ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಮೌಲ್ಯ ಕೋಟ್ಯಂತರ

ನಮ್‌ ಕೆರಿ ಕಥಿ –19
Last Updated 17 ಫೆಬ್ರುವರಿ 2020, 4:40 IST
ಅಕ್ಷರ ಗಾತ್ರ

ಕೆರೆ ಏನು ಬಿಡಪ್ಪಾ... ಅದರಿಂದ ಈಗೇನು ಪ್ರಯೋಜನ... ಅದನ್ನು ಈಗ ಬಳಸೋಲ್ಲ... ಮನೆಗೆ ನಳದಲ್ಲೇ ನೀರು ಬರುತ್ತದೆ ಎಂದು ನಿರ್ಲಕ್ಷ್ಯ ಮಾಡುವವರಿಗೆ ಕೆರೆಯ ಮೌಲ್ಯ ಅರ್ಥವಾಗುವುದಿಲ್ಲ. ಕೊಳಕಿದೆ, ಅದನ್ನು ಮುಚ್ಚಿಬಿಡೋಣ ಎನ್ನುವವರಿಗೂ ಕೆರೆ ಸಂಸ್ಕೃತಿ ಪರಿಚಯವೂ ಇರುವುದಿಲ್ಲ. ಕೆರೆಗಳಿಗೂ ಒಂದು ಸಾಮಾಜಿಕ ಮೌಲ್ಯವಿದೆ. ಆರ್ಥಿಕವಾಗಿಯೂ ಅವು ಎಲ್ಲಕ್ಕಿಂತ ಮಿಗಿಲೇ. ಅದಕ್ಕೇ ಅವಳಿನಗರದ 19 ಕೆರೆಗಳ ಮೌಲ್ಯವೇ ನಾಲ್ಕು ಸಾವಿರ ಕೋಟಿ ದಾಟುತ್ತದೆ. ಅಂದರೆ, ಇನ್ನು ಜಿಲ್ಲೆಯಲ್ಲಿರುವ 1261 ಕೆರೆಗಳ ಮೌಲ್ಯ ಅದೆಷ್ಟು ಸಾವಿರ ಕೋಟಿ ಆಗಬಹುದು ಊಹಿಸಿ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರಮುಖ 19 ಕೆರೆಗಳ ಬಗ್ಗೆ ಎಂಪ್ರಿ ಮೌಲ್ಯ ಮಾಪನ ಮಾಡಿದೆ. ಕೆರೆಗಳ ಪರಿಸರ ವ್ಯವಸ್ಥೆ ಸೇವೆಗಳ ಆಧಾರದ ಮೇಲೆ ಮಿಲೇನಿಯಮ್‌ ಎಕೊಸಿಸ್ಟಮ್‌ ಅಸೆಸ್‌ಮೆಂಟ್‌ ಮಾದರಿಯಲ್ಲಿ ಇದನ್ನು ಅಂದಾಜಿಸಲಾಗಿದೆ. ಕೆರೆಗಳು ಉದ್ಯಮವಾಗಿ ವಾರ್ಷಿಕವಾಗಿ ಎಷ್ಟು ದುಡಿಯುತ್ತಿವೆ (ಪಟ್ಟಿ ನೋಡಿ) ಎಂಬುದನ್ನೂ ತಿಳಿಸಲಾಗಿದೆ. ಅಂದರೆ, ವರ್ಷದಲ್ಲಿ ಆ ಕೆರೆಯ ನೀರಿನಿಂದ, ಕೃಷಿಯಿಂದ, ಪ್ರಾಣಿಪಕ್ಷಿಗಳಿಗೆ ನೀರು–ಆಹಾರ, ಮೀನುಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಕೆರೆಯಿಂದ ದುಡಿಯುವ ಮೊತ್ತವೇ ಟೋಟಲ್‌ ಎಂಟರ್‌ಪ್ರೈಸ್‌ ವ್ಯಾಲ್ಯೂ (ಟಿಇವಿ). ತಾತ್ಕಾಲಿಕ, ನಿಯಂತ್ರಣ, ಸಾಂಸ್ಕೃತಿಕ ಮತ್ತು ಬೆಂಬಲ ಈ ನಾಲ್ಕು ಪ್ರಮುಖ ಬಳಕೆಯಾಗಿವೆ. ಕೆರೆಗಳು ಒದಗಿಸುವ ‘ಬಳಕೆಯಾಗದ ಮೌಲ್ಯಗಳ ಸೇವೆ’ಗಳನ್ನು ವಿತ್ತೀಯ ಮೌಲ್ಯಮಾಪನ ವಿಧಾನಗಳಾದ ಮಾರುಕಟ್ಟೆ ಬೆಲೆ, ಪ್ರಯಾಣ ವೆಚ್ಚ ಮತ್ತು ಅನಿಶ್ಚಿತ ಮೌಲ್ಯಮಾಪನ ವಿಧಾನಗಳ ಸಹಾಯದಿಂದ ಮೌಲ್ಯೀಕರಿಸಲಾಗಿದೆ.

ಕೆರೆಗಳಿಂದ ಸಿಗುತ್ತಿರುವ ಸೇವೆಗಳು

ಮೀನುಗಳಿಗೆ ಆಹಾರ; ನೀರಾವರಿ ಹಾಗೂ ಕುಡಿಯುವ ಉದ್ದೇಶಕ್ಕೆ ನೀರಿನ ಸಂಗ್ರಹ; ಅಡುಗೆ ಕಟ್ಟಿಗೆ, ತೌಡು; ಜೈವಿಕ ಉತ್ಪನ್ನಗಳು; ಔಷಧೀಯ, ಆಲಂಕಾರಿಕ ಸಸ್ಯಗಳು. ಇದಲ್ಲದೆ, ವಾತಾವರಣದಲ್ಲಿ ಗಾಳಿ, ಉಷ್ಣಾಂಶವನ್ನು ನಿಯಮಿತವಾಗಿರಿಸುವ ಜಲ–ಹಸಿರುವಲಯವಾಗಿರುತ್ತವೆ. ಅಂತರ್ಜಲ ಮರುಪೂರಣಕ್ಕೆ ಆಧಾರ; ಮಾಲಿನ್ಯವನ್ನು ನಿಯಂತ್ರಿಸಿ, ಪೌಷ್ಟಿಕಾಂಶಗಳನ್ನು ಉತ್ತೇಜಿಸುವುದು; ಮಣ್ಣು ಸವಕಳಿ ತಡೆದು, ಭೂರಚನೆ ಬದಲಾಗದಂತೆ ತಡೆಯುವುದು; ಪ್ರವಾಹ ನಿಯಂತ್ರಣಕ್ಕೆ ಅನುಕೂಲಗಳು ಕೆರೆಗಳಿಂದ ಸಿಗುವ ಸೇವೆಗಳು.

ಸಾಂಸ್ಕೃತಿಕವಾಗಿಯೂ ಕೆರೆಗಳು ಧಾರ್ಮಿಕ ತಾಣಗಳಲ್ಲಿ ಅತ್ಯಂತ ಗಣನೀಯ. ಪ್ರವಾಸೋದ್ಯಮ ಮತ್ತು ಮನರಂಜನಾ ಚಟುವಟಿಕೆಗಳಿಗೆ ಅವಕಾಶ; ನೈಸರ್ಗಿಕ ತಾಣದ ಸೊಬಗು; ಶಿಕ್ಷಣ ಮತ್ತು ತರಬೇತಿಗೆ ಅವಕಾಶಗಳನ್ನು ಕಲ್ಪಿಸುತ್ತವೆ. ಜೀವವೈವಿಧ್ಯತೆಯಲ್ಲಿ ಸ್ಥಳೀಯ ಪ್ರಭೇದಗಳನ್ನು ರಕ್ಷಿಸುತ್ತವೆ. ಮಣ್ಣು ನೈಸರ್ಗಿಕವಾಗಿ ಬಲಗೊಳ್ಳಲು ಸಹಕಾರಿ. ಜಲಚರ ಜೀವಿಗಳಿಂದ ಪೌಷ್ಟಿಕಾಂಶ ಸಂಗ್ರಹ, ಸಂಸ್ಕರಣೆ ಪ್ರಕ್ರಿಯೆ ನಡೆಯಲು ನೆರವಾಗುತ್ತವೆ.

ಕೆರೆ ಸಮಿತಿ ಕಾರ್ಯಗತ ಮಾಡಿ

ಧಾರವಾಡ ಜಿಲ್ಲೆಯಲ್ಲಿ 1,700ಕ್ಕೂ ಹೆಚ್ಚು ಕೆರೆಗಳಿವೆ. ಇಷ್ಟು ಕೆರೆಗಳಿವೆ ಎಂಬುದು ಸರ್ಕಾರಿ ಅಧಿಕಾರಿಗಳಿಗೂ ಗೊತ್ತಿಲ್ಲ. ಏಕೆಂದರೆ, ಕೆರೆಗಳ ಮಾಹಿತಿ ಯಾವ ಇಲಾಖೆಯಲ್ಲೂ ಸಮಗ್ರವಾಗಿಲ್ಲ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಯಾರನ್ನೂ ಕೇಳಿದರೂ ಸ್ಪಷ್ಟ ಮಾಹಿತಿ ಸಿಗುವುದೇ ಇಲ್ಲ. ಹೀಗಾಗಿ, ಮೊದಲು ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ಮಾಹಿತಿಯನ್ನು ಒದಗಿಸುವ ಕಾರ್ಯವಾಗಬೇಕು. ಸರ್ವೆ ನಂಬರ್‌, ವ್ಯಾಪ್ತಿ, ಒತ್ತುವರಿ, ಸ್ಯಾಟಲೈಟ್‌ ಚಿತ್ರಗಳೆಲ್ಲ ಆನ್‌ಲೈನ್‌ನಲ್ಲೇ ಈ ಮಾಹಿತಿ ಸಿಗುವ ವ್ಯವಸ್ಥೆ ಆಗಬೇಕು. ಜಿಲ್ಲೆಮಟ್ಟ ಕೆರೆ ಸಮಿತಿ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿದೆ. ಆದರೆ, ಆ ಸಮಿತಿ ಏನು ಮಾಡುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸಮಿತಿಗೆ ಪ್ರತ್ಯೇಕವಾಗಿ ಮುಖ್ಯ ಎಂಜಿನಿಯರ್‌ರೊಬ್ಬರನ್ನು ನೇಮಿಸಬೇಕು. ಸಭೆ ನಡೆಸಿ, ಸಮುದಾಯವನ್ನು ಒಳಗೊಂಡರೆ ಕೆರೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬಹುದು. ನಾವು ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ಉಳಿಸಿಕೊಳ್ಳಬೇಕು. ನೀರಿನ ಕಾಲುವೆಯನ್ನು ಯಥಾಸ್ಥಿತಿಗೆ ತರಬೇಕು. ಇವೆರಡು ಕೆಲಸ ಆಗದಿದ್ದರೆ ಕೆರೆಗೆ ನೀರು ಹರಿಯದೆ, ಒಣಗುತ್ತದೆ. ನಂತರ ಅದನ್ನು ಬಳಸಲು ಯೋಗ್ಯವಲ್ಲ ಎಂದು ಬೇರೆ ಉಪಯೋಗಕ್ಕೆ ತೆಗೆದುಕೊಳ್ಳುತ್ತಾರೆ. ಕೆರೆಗಳನ್ನು ಅಭಿವೃದ್ಧಿಪಡಿಸಲು ಹಣ ಇಲ್ಲ ಎನ್ನುತ್ತಾರೆ. ಆದರೆ, ಎಲ್ಲದ್ದಕ್ಕೂ ಬೆಂಗಳೂರನ್ನು ಹೋಲಿಸಿಕೊಳ್ಳುವ ನಾವು, ಅಲ್ಲಿ ಕೆರೆಯೊಂದರ ಅಭಿವೃದ್ಧಿ ಹತ್ತಾರು ಕೋಟಿ ವ್ಯಯಮಾಡುತ್ತಿದ್ದಾರೆ. ನಮಗೆ ಇಲ್ಲಿ ಕೆರೆಗೆ ಒಂದೆರಡು ಕೋಟಿ ಹಣ ಇಲ್ಲ ಎನ್ನುತ್ತಿದ್ದೇವೆ. ಹಲವು ಇಲಾಖೆಗಳಲ್ಲಿ ಹಣ ಇದೆ. ಕೆರೆಗಳ ಅಭಿವೃದ್ಧಿಗೆ ಕೇಂದ್ರೀಕೃತ ಕೆಲಸ ಆಗದಿರುವುದರಿಂದಲೇ ಈ ಎಲ್ಲ ‘ಇಲ್ಲ’ಗಳ ಸರಮಾಲೆಯನ್ನು ತೋರುತ್ತಿದ್ದಾರೆ. ಸಂಘ–ಸಂಸ್ಥೆಗಳನ್ನು ಒಳಗೊಂಡರೆ ಸಾಕಷ್ಟು ನೆರವು ಆಗುತ್ತದೆ. ಕೆರೆಗಳಿಗೆ ಒಳಚರಂಡಿ ನೀರು ಅತಿಯಾಗಿ ಬರುತ್ತಿದೆ. ಕೆಲಗೇರಿ, ತೋಳನಕೆರೆ, ಉಣಕಲ್‌ ಕೆರೆ ಸೇರಿದಂತೆ ಎಲ್ಲ ಕೆರೆಗಳಿಗೂ ಒಳಚರಂಡಿ ನೀರು, ಕೈಗಾರಿಕೆ ತ್ಯಾಜ್ಯವೂ ಹರಿಯುತ್ತಿದೆ. ಇದನ್ನು ನಿಲ್ಲಿಸಲು ಯಾರೂ ಮುಂದಾಗುತ್ತಿಲ್ಲ. ಅಪಾರ್ಟ್‌ಮೆಂಟ್‌ ಹಾಗೂ ಇತರೆ
ದೊಡ್ಡ ಕಟ್ಟಡಗಳಿಂದ, ಕೈಗಾರಿಕೆಗಳಿಂದ ತ್ಯಾಜ್ಯ ನೀರನ್ನು ಸಂಸ್ಕರಿಸಿಯೇ ಬಿಡಬೇಕೆಂಬ ಕಾನೂನು ಇದ್ದರೂ ಅದು ಅನುಷ್ಠಾನವಾಗಿಲ್ಲ. ಕೆರೆಗಳಿಗೆ ಒಳಚರಂಡಿ ನೀರನ್ನು ಸಂಸ್ಕರಿಸಿಯೇ ಹರಿಸಬೇಕು. ಹೀಗಾಗಿ ಅಗತ್ಯವಾದ ಎಸ್.ಟಿ.ಪಿಗಳನ್ನು ಅಳವಡಿಸಬೇಕು.

- ಒಟಿಲ್ಲೆ ಅನ್ಬನ್‌ಕುಮಾರ್‌, ಸಿಇಒ, ಎವಾಲ್ವ್‌ ಲೈವ್ಸ್‌ ಫೌಂಡೇಷನ್‌

ತ್ಯಾಜ್ಯ ಎಸೆಯುವುದನ್ನು ಮೊದಲು ನಿಲ್ಲಿಸಿ

ಹುಬ್ಬಳ್ಳಿ–ಧಾರವಾಡ ಕೆರೆಗಳನ್ನು ಚಿಕ್ಕಂದಿನಿಂದ ನೋಡಿದ್ದೆ. ಅವುಗಳಲ್ಲಿ ಕೆಲವು ಬಾರಿ ಈಜಾಡಿದ್ದೂ ಅದ. ಆದರೆ, ಇದೀಗ ಕೆರೆಗಳನ್ನು ನೋಡಿದರೆ ನೋವಾಗುತ್ತೆ. ಕೆರೆಗಳು ನಮ್ಮ ಬದುಕಿನ ಅಂಗ ಎಂಬುದನ್ನು ನಾವೆಲ್ಲ ಮರೆತುಹೋಗಿದ್ದೇವೆ. ಮನೆ ತ್ಯಾಜ್ಯವನ್ನು ಕೆರೆಗೇ ಎಸೆಯಲಾಗುತ್ತಿದೆ. ಅದಕ್ಕೇ ಕೆರೆಗಳಲ್ಲಿ ಹೊಲಸೇ ಹೆಚ್ಚಾಗಿದೆ. ನಮ್ಮ ನಾಟಕದ ಸಂಕೀರ್ಣ ‘ಆದಿರಂಗ’ ಕೂಡ ರಾಯನಾಳ ಕೆರೆಯ ಸಮೀಪವೇ, ಅದರ ಮೇಲ್ಭಾಗದಲ್ಲೇ ಇದೆ. ಈ ಕೆರೆ ನೋಡಲು ತುಂಬಾ ಸುಂದರವಾಗಿದೆ. ಆದರೆ ತ್ಯಾಜ್ಯದ್ದೇ ಸಮಸ್ಯೆ. ಈ ಕೆರೆಯನ್ನು ಅಭಿವೃದ್ಧಿ ಮಾಡುವ ಭರವಸೆಯನ್ನು ಶಾಸಕ ಅರವಿಂದ ಬೆಲ್ಲದ ನೀಡಿದ್ದಾರೆ. ಎಲ್ಲ ಕೆರೆಗಳೂ ಅಭಿವೃದ್ಧಿಯಾಗಿ, ನೀರು ನಿಲ್ಲುವಂತಾದರೆ ಇಲ್ಲಿನ ಉಷ್ಣಾಂಶವೂ ಕಡಿಮೆಯಾಗುತ್ತದೆ. ಜನಪ್ರತಿನಿಧಿಗಳು, ಜನರು ಹಾಗೂ ಸಂಘ–ಸಂಸ್ಥೆಗಳು ಸೇರಿದಂತೆ ಎಲ್ಲರೂ ಇತ್ತ ಗಮನಹರಿಸಲೇಬೇಕು.

- ಯಶವಂತ ಸರದೇಶಪಾಂಡೆ, ರಂಗಭೂಮಿ ಕಲಾವಿದ

ನೀರ ನೆಮ್ಮದಿ ಸಾಧಿಸಲೇಬೇಕು

ಧಾರವಾಡದಲ್ಲಿ ಅತಿದೊಡ್ಡ ಏಳು ಗುಡ್ಡಗಳು ಹಾಗೂ ಕೆರೆಗಳು ಇದ್ದವು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ‘ಛೋಟಾ ಮಹಾಬಳೇಶ್ವರ’ ಎಂದೂ ಕರೆಯುತ್ತಿದ್ದರು. ಆದರೆ ಈಗ ಕೆರೆಗಳು ಯಾವೂ ಉಳಿದಿಲ್ಲ. ಅವುಗಳ ಜಾಗದಲ್ಲಿ ಬಡಾವಣೆಗಳು ತಲೆ ಎತ್ತಿವೆ. ರಿಯಲ್‌ ಎಸ್ಟೇಟ್‌ ಸಾಕಷ್ಟು ಉಚ್ಛ್ರಾಯ ಸ್ಥಿತಿಯಲ್ಲಿದೆ. ಮುಂದಿನ ಜನಾಂಗಕ್ಕೆ ನಾವು ಶುದ್ಧ ನೀರು ಕೊಡಲು ಸಾಧ್ಯವಾಗದಿದ್ದರೆ, ಅವರು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಹೀಗಾಗಿ ನಾವು ಜಲಮೂಲಗಳು, ಅವುಗಳ ಜೌಗು ಪ್ರದೇಶಗಳನ್ನು ಉಳಿಸಿಕೊಳ್ಳಬೇಕಿದೆ. ಹೊಸ ಕೆರೆಗಳನ್ನು ಕಟ್ಟದಿದ್ದರೂ ಅಡ್ಡಿ ಇಲ್ಲ. ಇರುವ ಕೆರೆಗಳನ್ನು ಉಳಿಸಿಕೊಳ್ಳಬೇಕು. ನಾವು ಈಗಾಗಲೇ ರಸ್ತೆಗಳನ್ನು ಕಟ್ಟಿದ್ದೇವೆ, ಫ್ಲೈಓವರ್‌ ಸೇರಿದಂತೆ ಹಲವು ದೊಡ್ಡ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ. ಅಂತಹ ನಿರ್ಮಾಣಗಳ ಮೇಲೆ ಬಿದ್ದ ಮಳೆಯ ನೀರನ್ನು ಕೆರೆಗೆ ಹರಿಸುವ ಕೆಲಸವಾಗಬೇಕು. ನೀರ ಹರಿವಿನ ಹಾದಿ ಇದ್ದೇ ಇರುತ್ತದೆ. ಆದನ್ನು ಉಳಿಸಿಕೊಂಡರೆ, ಮನುಷ್ಯನ ಜೊತೆಗೆ ಪ್ರಾಣಿ, ಪಕ್ಷಿ ಹಾಗೂ ಇತರೆ ಜೀವಿಗಳಿಗೆ ಅಗತ್ಯವಾದ ಜೀವಜಲ ಸಿಗುತ್ತದೆ. ಮಳೆ ನೀರು ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಬೇಕು. ಧಾರವಾಡದಲ್ಲಿ ನೂರಾರು ಸಿಹಿ ಬಾವಿಗಳಿದ್ದವು. ಅವುಗಳಲ್ಲಿ ಹಲವು ಇಂದಿಗೂ ಇವೆ. ಅವುಗಳಲ್ಲಿ ನೀರು ಇಂಗಿಸುವ ಕೆಲಸ ಮಾಡಬೇಕು. ಪಾಲಿಕೆಯವರು ಪ್ರತಿ ಮನೆಯಲ್ಲೂ ತಾರಸಿಮೇಲಿನ ಮಳೆ ನೀರು ಸಂಗ್ರಹಿಸಿ ಬಳಸುವುದು ಅಥವಾ ಮರುಪೂರಣಗೊಳಿಸುವುದನ್ನು ಕಡ್ಡಾಯಗೊಳಿಸಬೇಕು. ಈ ಮೂಲಕ ನೀರ ನೆಮ್ಮದಿಯನ್ನು ಸಾಧಿಸಬಹುದು.

- ಹರ್ಷವರ್ಧನ ಶೀಲವಂತ, ಧಾರವಾಡ

ಹಣದಾಸೆ ಬಿಟ್ಟು ಸಂರಕ್ಷಣೆ ಕೆಲಸ ಮಾಡಲಿ

ಭೌಗೋಳಿಕವಾಗಿ ಹುಬ್ಬಳ್ಳಿ ಮಲೆನಾಡಿನ ಸೆರಗಿನಲ್ಲಿದೆ, ಧಾರವಾಡ ಮಲೆನಾಡೇ ಹೌದು. ಹುಬ್ಬಳ್ಳಿ–ಧಾರವಾಡದಲ್ಲಿ ಸಾಕಷ್ಟು ಕೆರೆಗಳಿದ್ದವು. ಧಾರವಾಡಕ್ಕೆ ಹೆಸರಿದ್ದದ್ದೇ ಗುಡ್ಡ–ಕರೆಗಳ ನಾಡು ಎಂದು. ದೊಡ್ಡ ದೊಡ್ಡ ಏಳು ಕೆರೆ, ಏಳು ಗುಡ್ಡಗಳಿದ್ದವು. ಸಣ್ಣಪುಟ್ಟ ಕೆರೆಗಳು ಹಲವಿದ್ದವು. ಹುಬ್ಬಳ್ಳಿಯಲ್ಲಿ ಉಣಕಲ್ ಕೆರೆ, ತಿರುಕಾರಾಮನ ಕೆರೆ, ತೋಳನಕೆರೆ, ಹೆಗ್ಗೇರಿ ಕೆರೆ, ಅಕ್ಕಿಹೊಂಡದ ಕೆರೆ, ಗುಳಕವ್ವನ ಕೆರೆ ಇದ್ದವು. ಇದರಲ್ಲಿ ಮೂರು ಇಲ್ಲವೇ ಇಲ್ಲ. ಹೆಗ್ಗೇರಿ ಕೆರೆಯನ್ನು ಆರ್ಯುವೇದ ಕಾಲೇಜು, ಕ್ರೀಡಾಂಗಣ ಮಾಡಲು ಲಾರಿಗಟ್ಟಲೆ ಮಣ್ಣು ತುಂಬಿದ್ದಾರೆ. ಹೀಗೆ, ಕೆರೆ, ಮಳೆ ನೀರಿನ ಕಾಲುವೆಗಳನ್ನೆಲ್ಲ ಒತ್ತುವರಿ ಮಾಡಿದ್ದಾರೆ. ಹೀಗಾಗಿ ಮಳೆನೀರು ಕೆರೆಗೆ ಹರಿಯದೆ ಮನೆಗಳು, ಅಂಗಡಿಗಳಿಗೆ ತುಂಬುತ್ತಿದೆ. ಕೆರೆಗಳನ್ನು ಪುನಶ್ಚೇತನಗೊಳಿಸಲು ಜನಪ್ರತಿನಿಧಿಗಳು ಹಣದಾಸೆ ಬಿಟ್ಟು ಕೆಲಸ ಮಾಡಿದರೆ, ಜಲಮೂಲಗಳು ಉಳಿಯುತ್ತವೆ.

- ಎಂ. ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT