ಮಂಗಳವಾರ, ಏಪ್ರಿಲ್ 20, 2021
31 °C
ಸಹೃದಯಿ ಮಠಾಧಿಪತಿಗಳ ಒಕ್ಕೂಟದ ಭಕ್ತ ಸಮಾವೇಶದಲ್ಲಿ ಸ್ವಾಮೀಜಿಗಳ ಸಲಹೆ

‘ಜಾತಿ ನಗಣ್ಯವಾಗಲಿ;ಯೋಗ್ಯತೆ ಮಾನದಂಡವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಯಾವುದೇ ಮಠಗಳಿಗೆ ಉತ್ತರಾಧಿಕಾರಿಗಳನ್ನು ನೇಮಕ ಮಾಡುವಾಗ ಆ ವ್ಯಕ್ತಿಯ ಜಾತಿ, ಪರಂಪರೆಗಳಷ್ಟೇ ಮಾನದಂಡವಾಗದೇ ಯೋಗ್ಯತೆ, ಜ್ಞಾನ, ವಿದ್ಯಾರ್ಹತೆಗಳೇ ಆದ್ಯತೆಯಾಗಬೇಕು. ಮಠದ ಆಸ್ತಿ, ಹಣ ಭಕ್ತರದ್ದು, ಸಮಾಜದ್ದು. ಅದನ್ನು ಉಳಿಸಲು ಭಕ್ತರು ಎಚ್ಚರವಹಿಸಬೇಕು’ ಎಂಬ ಸಲಹೆ ಇಲ್ಲಿ ನಡೆದ ಸಹೃದಯಿ ಮಠಾಧಿಪತಿಗಳ ಒಕ್ಕೂಟದ ಭಕ್ತ ಸಮಾವೇಶದಲ್ಲಿ ಸ್ವಾಮೀಜಿಗಳಿಂದ ಕೇಳಿಬಂತು.

ಬೈರಿದೇವರಕೊಪ್ಪದಲ್ಲಿ ಭಾನುವಾರ ಗದುಗಿನ ಶಿವಾನಂದ ಮಠದ ಆಶ್ರಯದಲ್ಲಿ ನಡೆದ ಸಮಾವೇಶದಲ್ಲಿ ವಿವಿಧೆಡೆಗಳಿಂದ ಸಮಾನ ಮನಸ್ಕ ಸ್ವಾಮೀಜಿಗಳು, ಮಾತಾಜಿಗಳು ಪಾಲ್ಗೊಂಡು ಭಕ್ತರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬಸವಣ್ಣನವರ ಆಶಯದಂತೆ ಜಾತಿ,ವರ್ಣ,ವರ್ಗ,ಲಿಂಗ ತಾರತಮ್ಯ ರಹಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಆಧುನಿಕ ಸಮಾಜದಲ್ಲಿಯೂ ಜಾತಿಯ ಗೋಡೆ ಕೆಡವಲಾಗುತ್ತಿಲ್ಲ. ಹೀಗಾಗಿ ಮಠಾಧಿಪತಿಗಳ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸ್ವಾಮೀಜಿಗಳು ಹೇಳಿದರು.

ಗದುಗಿನ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಈಗ ಎಲ್ಲಿ ನೋಡಿದರೂ ಜಾತಿಯೇ ಕಾಣುತ್ತಿದೆ, ಯಾವುದೇ ಮಠಕ್ಕೆ ಉತ್ತರಾಧಿಕಾರಿ ಆರಿಸುವಾಗ ಜ್ಞಾನದ ಮೇಲೆ ಆಯ್ಕೆ ಮಾಡಿರಿ. ತಮ್ಮ ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಅಧಿಕಾರ ಭಕ್ತರದ್ದೇ ಹೊರತೂ ಸ್ವಾಮೀಜಿಯದಲ್ಲ. ಈ ಬಗ್ಗೆ ಭಕ್ತರು ಎಚ್ಚರ ವಹಿಸಿರಿ’ ಎಂದು ಕಿವಿಮಾತು ಹೇಳಿದರು.

ಅಂಬಿಗರ ಚೌಡಯ್ಯ ಪೀಠದ ಶಾಂತಭಿಷ್ಮ ಸ್ವಾಮೀಜಿ,‘ನಾ ಹೆಚ್ಚು ನೀ ಹೆಚ್ಚು ಅನ್ನೋ ಮಠಾಧೀಶರನ್ನು ನೋಡಿದರೆ ವಿಷಾದವೆನಿಸುತ್ತದೆ. ಸಹೃದಯತೆ ಬೇಕು. ಮಠಾಧೀಶರಿಗೆ ನಾವೆಲ್ಲ ಒಂದೇ ಎನ್ನುವ ಭಾವ ಬೇಕು‘ ಎಂದರು.

ವಿಜಯಪುರದ ಯೋಗೀಶ್ವರಿ ಮಾತಾಜಿ ಮಾತನಾಡಿ, ‘ಯಾವುದೇ ಸ್ವಾಮೀಜಿಯ ಜ್ಞಾನ, ವ್ಯಕ್ತಿತ್ವ ನೋಡಿ ಶರಣಾಗ್ರಿ; ಜಾತಿ ನೋಡಬ್ಯಾಡ್ರೀ‘ ಎಂದು ಹೇಳಿದರು.

ಸದಾಶಿವಾನಂದ ಸ್ವಾಮೀಜಿ, ಮಠಾಧಿಪತಿ ತನ್ನ ಬದುಕಿನಿಂದ ಆಗಬೇಕೆ ಹೊರತೂ ಮಠದ ಪರಂಪರೆಯಿಂದಲ್ಲ, ಜಾತಿಯಿಂದಲ್ಲ. ಜಾತಿ ಪದ್ಧತಿ ತಿರುಮಂತ್ರವಾಗಿ ಮತಾಂತರವೂ ನಡೆಯುತ್ತಿದೆ ಎಂದರು.

ಒಕ್ಕೂಟದ ನೇತೃತ್ವ ವಹಿಸಿದ್ದ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ನಿಮ್ಮೂರಿನ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವಾಗ ಕಣ್ಣು, ಕವಿ ತೆರೆದಿಡಿ. ಹಾಗಿದ್ದಾಗ ಮಾತ್ರ ನಿಮ್ಮ ಮಠ ಉಳಿಯುತ್ತದೆ. ಜಾತಿ ಪ್ರೀತಿ ಬೇಡ. ಸಭ್ಯ ಸಮಾಜದ ನಿರ್ಮಾಣವೇ ಸ್ವಾಮೀಜಿಗಳ ಕೆಲಸ. ಸರ್ವಸಂಗ ಪರಿತ್ಯಾಗಿಯಾಗಿರುವ ಸನ್ಯಾಸಿಗೆ ಮತ್ಯಾಕೆ ಆಸ್ತಿ, ಅಂತಸ್ತು? ನೀವು ಪ್ರಶ್ನೆ ಮಾಡದೇ ಇರುವುದರಿಂದಲೇ ಕೆಲವು ಮಠಾಧೀಶರು ಮಠದ ಆಸ್ತಿ, ಹಣ ಕಬಳಿಸುತ್ತಿದ್ದಾರೆ’ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗದಗ ಸದಾಶಿವಾನಂದ ಸ್ವಾಮೀಜಿ, ಮಠಗಳು ರಾಜಕೀಯ ಸೇರಿ ವಾತಾವರಣ ಕೆಡಿಸಿಕೊಳ್ಳಬಾರದು; ಸಮಾಜಮುಖಿಯಾಗಬೇಕು. ಭಕ್ತರ ಸಹಯೋಗದಲ್ಲಿಯೇ ಮುನ್ನಡೆಯಬೇಕು ಎಂದರು.

ಬಂಜಾರ ಪೀಠದ ಸೋಮಲಿಂಗ ಸ್ವಾಮೀಜಿ, ಹಿಪ್ಪರಗಿ ಸಂಗಮೇಶ್ವರದ ಪ್ರಭು ಮಹಾರಾಜರು, ಯೋಗಾನಂದ ಸ್ವಾಮೀಜಿ, ಶಂಕರಲಿಂಗಗುರು, ಶಂಕರ ಶಿವಾಚಾರ್ಯರು, ಕಲಘಟಗಿ ಹನ್ನೆರಡು ಮಠದ ರೇವಣಸಿದ್ಧೇಶ್ವರ ಸ್ವಾಮೀಜಿ, ಮಹಾಲಿಂಗಪುರದ ಸ್ವಾಮೀಜಿ, ಕೊಪ್ಪಳದ ಮಹೇಶ್ವರ ಸ್ವಾಮೀಜಿ, ಕರಿಕಟ್ಟಿಯ ಡಾ.ಬಸವರಾಜ ಸ್ವಾಮೀಜಿ, ಕೌಲಗುಡ್ಡ ಸಿದ್ಧಾಶ್ರಮದ ಅಮರೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧೆಡೆಗಳಿಂದ ಹಲವು ಸ್ವಾಮೀಜಿಗಳು, ಭಕ್ತರು ಪಾಲ್ಗೊಂಡಿದ್ದರು.

ಮುಖಂಡರಾದ ಶಂಕ್ರಣ್ಣ ಮುನವಳ್ಳಿ, ರಾಜಣ್ಣ ಕೊರವಿ ಉಪಸ್ಥಿತರಿದ್ದರು. ಶ್ರದ್ಧಾನಂದ ಸ್ವಾಮೀಜಿ ವಂದಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.