ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಮಾರಸ್ವಾಮಿಗಳ ಸಂದೇಶ ಎಲ್ಲರಿಗೂ ತಲುಪಲಿ’

‘ವಿರಾಟಪುರ ವಿರಾಗಿ’ ಸಿನಿಮಾದ ಪೋಸ್ಟರ್ ಬಿಡುಗಡೆ
Last Updated 3 ಡಿಸೆಂಬರ್ 2022, 15:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣ, ಹದಿನಾರನೇ ಶತಮಾನದಲ್ಲಿ ಯಡಿಯೂರು ಸಿದ್ದಲಿಂಗೇಶ್ವರರು‌ ಸಮಾಜ ಸುಧಾರಿಸುವ ಕೆಲಸ ಮಾಡಿದರು. ‌ಬಳಿಕ, ಆ ಪರಂಪರೆಯನ್ನು ಮುಂದುವರಿಸಿದವರು ಹಾನಗಲ್‌ ಕುಮಾರಸ್ವಾಮಿಗಳು. ಅವರ ಜೀವನ ಸಂದೇಶ ಎಲ್ಲರಿಗೂ ತಲುಪಬೇಕು’ ಎಂದು ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ನಗರದ ಮೂರು ಸಾವಿರ ಮಠದ ಆವರಣದಲ್ಲಿ ಶನಿವಾರ ನಡೆದ ಬಿ.ಎಸ್. ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿಗಳು ಜಾತಿ ಮೀರಿ‌ ಸುಧಾರಣೆಗಾಗಿ ಶ್ರಮಿಸಿದರು. ಅವರ ಕಟ್ಟಿದ ಶಿವಯೋಗಿ‌ ಮಂದಿರದಲ್ಲಿ ಕಲಿತು ಬಂದವರು ನಾವು ಎಂಬುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದರು.

ಹೊಸಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ಹುಬ್ಬಳ್ಳಿ ಹಾನಗಲ್ ಶಿವಯೋಗ ಮಂದಿರ ಹಾಗೂ ವೀರಶೈವ ಮಹಾಸಭಾಕ್ಕೆ ಅವಿನಾಭಾವ ಸಂಬಂಧವಿದೆ‌. ಧರ್ಮ ಜಾಗೃತಿ ಮತ್ತು ಮಕ್ಕಳಿಗೆ ಸಂಸ್ಕಾರ ನೀಡುವ ಸಲುವಾಗಿ 1904ರಲ್ಲಿ ಶಿವಯೋಗ ಮಂದಿರ ಕಟ್ಟಿದ ಅವರು, ನಂತರ ಸಮಾಜದ ಸಂಘಟನೆಗಾಗಿ ವೀರಶೈವ ಮಹಾಸಭಾ ಸ್ಥಾಪಿಸಿದರು’ ಎಂದು ತಿಳಿಸಿದರು.

‘ಸ್ವಂತ ತಾಯಿಯನ್ನು ಸಹ ಭೇಟಿಯಾಗದ ಮಹಾನ್ ವೈರಾಗಿಯಾಗಿದ್ದ ಅವರು, ಪುಟ್ಟರಾಜ ಗವಾಯಿ ಅವರನ್ನು ಆಶೀರ್ವದಿಸಿ ಅವರ ಕೀರ್ತಿ ಬೆಳಗುವಂತೆ ಮಾಡಿದರು. ಅವರು ಹುಟ್ಟದೆ ಇದ್ದಿದ್ದರೆ ಸಮಾಜ ಇಂದು ಅಂಧಕಾರದಲ್ಲಿ‌ ಇರುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಆರ್‌ಟಿಒ ಅಧಿಕಾರಿ ಅಪ್ಪಯ್ಯ ನಾಲತವಾಡಮಠ ಮಾತನಾಡಿ, ‘ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಹಾನಗಲ್ ಕುಮಾರಸ್ವಾಮಿಗಳು. ಅವರ ಜೀವನಾಧಾರಿತ ಸಿನಿಮಾ ನಿರ್ಮಿಸಿರುವುದು ಅತ್ಯಂತ ಪುಣ್ಯದ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಹಾಗೂ ಉದ್ಯಮಿ ವಿವೇಕ ಗಬ್ಬೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT