ್ಪಟೆ, ಬಿಡಾಡಿಗಳ ತಾಣವಾಗಿದೆ.

ನಂದಿ, ತೇಗ, ಅರಳಿ, ಮುರುಗ, ದೊಡ್ಡಪತ್ರಿ, ನೆಲ್ಲಿ, ಹುಣಸೆ, ಬಿಳಿ ಮತ್ತಿ ಮೊದಲಾದ ವೃಕ್ಷಗಳಲ್ಲಿ ಕೆಲವು ಇವೆ. ಮರಗಳಿಗೆ ಅಳವಡಿಸಿದ್ದ ಹಲವು ಫಲಕಗಳು ಕಳಚಿ ಬಿದ್ದಿವೆ.

ಸಸ್ಯೋದಾನದಲ್ಲಿ ನಿರ್ಮಿಸಿದ್ದ ಕೆಲ ಕಟ್ಟೆಗಳು ಹಾಳಾಗಿವೆ. ಇನ್ನು ನೀರಿನ ವ್ಯವಸ್ಥೆ ಇಲ್ಲ. ಬೇಲಿಯ ತಂತಿ ತುಂಡು ಮಾಡಿ ಕೆಲವು ಕಡೆ ದಾರಿ ಮಾಡಲಾಗಿದೆ. ಉದ್ಯಾನ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

‘ಸಸ್ಯೋದ್ಯಾನ 44 ಎಕರೆ ಇತ್ತು. ಅದರಲ್ಲಿ ನಾಲ್ಕು ಎಕರೆ ಜಾಗ ಸ್ಮಶಾನಕ್ಕೆ ನೀಡಲಾಗಿದೆ. ನಾಲ್ಕು ದಶಕಗಳ ಹಿಂದೆ ನಿರ್ವಹಣೆಗೆ 40ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ಈಗ ಇಬ್ಬರು ಮಾತ್ರ ಇದ್ದಾರೆ. ಸಸ್ಯೋದ್ಯಾನದ ಕುರಿತು ಅಭಿವೃದ್ಧಿಗೆ ಕ್ರಮ ವಹಿಸುವಂತೆ ಹಲವು ಬಾರಿ ವಿಭಾಗದಿಂದ ಕೋರಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಸಸ್ಯವಿಜ್ಞಾನ ವಿಭಾಗದ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರೀಡಾಂಗಣ ಕಾಮಗಾರಿ ನನೆಗುದಿಗೆ: ವಿಶ್ವವಿದ್ಯಾಲಯದ ಪರಿಸರ ಸ್ನೇಹಿತ ವಿಶ್ವದರ್ಜೆ ಕ್ರೀಡಾಂಗಣ ನಿರ್ಮಿಸುವ ಕಾಮಗಾರಿ ಸುಮಾರು 30 ವರ್ಷದಿಂದ ನನೆಗುದಿಗೆ ಬಿದ್ದಿದೆ.

ಆವರಣದ ಅಂಚಿನ ಭಾಗದಲ್ಲಿರುವ (ಪತ್ರಿಕೋದ್ಯಮ ವಿಭಾಗದಿಂದ ಅನತಿ ದೂರದಲ್ಲಿ) ಈ ಜಾಗದಲ್ಲಿ  ಮದ್ಯಸೇವನೆ, ಧೂಮಪಾನ ನಡೆಯುತ್ತದೆ. ಖಾಲಿ ಬಾಟಲಿ, ಸಿಗರೇಟು ಪೊಟ್ಟಣ, ಗುಟ್ಕಾ ಪೊಟ್ಟಣವನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ.

‘ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಪರಿಸರ ಸ್ನೇಹಿ ವಿಶ್ವದರ್ಜೆ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆಗಿನ ಕುಲಪತಿ ರಾಮೇಗೌಡ ಅವರು ಅಟ್ಲಾಂಟಾದಲ್ಲಿನ ಸ್ಟೇಡಿಯಂ ಮಾದರಿಯಾಗಿಸಿಕೊಂಡಿದ್ದರು. ಸ್ವಲ್ಪ ಕಾಮಗಾರಿ ನಡೆದಿತ್ತು. ಬಿಲ್‌ ಪಾವತಿ ಇತ್ಯಾದಿ ಕಾರಣದಿಂದ ಮೂರು ದಶಕಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ’ ಎಂದು ಎಂಜಿನಿಯರಿಂಗ್‌ ವಿಭಾಗದ ನೌಕರರೊಬ್ಬರು ತಿಳಿಸಿದರು.

‘ಈ ಜಾಗವು ಗಿಡ, ಮರಗಳಿಂದ ಆವೃತ್ತವಾಗಿದೆ. ಈ ಪ್ರದೇಶದ ಏರಿಯು ಪುಡಾರಿಗಳ ಅಡ್ಡೆಯಾಗಿದೆ. ಗಿಡಗಳ ಮರೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಏರಿ ಮೇಲೆ ಮೊಬೈಲ್‌ ಫೋನ್‌ ಕವರ್‌ ಸುಟ್ಟಿರುವುದು, ಬೂದಿ, ಮದ್ಯದ ಖಾಲಿ ಬಾಟಲಿಗಳು ಇವೆ. ವಿಶ್ವವಿದ್ಯಾಲಯವು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಸ್ಯಕಾಶಿಯ ಬೇಲಿಯ ತಂತಿ ತುಂಡರಿಸಿ ಕಾಲು ದಾರಿ ಮಾಡಿರುವುದು 
ಸಸ್ಯಕಾಶಿಯ ಬೇಲಿಯ ತಂತಿ ತುಂಡರಿಸಿ ಕಾಲು ದಾರಿ ಮಾಡಿರುವುದು 
ಸಸ್ಯಕಾಶಿಯ ಅವಸ್ಥೆ 
ಸಸ್ಯಕಾಶಿಯ ಅವಸ್ಥೆ 
ಈಜುಕೊಳದ ತೊಟ್ಟಿಯ ದುಃಸ್ಥಿತಿ 
ಈಜುಕೊಳದ ತೊಟ್ಟಿಯ ದುಃಸ್ಥಿತಿ 
ಈಜುಕೊಳದ ಮೆಟ್ಟಿಲು ಕಟ್ಟೆಯ ಅವಸ್ಥೆ
ಈಜುಕೊಳದ ಮೆಟ್ಟಿಲು ಕಟ್ಟೆಯ ಅವಸ್ಥೆ
ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನನೆಗುದಿಗೆಬಿದ್ದಿರುವ ಪ್ರದೇಶದ ಏರಿಯಲ್ಲಿ ಬೂದಿ
ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನನೆಗುದಿಗೆಬಿದ್ದಿರುವ ಪ್ರದೇಶದ ಏರಿಯಲ್ಲಿ ಬೂದಿ
ಕಾಮಗಾರಿ ನನೆಗುದಿಗೆಬಿದ್ದಿರುವ ಕ್ರೀಡಾಂಗಣ ಪ್ರದೇಶದ ಏರಿಯಲ್ಲಿ ಮದ್ಯದ ಬಾಟಲಿ ಬಿಸಾಕಿರುವುದು
ಕಾಮಗಾರಿ ನನೆಗುದಿಗೆಬಿದ್ದಿರುವ ಕ್ರೀಡಾಂಗಣ ಪ್ರದೇಶದ ಏರಿಯಲ್ಲಿ ಮದ್ಯದ ಬಾಟಲಿ ಬಿಸಾಕಿರುವುದು
ಪ್ರೊ.ಕೆ.ಬಿ.ಗುಡಸಿ
ಪ್ರೊ.ಕೆ.ಬಿ.ಗುಡಸಿ
ತರಗತಿಯಲ್ಲಿ ಕಲಿತ ವಿಷಯವನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಸಸ್ಯೋದ್ಯಾನ ಪೂರಕ. ವಿಶ್ವವಿದ್ಯಾಲಯ ಆವರಣದ ಸಸ್ಯೋದ್ಯಾನ ಹಾಳಾಗಿದೆ ಅದನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು
ಮಂಜುಳಾ ಏಣಗಿ ವಿದ್ಯಾರ್ಥಿನಿ ಸಸ್ಯವಿಜ್ಞಾನ ಅಧ್ಯಯನ ವಿಭಾಗ
ಈಜುಕೊಳವನ್ನು ಪುನರ್‌ ನಿರ್ಮಾಣ ಮಾಡಿ ನೀರಿನ ವ್ಯವಸ್ಥೆ ಕಲ್ಪಿಸಿ ಬಳಕೆಗೆ ಮುಕ್ತಗೊಳಿಸಬೇಕು. ಈಜುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಸ್ಪರ್ಧೆಗೆ ತಯಾರಿ ನಡೆಸಲು ಅನುಕೂಲವಾಗುತ್ತದೆ
ಯಶಸ್‌ರಾಜ್‌, ಕ್ರೀಡಾಪಟು

ಈಜುಕೊಳದ ದುಃಸ್ಥಿತಿ

ಪ್ರಸಾರಾಂಗದ ಸನಿಹದಲ್ಲಿರುವ ಈಜುಕೊಳ ಬಳಕೆಯಾಗುತ್ತಿಲ್ಲ. ಈ ಪ್ರದೇಶ ಗಿಡಗಂಟಿಗಳಿಂದ ಆವರಿಸಿದೆ. ವಿದ್ಯಾರ್ಥಿಗಳ ಈಜು ಅಭ್ಯಾಸದ ತಾಣ ಇದ್ದೂ ಇಲ್ಲವಾಗಿದೆ. ಪ್ರವೇಶ ಬಾಗಿಲು ಕಾಂಪೌಂಡ್‌ ಈಜು ತೊಟ್ಟಿ ಬದಿ ಕೊಳಕ್ಕೆ ಜಿಗಿಯಲು ನಿರ್ಮಿಸಿದ್ದ ಕಟ್ಟೆ ಎಲ್ಲ ಕಡೆ ಗಿಡ ಬಳ್ಳಿಗಳು ಬೆಳೆದಿವೆ. ಕಂಬಿ ಪೈಪುಗಳು ಹಾಳಾಗಿವೆ. ಈ ಪ್ರದೇಶದಲ್ಲಿ ಹಾವು ಚೇಳುಗಳು ಇದ್ದು ಓಡಾಡಲು ಭಯಪಡುವ ಸ್ಥಿತಿ ಇದೆ. ತೊಟ್ಟಿಗೆ (ಕೊಳ) ನೀರು ಹರಿಸದೆ ಹಲವು ವರ್ಷಗಳಾಗಿದೆ. ತೊಟ್ಟಿಯ ಗೋಡೆ ನೆಲ ಹಾಸಿನ ಕೆಲವೆಡೆ ಸಿಮೆಂಟ್‌ ಕಿತ್ತಿದೆ. ‘ಈಜುಕೊಳ ಬಳಕೆಯಾಗದೆ ಹಲವು ವರ್ಷಗಳಾಗಿವೆ. ಕೆಲವು ವರ್ಷಗಳ ಹಿಂದೆ ನೀರಿನ ಸಮಸ್ಯೆಯಿಂದ ಬಂದ್‌ ಮಾಡಿದ್ದರಂತೆ. ಮತ್ತೆ ಬಳಕೆಗೆ ಅವಕಾಶ ನೀಡಿಲ್ಲ ಹೀಗಾಗಿ ಪಾಳುಬಿದ್ದಿದೆ. ಈಜುಕೊಳವನ್ನು ಪುನರ್‌ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು’ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಒತ್ತಾಯಿಸುತ್ತಾರೆ. ‘ಈಜುಕೊಳ ಪುನರ್‌ ನಿರ್ಮಾಣ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ. ಯುಜಿಸಿ (ವಿಶ್ವವಿದ್ಯಾಲಯದ ಅನುದಾನ ಆಯೋಗ) ಅನುದಾನ ಮಂಜೂರಾದರೆ ಪರಿಗಣಿಸುವುದಾಗಿ ಹೇಳಿದ್ಧಾರೆ’ ಎಂದು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಂ.ಪಾಟೀಲ ತಿಳಿಸಿದರು.

ಸಿಎಸ್‌ಆರ್‌ ನಿಧಿಗೆ ಪ್ರಸ್ತಾವ

‘ಸಸ್ಯೋದ್ಯಾನವನ್ನು ಊಟಿಯ ಸಸ್ಯ ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಚಿಂತನೆ ಇದೆ. ಕನಿಷ್ಠ ₹ 5 ಕೋಟಿ ಅಗತ್ಯ ಇದೆ. ವಿಶ್ವವಿದ್ಯಾಲಯದಲ್ಲಿ ಅನುದಾನ ಕೊರತೆ ಇದೆ. ಹೀಗಾಗಿ ಯಾವುದಾದರೂ ಕಾರ್ಪೊರೇಟ್‌ ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಗಾಗಿ ಪ್ರಸ್ತಾವ ಸಲ್ಲಿಸಲು ತಯಾರಿ ಮಾಡಿದ್ದೇವೆ. ಕೇಂದ್ರ ತೋಟಗಾರಿಕೆ ಇಲಾಖೆಗೂ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ಕುಲಪತಿ ಪ್ರೊ.ಕೆ.ಬಿ.ಗುಡಸಿ ತಿಳಿಸಿದರು. ‘ಈಜುಕೊಳ ಈಗಿರುವುದು ಹಾಳಾಗಿದೆ. ಹೊಸದನ್ನು ನಿರ್ಮಾಣ ಮಾಡುವ ಚಿಂತನೆ ಇದೆ. ಈಗಾಗಲೇ ಪ್ರಸ್ತಾವ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸಿಎಸ್‌ಆರ್‌ ನಿಧಿಗಾಗಿ ಕೆಲ ಸಂಸ್ಥೆಗಳ ಜತೆ ಮಾತನಾಡಿದ್ದೇವೆ. ಇನ್ನು ಅಂತಿಮವಾಗಿಲ್ಲ’ ಎಂದರು. ‘ವಿಶ್ವದರ್ಜೆಯ ಸ್ಟೇಡಿಯಂ ಕಾಮಗಾರಿಗೆ ಗುತ್ತಿಗೆದಾರ ಹಣ ಪಾವತಿಸುವಂತೆ ಕೇಳಿದ್ದಾರೆ. ಅದನ್ನು ಬಗೆಹರಿಸಬೇಕಿದೆ. ಇದಕ್ಕೂ ಸಿಎಸ್‌ಆರ್‌ ನಿಧಿ ಅವಲಂಬಿಸಬೇಕಿದೆ. ಪ್ರಯತ್ನಗಳು ನಡೆದಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT