ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ | ಸಮಸ್ಯೆ ಹಲವು: ಪರಿಹಾರ ಶೂನ್ಯ

ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
ಬಸನಗೌಡ ಪಾಟೀಲ
Published 28 ಡಿಸೆಂಬರ್ 2023, 5:28 IST
Last Updated 28 ಡಿಸೆಂಬರ್ 2023, 5:28 IST
ಅಕ್ಷರ ಗಾತ್ರ

ಕುಂದಗೋಳ: ಸಿಮೆಂಟ್ ತಗಡಿನ ಮೂರು ಕೊಠಡಿಗಳು, ಹಾಳಾಗಿರುವ ಫ್ಯಾನು, ಸೊಳ್ಳೆ ಕಾಟ,  ಸ್ನಾನ ಮಾಡುವ ಸ್ಥಳದಲ್ಲಿ ಸ್ವಚ್ಛತೆಯ ಮರೀಚಿಕೆ....

ಇದು ಕುಂದಗೋಳದಲ್ಲಿನ ಬಾಡಿಗೆ ಕಟ್ಟಡದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಸ್ಥಿತಿ.

ಕುಂದಗೋಳದಲ್ಲಿನ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ.
ಕುಂದಗೋಳದಲ್ಲಿನ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ.

ಈ ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿಲ್ಲ. ಸುಮಾರು 10 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ. ವಸತಿ ನಿಲಯದ ಬಾಡಿಗೆ ತಿಂಗಳಿಗೆ ₹9,800. 5ನೇ ತರಗತಿಯಿಂದ 10ನೇ ತರಗತಿಯ ಒಟ್ಟು 45 ವಿದ್ಯಾರ್ಥಿಗಳು ಮೂರು ಕೊಠಡಿಗಳಲ್ಲಿದ್ದಾರೆ.

ಕೊಠಡಿಗಳು ನೋಡಲು ಪುಟ್ಟ ಗೋದಾಮಿನಂತಿವೆ. ಈ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳು ಇರಲು ಮೂರು ಕೊಠಡಿಗಳು, ಒಂದು ಊಟದ ಹಾಲ್, ಪುಟ್ಟ ಅಡುಗೆ ಕೋಣೆ, ರೇಷನ್ ಇಡಲು ಒಂದು, ವಾರ್ಡನ್ ಇರಲು ಒಂದು ಪುಟ್ಟ ಕೊಠಡಿಗಳಿವೆ.

ವಸತಿ ನಿಲಯದ ಮುಂದಿರುವ ಚರಂಡಿ ನೀರು ತುಂಬಿರುವ ಗುಂಡಿ
ವಸತಿ ನಿಲಯದ ಮುಂದಿರುವ ಚರಂಡಿ ನೀರು ತುಂಬಿರುವ ಗುಂಡಿ

ಮಕ್ಕಳ ಭದ್ರತೆಗೆ, ಅಪರಿಚಿತರ ಚಲನವಲನ ಗಮನಿಸಲು ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ ಕೂಡ  ಕಾರ್ಯನಿರ್ವಹಿಸುತ್ತಿಲ್ಲ. ಕಿಟಕಿಗೆ ಜೋಡಿಸಿದ್ದ ಸೊಳ್ಳೆ ತಡೆಯುವ ಪರದೆಯು ಹರಿದಿದೆ. ಕಿಟಕಿಯ ಮೇಲಿನ ತಗಡು ಜೋತು ಬಿದ್ದು ಮಕ್ಕಳಿಗೆ ಚುಚ್ಚುವ ಸಂಭವವಿದೆ. ಅಡುಗೆ ಕೋಣೆಯಲ್ಲಿರುವ ಫ್ರಿಡ್ಜ್ ಬಳಕೆಯಾಗಿ ಬಹಳ ದಿನಗಳಾಗಿದ್ದು ಅದು ‘ಹಲ್ಲಿ’ಯ ವಾಸಸ್ಥಾನವಾಗಿದೆ. ಊಟ ಮಾಡುವ ಹಾಲ್‌ನ ಮೇಲ್ಛಾವಣಿಯ ತಗಡು ಬಿರುಕು ಬಿಟ್ಟಿದೆ. ವಸತಿ ನಿಲಯದ ಮುಂದೆ ಒಂದು ಗುಂಡಿಯಿದ್ದು ಅಕ್ಕ ಪಕ್ಕದ ಮನೆಯವರು ಮತ್ತು ವಿದ್ಯಾರ್ಥಿಗಳೂ ಎಸೆದ ಕಸದಿಂದ, ಮಳೆ ನೀರಿನಿಂದ ತುಂಬಿದೆ.

ಊಟದ ಹಾಲಿನ ಮೇಲ್ಛಾವಣಿಯ ತಗಡು ಬಿರುಕು ಬಿಟ್ಟಿರುವುದು.
ಊಟದ ಹಾಲಿನ ಮೇಲ್ಛಾವಣಿಯ ತಗಡು ಬಿರುಕು ಬಿಟ್ಟಿರುವುದು.

ವಿದ್ಯಾರ್ಥಿಗಳ ವಸ್ತುಗಳನ್ನು ಇಟ್ಟುಕೊಳ್ಳುವ ಟ್ರಂಕ್‌ಗಳಲ್ಲಿ ಅನುಪಯುಕ್ತ ವಸ್ತುಗಳನ್ನು ಇಡಲು ಬಳಸಲಾಗುತ್ತಿದೆ.  ಕೆಲವೊಂದಕ್ಕೆ ಬೀಗ ಹಾಕುವ ವ್ಯವಸ್ಥೆಯೇ ಇಲ್ಲ. ವಿದ್ಯಾರ್ಥಿಗಳು ಬಳಸುವ ಬೆಡ್ ಮತ್ತು ಚಾದರು, ಸೊಳ್ಳೆ ಪರದೆ ಹಳೆಯದಾಗಿದ್ದು ಗಲೀಜಾಗಿವೆ. ವಿದ್ಯಾರ್ಥಿಗಳ ಕೊಠಡಿಯಲ್ಲಿ ತ್ಯಾಜ್ಯ ಸಂಗ್ರಹದ ಡಬ್ಬಿಗಳಿಲ್ಲ. ಪುಸ್ತಕ, ಬ್ಯಾಗ್ ಇಡಲು ರ‍್ಯಾಕ್ ವ್ಯವಸ್ಥೆಯಿಲ್ಲ. ಕುರ್ಚಿ, ಟೇಬಲ್‌ಗಳಂತೂ ಇಲ್ಲಿ ಕಾಣುವುದಿಲ್ಲ. ಗ್ಯಾಸ್ ಸಿಲಿಂಡರ್‌ಗಳನ್ನು ವಸತಿ ನಿಲಯದ ರೂಮಿನೊಳಗಡೆ ಇಡಲಾಗಿದೆ. ನಾಲ್ಕನೇ ಶನಿವಾರ ಮಕ್ಕಳಿಗೆ ಊಟಕ್ಕೆ ಗೋಧಿ ಹುಗ್ಗಿ ನೀಡಲಾಗುವುದು ಎಂದು ಮೆನು ಚಾರ್ಟಲ್ಲಿ ಮಾಹಿತಿ ಇದ್ದರೂ ಊಟಕ್ಕೆ ಅದನ್ನು ನೀಡಲಾಗುತ್ತಿಲ್ಲ.

ಅಡುಗೆ ಕೋಣೆಯಲ್ಲಿರುವ ಫ್ರಿಡ್ಜ್ ಸ್ಥಿತಿ
ಅಡುಗೆ ಕೋಣೆಯಲ್ಲಿರುವ ಫ್ರಿಡ್ಜ್ ಸ್ಥಿತಿ

‘ರಾತ್ರಿ ಸೊಳ್ಳೆಗಳ ಕಾಟ ಜಾಸ್ತಿ, ಸೊಳ್ಳೆ ಬತ್ತಿಯ ವಾಸನೆಯಿಂದ ಕಿರಿಕಿರಿಯಾಗುತ್ತಿದೆ. ಮಳೆ ಬಂದರೆ ಊಟದ ಹಾಲ್ ನೀರಿನಿಂದ ತುಂಬುತ್ತದೆ. ಕೆಲವೊಮ್ಮೆ ಬಾಗಿಲು ಕಿಂಡಿಯಲ್ಲಿ ಮಳೆ ನೀರು ನುಗ್ಗಿ ರೂಮಿನೊಳಗೆ ಬಂದಿದೆ. ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಯಿಲ್ಲ. ಮುಖ್ಯ ರಸ್ತೆಯಿಂದ ಹಾಸ್ಟೇಲ್‌ಗೆ ಬರಲು ಮಣ್ಣಿನ ದಾರಿಯಿದ್ದು ಈ ದಾರಿಯಲ್ಲಿ ಮಳೆಗಾಲದ ಸಂಚರಿಸುವುದು ಕಷ್ಟ’ ಎಂಬುದು ವಿದ್ಯಾರ್ಥಿಗಳ ಅಳಲು.

ಮುರಿದು ಬಿದ್ದಿರುವ ಸಿಸಿ ಕ್ಯಾಮೆರಾ
ಮುರಿದು ಬಿದ್ದಿರುವ ಸಿಸಿ ಕ್ಯಾಮೆರಾ
ಗೋಡೌನ್‌ನಂತಿರುವ ವಿದ್ಯಾರ್ಥಿಗಳು ವಾಸವಿರುವ ಕೊಠಡಿ.
ಗೋಡೌನ್‌ನಂತಿರುವ ವಿದ್ಯಾರ್ಥಿಗಳು ವಾಸವಿರುವ ಕೊಠಡಿ.
ಸೊಳ್ಳೆ ಪರದೆ ಬೆಡ್ ಬೇಡ್ ಶೀಟ್‌ಗಳನ್ನು ಈ ವರ್ಷ ವಿತರಿಸಿಲ್ಲ. ಸ್ವಂತ ಕಟ್ಟಡ ನಿರ್ಮಿಸಲು ಜಾಗ ಮಂಜೂರಾಗಿದೆ. ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುವ ಬಗ್ಗೆ ಆದೇಶ ಬರಬೇಕಿದೆ
ಫರೀದ್‌ಸಾಹೇಬ್ ರೇಶ್ಮಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ.
ವಿದ್ಯಾರ್ಥಿಗಳು ಸ್ನಾನ ಮಾಡುವ ಜಾಗ.
ವಿದ್ಯಾರ್ಥಿಗಳು ಸ್ನಾನ ಮಾಡುವ ಜಾಗ.
ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದಷ್ಟು ಬೇಗ ಸಿಸಿ ಟಿವಿ ಕ್ಯಾಮೆರಾ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಮಾಡಲಾಗುವುದು
ಪ್ರಭಾವತಿ ಕಸ್ತೂರಿ ಹಾಸ್ಟೇಲ್ ವಾರ್ಡನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT